
ಭಟ್ಕಳ (ಮಾ.9): ಆರ್‌ಎಸ್‌ಎಸ್ ಬಗ್ಗೆ ಕೆಲವರು ಇಲ್ಲಸಲ್ಲದ್ದನ್ನು ಹಲಬುತ್ತಾರೆ. ಆದರೆ ಆರ್‌ಎಸ್‌ಎಸ್ ಕಳೆದ 100 ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆದಿದೆ. ಆರ್‌ಎಸ್‌ಎಸ್ ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ರಾಷ್ಟ್ರಾಭಿಮಾನದ ಚಟುವಟಿಕೆ ತಡೆಯಲು ಸಹ ಸಾಧ್ಯವಿಲ್ಲ ಎಂದು ಮಾಜಿ ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿ ಹಿಂಬದಿಗಿರುವ ಮೈದಾನದಲ್ಲಿ ನಗರ ಹಿಂದೂ ಸಮ್ಮೇಳನ ಸಮಿತಿ ಭಾನುವಾರ ಏರ್ಪಡಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ನಾವು ದುರ್ಬಲರಲ್ಲ. ನಾವು ದುರ್ಬಲರಾದಾಗ ಮಾತ್ರ ನಮ್ಮನ್ನು ತಡೆಯಲು ಸಾಧ್ಯ. ಸಂಘದ ನೂರನೇ ವರ್ಷ ಆಚರಣೆ ನಿಮಿತ್ತ ದೇಶದ ಮೂಲೆ ಮೂಲೆಯಲ್ಲಿ ಹಿಂದೂ ಸಮ್ಮೇಳನ ನಡೆಸಿ, ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಇದೊಂದು ಜಾಗತಿ ದಾಖಲೆಯಾಗಿದೆ. ಹಿಂದೂ ಸಮಾಜ ಒಟ್ಟಾಗಬೇಕು ಎನ್ನುವುದು ಕೋಟ್ಯಂತರ ಜನರ ಆಸೆಯಾಗಿದೆ. ಹಿಂದೂ ಆಚರಣೆ, ಸಂಸ್ಕೃತಿಯನ್ನು ಜಗತ್ತು ಒಪ್ಪಿಕೊಳ್ಳುತ್ತಿದೆ. ನಮ್ಮ ಯೋಗಾಚರಣೆ ಜಗತ್ತೇ ಮಾಡುತ್ತಿದೆ. ಜಾತಿ, ಭಾಷೆ ಅಪಸ್ವರದ ಮಧ್ಯೆಯೂ ಎಲ್ಲೆಲ್ಲೂ ಹಿಂದೂ ಧ್ವನಿ ಕೇಳುತ್ತಿದೆ. ಹಿಂದುತ್ವದ ಕಿಚ್ಚು ಎದ್ದಿದೆ. ಆದರೆ ಜಗತ್ತು ನಮ್ಮನ್ನು ದುರ್ಬಲಗೊಳಿಸಲು ಹುನ್ನಾರ ನಡೆಸುತ್ತಿದೆ ಎಂದು ಹೇಳಿದರು.
ನಮ್ಮ ದೇಶದ ರಕ್ತ ಜಗತ್ತನ್ನೇ ಗೆದ್ದಿದೆ. ಜಗತ್ತಿನ ದುರಹಂಕಾರ ಗೆದ್ದಿದೆ. ಜಗತ್ತನ್ನು ಮೆಟ್ಟಿನಿಂತವರು ನಾವು. ಜಗತ್ತಿಗೆ ಎಲ್ಲವನ್ನೂ ಕೊಟ್ಟಿದ್ದು ಭಾರತ. ಆದರೆ ಸ್ವಾತಂತ್ರ್ಯ ನಂತರದಲ್ಲಿ ಆಗಿದ್ದೇ ಬೇರೆ. ಇತಿಹಾಸ ಏನೇ ಹೇಳಲಿ. ನಮ್ಮದು ಪರಮೋನ್ನತ ಸಂಸ್ಕೃತಿಯಾಗಿದೆ ಎಂದರು.
ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಕೀಳರಿಮೆ ಬಿಡಬೇಕು. ನಮ್ಮಲ್ಲಿ ಮೈಮರೆವು ಹೆಚ್ಚಿದೆ. ನಮ್ಮ ಧರ್ಮಶಾಸ್ತ್ರದಲ್ಲಿ ಎಲ್ಲಿಯೂ ಜಾತಿ ಬಗ್ಗೆ ಹೇಳಿಲ್ಲ. ಪ್ರಸ್ತುತ ದಿನಗಳಲ್ಲಿ ನಡೆಯುವ ಜಾತಿಯ ಸಮಾವೇಶ ಒಂದು ರೀತಿಯ ಪ್ಯಾಶನ್ ಆಗಿದೆ ಎಂದ ಅವರು, ಮುಸ್ಲಿಂ, ಕ್ರೈಸ್ತರಿಂದ ನಮ್ಮ ಹಿಂದೂ ಸಮಾಜವನ್ನು ಏನೂ ಮಾಡಲು ಆಗಲಿಲ್ಲ. ನಮ್ಮವರೇ ನಮ್ಮನ್ನು ಸೋಲಿಸಿದರು ಎಂದು ಶಿವಾಜಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮನಿಗಾಗ ಅನ್ಯಾಯದ ಬಗ್ಗೆ ತಿಳಿಸಿ ಹೇಳಿದ ಅವರು, ಸಮಾಜದ ಓರೆಕೋರೆಯನ್ನು ಸರಿಪಡಿಸಿ ನಾವೆಲ್ಲರೂ ಒಂದು ಎಂದು ಸಾಗಬೇಕು. ಹೀಗಾದಾಗ ಮಾತ್ರ ನಮ್ಮನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹಿಂದುತ್ವ ಎಂದರೆ ಸೆಕ್ಯುಲರ್ ಆಗಿದೆ. ಹಿಂದೂಗಳು ಎಲ್ಲರನ್ನೂ ಸ್ವಾಗತಿಸಿದ್ದಾರೆ. ಜಗತ್ತಿಗೆ ಶಾಂತಿ ಪಾಠ ಮಾಡಿದವರು ನಾವು. ಇಸ್ಲಾಂ ದೇಶದಲ್ಲಿ ಶಾಂತಿ ಇಲ್ಲ. ಅವರ ದೇಶದಲ್ಲೇ ಯುದ್ಧ ನಡೆಯುತ್ತಿದೆ. ಮನುಸ್ಮೃತಿ ಓದದೇ ಇರುವವರು ಗೊತ್ತಿಲ್ಲದೇ ಏನೇನೂ ಒದರುತ್ತಾರೆ. ಜಾತಿಯಿಂದ ಯಾರನ್ನೂ ಗುರುತಿಸಿಲ್ಲ. ಮನೆಯಲ್ಲಿ ಜಾತಿ ಇರಲಿ. ಆದರೆ ಸಮಾಜದ ಕರೆ ಬಂದಾಗ ನಾವೆಲ್ಲರೂ ಹಿಂದೂ ಎಂಬ ಭಾವನೆಯಿಂದ ಒಗ್ಗಟ್ಟಾಗಬೇಕು ಎಂದರು.
ಉಪಸ್ಥಿತಿ ವಹಿಸಿದ್ದ ಬಂಟ್ವಾಳದ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಹಿಂದೂ ಸಂಗಮ ಕಾರ್ಯಕ್ರಮ ನಡೆಸಲಾಗುತ್ತದೆ. ಹಿಂದೂಗಳ ಪರಸ್ಪರ ದ್ವೇಷ, ಅಸೂಯೆ ಬಿಡಬೇಕು. ಎಲ್ಲರ ಬಳಿ ಪ್ರೀತಿಯಿಂದ ನಡೆದುಕೊಳ್ಳಬೇಕು ಎಂದರು.
ಹಿಂದೂ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ರಾಮದಾಸ ಪ್ರಭು ಉಪಸ್ಥಿತರಿದ್ದರು. ಹಿಂದೂ ಸಮ್ಮೇಳನ ಸಮಿತಿಯ ಶ್ರೀಧರ ನಾಯ್ಕ ಆಸರಕೇರಿ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣಾ ನಾಯ್ಕ ಆಸರಕೇರಿ ಸ್ವಾಗತಿಸಿದರು. ಸುರೇಂದ್ರ ಪೂಜಾರಿ ವಂದಿಸಿದರು. ಗಣಪತಿ ಶಿರೂರು ಕಾರ್ಯಕ್ರಮ ನಿರೂಪಿಸಿದರು. ಪವಿತ್ರಾ ನಾಯ್ಕ ವೈಯಕ್ತಿಕ ಗೀತೆ ಹಾಡಿದರು. ಕೊನೆಗೆ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಆಕರ್ಷಕ ಶೋಭಾ ಯಾತ್ರೆ ನಡೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.