ಕೋರ್ಟ್ ಅನುಮತಿಸಿದರಷ್ಟೇ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್: ಸಿದ್ದರಾಮಯ್ಯ

Published : Oct 14, 2024, 12:43 PM IST
ಕೋರ್ಟ್ ಅನುಮತಿಸಿದರಷ್ಟೇ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್: ಸಿದ್ದರಾಮಯ್ಯ

ಸಾರಾಂಶ

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನಡೆದ ಹಳೇ ಹುಬ್ಬಳ್ಳಿ ಗಲಭೆಯ ವಿಷಯದಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂಬ ಕಾರಣಕ್ಕೆ ಈ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ಕೋರ್ಟ್‌ ಅನುಮತಿ ನೀಡಿದರೆ ಮಾತ್ರ ಪ್ರಕರಣ ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.   

ಹುಬ್ಬಳ್ಳಿ (ಅ.14): ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನಡೆದ ಹಳೇ ಹುಬ್ಬಳ್ಳಿ ಗಲಭೆಯ ವಿಷಯದಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂಬ ಕಾರಣಕ್ಕೆ ಈ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ಕೋರ್ಟ್‌ ಅನುಮತಿ ನೀಡಿದರೆ ಮಾತ್ರ ಪ್ರಕರಣ ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾತನಾಡಿ, ಉದ್ದೇಶಪೂರ್ವಕವಾಗಿ, ಸುಳ್ಳು ಪ್ರಕರಣಗಳು, ಹೋರಾಟಗಳಿಗೆ ಸಂಬಂಧಿಸಿ ಪ್ರಕರಣಗಳನ್ನು ದಾಖಲಿಸಿದ್ದರೆ, ಅವುಗಳನ್ನು ಪರಿಶೀಲಿಸುವುದಕ್ಕಾಗಿಯೇ ಸಂಪುಟ ಉಪಸಮಿತಿ ರಚಿಸಲಾಗುತ್ತದೆ. ಇದು ಎಲ್ಲ ಸರ್ಕಾರದಲ್ಲೂ ಅಸ್ತಿತ್ವದಲ್ಲಿರುತ್ತದೆ ಎಂದರು.

ಹೊಸದೇನಲ್ಲ: ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಪರಿಶೀಲಿಸಿದ ಸಮಿತಿಯು ಅದು ಸುಳ್ಳು ಪ್ರಕರಣ ಎಂದು ತಿಳಿಸಿತ್ತು. ಆ ವರದಿಯು ಸಚಿವ ಸಂಪುಟಕ್ಕೆ ಬಂದಿದ್ದು, ನಾವೆಲ್ಲರೂ ಅದನ್ನು ಒಪ್ಪಿಕೊಂಡಿದ್ದೇವೆ. ಬಿಜೆಪಿ ಆಡಳಿತವಿದ್ದಾಗಲೂ ಅನೇಕ ಅಪರೂಪದ ಪ್ರಕರಣಗಳನ್ನು ಹಿಂಪಡೆದಿತ್ತು. ಇದು ಹೊಸದೇನಲ್ಲ ಎಂದು ಸಮರ್ಥಿಸಿಕೊಂಡರು. ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಬಿಜೆಪಿಯು ಸುಳ್ಳು ವಿಷಯಗಳ ಮೇಲೆ ಹಾಗೂ ನಿರಾಧಾರ ಆರೋಪದ ಮೇಲೆಯೇ ಯಾವಾಗಲೂ ಪ್ರತಿಭಟಿಸುತ್ತ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯರದ್ದು ದುರಹಂಕಾರಿ ವರ್ತನೆ: ಪ್ರಲ್ಹಾದ್‌ ಜೋಶಿ ಕಿಡಿ

ಜೋಶಿ ಭಯೋತ್ಪಾದಕ: ಕಾಂಗ್ರೆಸ್‌ನ್ನು ಭಯೋತ್ಪಾದಕರ ಪಕ್ಷ ಎಂದು ಕರೆದಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಜೋಶಿನೇ ಭಯೋತ್ಪಾದಕ ಎಂದು ಉತ್ತರಿಸುವ ಮೂಲಕ ತಿರುಗೇಟು ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ರಾಮಲಿಂಗಾರೆಡ್ಡಿ, ಎಚ್‌.ಕೆ. ಪಾಟೀಲ, ಸಂತೋಷ ಲಾಡ್, ಶಾಸಕ ಎನ್‌.ಎಚ್‌. ಕೋನರಡ್ಡಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ ಇದ್ದರು.

ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಮುಖ್ಯಮಂತ್ರಿಯಾಗಿಯೇ ಇದ್ದಾರೆ‌‌, ಮುಖ್ಯಮಂತ್ರಿ ಆಗಿಯೇ ಮುಂದುವರೆಯುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ಕೆಲ ನಾಯಕರ ಅಭಿಮಾನಿಗಳು, ಅವರ ನಾಯಕರು ಸಿಎಂ ಆಗಲಿ ಎಂದು ಘೋಷಣೆ ಕೂಗುತ್ತಾರೆ. ಹಾಗೇ ಘೋಷಣೆ ಕೂಗೋದರಲ್ಲಿ ತಪ್ಪೆನಿಲ್ಲ ಎಂದರು. ಬಿಜೆಪಿ ಪಕ್ಷದಿಂದ ಮತ್ತೊಂದು ಸುತ್ತಿನ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ತಮ್ಮಲ್ಲೇ ನೆಲೆ ಇಲ್ಲ. ಬಿಜೆಪಿಯಲ್ಲಿ 20 ಗುಂಪುಗಳಿವೆ. ಮೊದಲು ತಮ್ಮ ಮನೆ ಸರಿ ಪಡಿಸಿಕೊಳ್ಳಲಿ ಬೇರೆಯವರದ್ದೇನು ನೋಡ್ತಾರೆ. ಶೇ.40 ಭ್ರಷ್ಟಾಚಾರದಿಂದ ಜನರು ಅವರನ್ನು, ಬಿಜೆಪಿಯನ್ನು ಕಿತ್ತೆಸೆದಿದ್ದಾರೆ. ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ ಎಂದು ವ್ಯಂಗ್ಯವಾಡಿದರು.

ವಿಜಯೇಂದ್ರ ಪುರೋಹಿತನಾ? ಜ್ಯೋತಿಷಿನಾ?: ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಹೋರಾಟಗಳು ನಡೆದ ಸಂದರ್ಭದಲ್ಲಿ ನಡೆದ ಗಲಭೆ ಕೇಸ್‌ಗಳನ್ನು ಕಾಲ ಕಾಲಕ್ಕೆ ಹಿಂಪಡೆದಿದ್ದಾರೆ. ಎಲ್ಲ ಸರ್ಕಾರಗಳು ಕೇಸ್ ಹಿಂಪಡೆದಿವೆ. ಸಿ.ಟಿ.ರವಿ ಕೇಸ್ ಹಿಂಪಡೆದಿದ್ದೇವೆ, ಅದನ್ನು ಹೇಳಲ್ವಾ ಬಿಜೆಪಿಯವರು?. ಗಲಭೆಗಳಾದಾಗ ಅಮಾಯಕರ ಮೇಲೆ ಕೇಸ್ ದಾಖಲಾಗಿರುತ್ತವೆ. ಗಲಭೆ ಮಾಡಿದವರು ಓಡಿ ಹೋಗಿರ್ತಾರೆ, ಸಿಕ್ಕಿ ಹಾಕಿಕೊಂಡಿರಲ್ಲ. ಗಲಭೆ ನೋಡುತ್ತ ನಿಂತವರು ಸಿಕ್ಕಿಹಾಕಿಕೊಂಡಿರುತ್ತಾರೆ. ರೈತ ಹೋರಾಟ, ವಿದ್ಯಾರ್ಥಿ ಹೋರಾಟ, ಜನರ ಹೋರಾಟಗಳ ಕೇಸ್‌ನ್ನು ಎಲ್ಲ ಸರ್ಕಾರಗಳು ಹಿಂಪಡೆದಿರುತ್ತವೆ. ಅದೆ ರೀತಿ ಹುಬ್ಬಳ್ಳಿ ಗಲಭೆ ವಾಪಸ್ ಪಡೆದಿರಬಹುದು ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌