ಪಕ್ಷ ಸೂಚನೆಯಂತೆ ಗೆಲ್ಲುವ ಕುದುರೆಗಾಗಿ ಪ್ರತಿಯೊಬ್ಬರು ಅಭ್ಯರ್ಥಿಯಂತೆ ಶ್ರಮಿಸೋಣ| ಬಿಜೆಪಿಯ ರಾಜ್ಯ ಉಪಾಧ್ಯಕ್ಷನಾಗಿ ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ನೀಡುವ ಗುರಿ, ಸವಾಲನ್ನು ತಲುಪುದಕ್ಕೆ ಶ್ರಮಿಸುತ್ತೇನೆ: ಬಿ.ವೈ.ವಿಜಯೇಂದ್ರ|
ಬೀದರ್(ನ.14):ಉಪಚುನಾವಣೆ ನಡೆಯಬೇಕಿರುವ ಬಸವ ಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಗೆಲ್ಲುವ ಕುದುರೆಗೆ ಪಕ್ಷ ಟಿಕೆಟ್ ನೀಡಲಿದೆ ಎಂದು ಸ್ಪಷ್ಟಪಡಿಸಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಕ್ಷ ಟಿಕೆಟ್ ನೀಡುವ ಅಭ್ಯರ್ಥಿಯ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ತಿಳಿಸಿದ್ದಾರೆ.
ಶುಕ್ರವಾರ ಬಸವಕಲ್ಯಾಣಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಜ್ಯ ಉಪಾಧ್ಯಕ್ಷನಾಗಿ ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ನೀಡುವ ಗುರಿ, ಸವಾಲನ್ನು ತಲುಪುದಕ್ಕೆ ಶ್ರಮಿಸುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬೀದರ್ ಜಿಲ್ಲೆಗೆ ಅವಿನಾಭಾವ ಸಂಬಂಧವಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ನನ್ನ ಸ್ಪರ್ಧೆ ಕುರಿತಂತೆ ಅಲ್ಲಲ್ಲಿ ಕೇಳಿ ಬರುತ್ತಿರಬಹುದು. ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ. ಈಗಾಗಲೇ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
undefined
ಮತ್ತೊಂದು ಉಪಚುನಾವಣೆಗೆ ದಾಂಗುಡಿ ಇಟ್ಟು ರಣಕಹಳೆ ಮೊಳಗಿಸಿದ ವಿಜಯೇಂದ್ರ..!
ಇದೇ ವೇಳೆ ಹಣ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡು ಶಿರಾ ಮತ್ತು ರಾಜರಾಜೇಶ್ವರಿ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ ಎಂಬ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಾವು ಎಲ್ಲೂ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ, ಆಮಿಷವೊಡ್ಡಿದರೆ ಮತದಾರ ಬೆಂಬಲಿಸುವುದಿಲ್ಲ ಎಂಬುದನ್ನು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು. ಸೋಲಿನ ಹತಾಶೆಯಿಂದಾಗಿ ಸಿದ್ದರಾಮಯ್ಯ ಹೀಗೆ ಮಾತನಾಡುತ್ತಿದ್ದಾರೆ ಎಂದರು.
ಹೂಮಳೆಯ ಸ್ವಾಗತ
ಬಸವಕಲ್ಯಾಣಕ್ಕೆ ಶುಕ್ರವಾರ ಆಗಮಿಸಿದ ಬಿ.ವೈ.ವಿಜಯೇಂದ್ರ ಅವರನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ಗುಂಡು ರೆಡ್ಡಿ ಅವರ ನೇತೃತ್ವದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ 8 ಜೆಸಿಬಿಗಳಿಂದ ಹೂವಿನ ಸುರಿಮಳೆಗೈಯ್ಯುವ ಮೂಲಕ ಭವ್ಯವಾಗಿ ಸ್ವಾಗತಿಸಲಾಯಿತು. ನಂತರ ವಿಜಯೇಂದ್ರ ಅವರಿಗೆ ಖಡ್ಗ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮೇಗೌಡ, ಸಚಿವ ಪ್ರಭು ಚವ್ಹಾಣ, ಶಾಸಕರಾದ ಅಪ್ಪು ಗೌಡ ಪಾಟೀಲ್ ಇದ್ದರು.