ಬೀದರ್ ಜಿಲ್ಲಾ ಬಿಜೆಪಿ ವತಿಯಿಂದ "ಮತದಾರರಿಗೆ ಉತ್ತರಿಸಿ" ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ತಿಳಿಸಿದ್ದಾರೆ.
ಬೀದರ್(ಫೆ.09): ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು ಈವರೆಗೆ ತಮ್ಮ-ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂಬುದು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಒತ್ತಾಯಿಸಿ ಬೀದರ್ ಜಿಲ್ಲಾ ಬಿಜೆಪಿ ವತಿಯಿಂದ "ಮತದಾರರಿಗೆ ಉತ್ತರಿಸಿ" ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗುವ ಹೊಸ್ತಿಲಲ್ಲಿ ನಿಂತಿದೆ. ಕ್ಷೇತ್ರದ ಮತದಾರರು ಹಲವಾರು ಭರವಸೆಗಳು, ನಿರೀಕ್ಷೆಗಳನ್ನು ಇಟ್ಟುಕೊಂಡು ನಿಮಗೆ ವಿಧಾನಸಭೆಗೆ ಕಳಿಸಿಕೊಟ್ಟಿದ್ದಾರೆ. ಆದರೆ ಅಧಿಕಾರಕ್ಕೆ ಬಂದ ಈ ಅವಧಿಯಲ್ಲಿ ನಿಮ್ಮ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ನೀವು ಅಧಿಕಾರಕ್ಕೆ ಬಂದ ಮೇಲೆ ಏನು ಕೆಲಸ ಮಾಡಿರುವಿರಿ? ಎಂಬ ವಿವರ ಕ್ಷೇತ್ರದ ಮತದಾರರಿಗೆ ನೀಡುವುದು ನಿಮ್ಮ ಕರ್ತವ್ಯ. ಹೀಗಾಗಿ ೧೦ಕ್ಕೂ ಹೆಚ್ಚು ಪ್ರಶ್ನೆಗಳ ಮುಖಾಂತರ ಮತದಾರರಿಗೆ ಉತ್ತರಿಸಿ ಎಂಬ ವಿನೂತನ ಅಭಿಯಾನ ನಡೆಸಲಾಗುತ್ತಿದೆ. ಮತದಾರರ ಧ್ವನಿಯಾಗಿ ನಾವು ಆಡಳಿತಾರೂಢ ಶಾಸಕರಿಗೆ ಉತ್ತರವನ್ನು ಕೇಳುತ್ತಿದ್ದೇವೆ ಎಂದು ಸೋಮನಾಥ ಪಾಟೀಲ್ ಹುಡಗಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
undefined
ಪರಿಹಾರ ಬಿಡುಗಡೆ ವಿಳಂಬಕ್ಕೆ ಸಚಿವ ಈಶ್ವರ ಖಂಡ್ರೆ ನಿರ್ಲಕ್ಷವೇ ಕಾರಣ: ಭಗವಂತ ಖೂಬಾ
ಇದುವೆರೆಗೆ ಕ್ಷೇತ್ರಕ್ಕೆ ತಂದಿರುವ ಅನುದಾನ ಎಷ್ಟು? ಬಿಡುಗಡೆಯಾದ ಅನುದಾನ ಎಷ್ಟು? ಯಾವ ಅಭಿವೃದ್ಧಿ ಕೆಲಸ ಮಾಡಲಾಗಿದೆ? ಸಾರ್ವಜನಿಕರಿಗೆ ಮೂಲಸೌಕರ್ಯ ಕಲ್ಪಿಸಲು ಕೈಗೊಂಡ ಕ್ರಮಗಳೇನು? ಚುನಾವಣೆಯ ವೇಳೆಗೆ ಕೊಟ್ಟ ಭರವಸೆ ಈಡೇರಿಸಿದ್ದೆಷ್ಟು? ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೊಡುತ್ತಿರುವ ಅನ್ನ ಭಾಗ್ಯದ ೫ ಕೆಜಿ ಅಕ್ಕಿ ಹೊರತುಪಡಿಸಿ ನೀವೆಷ್ಟು ಕೆಜಿ ಅಕ್ಕಿಯನ್ನು ವಿತರಣೆ ಮಾಡಿರುವಿರಿ ಎಂಬುದು ಸೇರಿದಂತೆ ಹಲವು ಸ್ಥಳೀಯ ಸಮಸ್ಯೆಗಳ ಕುರಿತಂತೆ ಶಾಸಕರಿಗೆ ಪತ್ರ ಬರೆದು ಸಮಗ್ರ ಮಾಹಿತಿ ಕೇಳಲಾಗುವುದು ಎಂದು ವಿವರಿಸಿದ್ದಾರೆ.
ಬೀದರ್ ಉತ್ತರ ವಿಧಾನಸಭೆ ಶಾಸಕರೂ ಆಗಿರುವ ಪೌರಾಡಳಿತ ಸಚಿವ ರಹೀಮ್ ಖಾನ್ ಅವರ ಚಿದ್ರಿಯಲ್ಲಿರುವ ನಿವಾಸಕ್ಕೆ ತೆರಳಿ ಮತದಾರರಿಗೆ ಉತ್ತರಿಸಿ ಎಂಬ ಪತ್ರ ಸಲ್ಲಿಸಲಾಗುತ್ತದೆ. ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಬೀದರ್ ನಗರದ ಡಾ.ಅಂಬೇಡ್ಕರ್ ವೃತ್ತದ ಹತ್ತಿರವಿರುವ ಪ್ರವಾಸಿ ಮಂದಿರದಿಂದ ಸಚಿವ ರಹೀಮ್ ಖಾನ್ ಅವರ ಮನೆಗೆ ತೆರಳಲಾಗುವುದು. ಜಿಲ್ಲಾ ಕೇಂದ್ರ ಬೀದರ್ ಪ್ರಗತಿಗೆ ರಹೀಮ್ ಖಾನ್ ಮಾಡಿದ್ದೇನು? ಎಂಬ ಪ್ರಶ್ನೆ ಸಹ ಕೇಳಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ, ರಾಜ್ಯದ ಅರಣ್ಯ ಸಚಿವರೂ ಆದ ಭಾಲ್ಕಿ ವಿಧಾನಸಭೆ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರ ಮನೆಗೆ ತೆರಳಿ ಪತ್ರ ಸಲ್ಲಿಸಿ ಮಾಹಿತಿ ಕೊಡುವಂತೆ ಒತ್ತಾಯಿಸಲಾಗುವುದು. ಶನಿವಾರ ಸಂಜೆ ೪ಗಂಟೆಗೆ ಭಾಲ್ಕಿ ಪಟ್ಟಣದ ಗಾಂಧಿ ವೃತ್ತದಿಂದ ಸಚಿವ ಈಶ್ವರ ಖಂಡ್ರೆ ಮನೆಗೆ ತೆರಳಿ ಪತ್ರವನ್ನು ಸಲ್ಲಿಸಿ ವಿವರ ಕೊಡಲು ಆಗ್ರಹಿಸಲಾಗುವುದು. ಈ ಸಂದರ್ಭದಲ್ಲಿ ಪಕ್ಷದ ಚುನಾಯಿತ ಪ್ರತಿನಿಧಿಗಳು, ಪ್ರಮುಖರು, ಮುಖಂಡರು ಹಾಗೂ ಪದಾಧಿಕಾರಿಗಳು ಹಾಜರಿರುತ್ತಾರೆ ಎಂದು ಸೋಮನಾಥ ಪಾಟೀಲ್ ತಿಳಿಸಿದ್ದಾರೆ.