
ಬೆಂಗಳೂರು (ಅ.10): ನಾನು ಹಿಂದುತ್ವದ ಮತ ಒಡೆಯೋದಿಲ್ಲ. ಹಿಂದೂ ವೋಟ್ ನಾನು ಡಿವೈಡ್ ಮಾಡಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಬಿಜೆಪಿಯೇ ತಮ್ಮ ಮೊದಲ ಆಯ್ಕೆಯಾಗಿದೆ. ಒಂದು ವೇಳೆ 'ನೀನು ಬೇಡಪ್ಪ ಅಯೋಗ್ಯ ಇದ್ಯಾ' ಎಂದು ಹೈಕಮಾಂಡ್ ತೀರ್ಮಾನಿಸಿದರೆ, ಆಗ ತಮ್ಮ ಮುಂದಿನ ಆಯ್ಕೆಗಳು ಮುಕ್ತವಾಗಿವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಶುಕ್ರವಾರ ಮಾತನಾಡಿದ ಅವರು, ತಮ್ಮ ರಾಜಕೀಯ ಭವಿಷ್ಯ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ)ಯೊಂದಿಗಿನ ಸಂಬಂಧದ ಕುರಿತು ಕೆಲವೊಂದು ನಿರ್ಣಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಿಂದುತ್ವದ ಆಧಾರದ ಮೇಲೆ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿರುವ ಅವರು, ಹಿಂದೂ ಮತಗಳ ವಿಭಜನೆಗೆ ತಾವೆಂದೂ ಕಾರಣರಾಗುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ.
ನಾನು ಹಿಂದುತ್ವದ ಮತ ಒಡೆಯೋದಿಲ್ಲ. ಹಿಂದೂ ವೋಟ್ ಡಿವೈಡ್ ಮಾಡಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿಯೂ 'ಬಿಜೆಪಿಯೇ ತಮ್ಮ ಮೊದಲ ಆಯ್ಕೆ' ಎಂದರು. ಆದರೆ, ಒಂದು ವೇಳೆ ನೀನು ಬೇಡಪ್ಪ ಅಯೋಗ್ಯ ಇದ್ಯಾ" ಎಂದು ಹೈಕಮಾಂಡ್ ತೀರ್ಮಾನಿಸಿದರೆ, ಆಗ ತಮ್ಮ ಮುಂದಿನ ಆಯ್ಕೆಗಳು ಮುಕ್ತವಾಗಿವೆ ಎಂದೂ ಸೂಚಿಸಿದ್ದಾರೆ. ತಮ್ಮ ವಾಗ್ದಾಳಿಗಳ ಕುರಿತು ಮಾತನಾಡಿದ ಅವರು, 'ನಾನು ಹೈಕಮಾಂಡ್ ನಾಯಕರಿಗೆ ಇಲ್ಲಿ ತನಕ ಏನು ವಿರುದ್ಧ ಮಾತಾಡಿಲ್ಲ. ಒಂದು ಕುಟುಂಬದ ಬಗ್ಗೆ ಮಾತಾಡಿದ್ದಕ್ಕೆ ಹೊರ ಹಾಕಿದ್ದಾರೆ ಎಂದು ತಮ್ಮ ಅಮಾನತಿನ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
ಪ್ರಸ್ತುತ ಯಡಿಯೂರಪ್ಪ ಅವರ ಕುಟುಂಬವನ್ನು ಹೊರತುಪಡಿಸಿ, ಬಿಜೆಪಿಯ ಉಳಿದ ಎಲ್ಲಾ ಹಿರಿಯ ನಾಯಕರು ತಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಈ ನಾಯಕರು 'ನೀವು ಬಿಜೆಪಿಗೆ ಅಗತ್ಯ ಇದೆ' ಎಂದು ಹೇಳುತ್ತಿದ್ದಾರೆ. ಆದರೆ, 'ಯಡಿಯೂರಪ್ಪ ಅವರಿಗೆ ಬೈಬೇಡಿ, ಅದೊಂದು ಕಡಿಮೆ ಮಾಡಿಕೊಳ್ಳಿ' ಎಂದು ಸಲಹೆ ನೀಡಿದ್ದಾರೆ. ಈ ಸಲಹೆಗೆ ಸ್ಪಂದಿಸಿ 'ಹಂತ ಹಂತವಾಗಿ ಯಡಿಯೂರಪ್ಪಗೆ ಬೈಯ್ಯೋದನ್ನ ಕಡಿಮೆ ಮಾಡಿಕೊಳ್ತಿದ್ದೇನೆ. ತಮ್ಮ ಇತ್ತೀಚಿನ ಶಿವಮೊಗ್ಗ ಭೇಟಿಯಲ್ಲೂ ಅವರ ವಿರುದ್ಧ ಮಾತಾಡಿಲ್ಲ ಎಂದು ಉಲ್ಲೇಖಿಸಿದ್ದು, ಅಲ್ಲಿಯೂ 10-12 ಸಾವಿರ ಜನ ಸೇರಿದ್ದರು ಎಂಬುದನ್ನು ನೆನಪಿಸಿದ್ದಾರೆ.
ಕರ್ನಾಟಕದ ಜನರಿಗೆ ಅನಿಸಿದೆ, ಕಾರ್ಯಕರ್ತರಿಗೆ ಅನಿಸಿದೆ, ಯತ್ನಾಳ್ ಬಿಜೆಪಿಗೆ ಬೇಕು. ನೇರಾನೇರ ಮಾತಾಡ್ತಾನೆ, ಹಿಂದು ನಾಯಕ ಬೇಕು ಎನಿಸಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಪ್ರಸ್ತುತ ರಾಜ್ಯ ಪ್ರವಾಸದ ಕುರಿತು ಮಾತನಾಡಿದ ಅವರು, 'ಹೋದಲ್ಲಿ ಬಂದಲ್ಲಿ ಜನರು ಪ್ರೀತಿ ಮಾಡ್ತಾರೆ. 'ಬರಿ ಮಾತಿಗೆ ಹಿಂದುತ್ವ ಅನ್ನುತ್ತಾರೆ ಯತ್ನಾಳ್ ಎನ್ನೋರಿಗೆ ಈ ಪ್ರವಾಸ ನನ್ನ ಪರೀಕ್ಷೆ ಮಾಡಿಕೊಳ್ಳೋಕೆ ಸಹಾಯಕ ಆಗಿದೆ. ನಾಡಿದ್ದು ಅಂದರೆ ಅಕ್ಟೋಬರ್ 12ರಂದು ಕೆರಗೋಡಿಗೆ ಭೇಟಿ ನೀಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾಗಿ ತಿಳಿಸಿದರು.
ಮುಂದಿನ ಚುನಾವಣೆಯೊಳಗೆ ಅವರು ಪಕ್ಷಕ್ಕೆ ಮರಳಬೇಕು ಎಂದು ಯಡಿಯೂರಪ್ಪ ಕುಟುಂಬ ಹೊರತುಪಡಿಸಿ ಎಲ್ಲ ನಾಯಕರು ಬಯಸುತ್ತಿದ್ದಾರೆ. ವಿಜಯೇಂದ್ರ ಅವರು ರಾಜ್ಯಾದ್ಯಕ್ಷರಾಗಿ ಮುಂದುವರಿಯುವುದಿಲ್ಲ, ಆದ್ದರಿಂದ ಯತ್ನಾಳ್ ಅವರಂತಹವರ ಅಗತ್ಯ ಪಕ್ಷಕ್ಕೆ ಇದೆ ಎಂಬ ಅಭಿಪ್ರಾಯವಿದೆ ಎಂದೂ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹೇಳಿಕೆಗಳು ಬಿಜೆಪಿಯ ಆಂತರಿಕ ರಾಜಕೀಯದ ಕುರಿತು ಮತ್ತಷ್ಟು ಕುತೂಹಲ ಮೂಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.