
ಬೆಂಗಳೂರು (ಅ.07): ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ನಿರ್ಭೀತವಾಗಿ ವಾದ ಮಂಡಿಸುವ, ನ್ಯಾಯದ ಪರವಾಗಿ ನಿಲ್ಲುವ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರ ವ್ಯಕ್ತಿತ್ವವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ ಎಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 75 ವರ್ಷ ತುಂಬಿರುವ ನ್ಯಾ.ವಿ.ಗೋಪಾಲಗೌಡ ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಗ್ರಂಥ ‘ಮಾನವತಾವಾದಿ’ ಬಿಡುಗಡೆಗೊಳಿಸಿ ಮಾತನಾಡಿ, ಗೋಪಾಲಗೌಡ ಎಂದರೆ ಬಡವರ ಧ್ವನಿ ಇದ್ದಂತೆ.
ಪ್ರಾಮಾಣಿಕತೆ, ಪರಿಶ್ರಮ, ಬದ್ಧತೆಗೆ ಮತ್ತೊಂದು ಹೆಸರು. ಇವರಿಂದ ನಾನು ಸ್ಫೂರ್ತಿ ಪಡೆದಿದ್ದೇನೆ ಎಂಬುದಕ್ಕಿಂತ ಹೆಚ್ಚಾಗಿ ಇವರು ನನಗೆ ಒಬ್ಬ ಮಾರ್ಗದರ್ಶಕರಿದ್ದಂತೆ ಎಂದರು. ಆಂಧ್ರಪ್ರದೇಶ ಪ್ರತ್ಯೇಕ ರಾಜ್ಯ ವಿಚಾರ ಸೇರಿದಂತೆ ಜಟಿಲವಾದ ಅನೇಕ ಕಾನೂನು ಸಮಸ್ಯೆಗಳಿಗೆ ವಿ.ಗೋಪಾಲಗೌಡರು ಪರಿಹಾರ ಕಲ್ಪಿಸಿದ್ದಾರೆ. ಇವರ ನೈತಿಕತೆ, ಪ್ರಾಮಾಣಿಕತೆ ಪಯಣ ಪ್ರತಿಯೊಬ್ಬ ವಕೀಲರಿಗೂ ಮಾರ್ಗದರ್ಶಿಯಾಗಿದೆ. ಅಪಾರ ಜ್ಞಾನ ಸಂಪತ್ತು ಜನರ ಕಷ್ಟಗಳಿಗೆ ಮಣಿಯುವ ಮನಸ್ಸು ಇವರದ್ದಾಗಿದೆ ಎಂದರು. ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಸ್ನೇಹಮಯಿ ಗೋಪಾಲಗೌಡರು ರೈತ ಪರ ಕಾಳಜಿ ಉಳ್ಳವರು.
ಜನ ಸಾಮಾನ್ಯರ ಧ್ವನಿಯಾದವರು. ಕೆಲವೊಮ್ಮೆ ನನ್ನೊಂದಿಗೂ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಅವರ ಆ ಮಾತಿನ ಹಿಂದೆ, ಜನರ ಕಷ್ಟಗಳು ಕಾಣುತ್ತಿದ್ದವು. ಸುಪ್ರೀಂ ಕೋರ್ಚ್‌ನಲ್ಲಿದ್ದುಕೊಂಡು ಹೋರಾಟ ಮಾಡುವುದು ಸುಲಭದ ಮಾತಲ್ಲ. ಅವರು ಸಮಾಜಕ್ಕೆ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದರು. ನ್ಯಾಯಮೂರ್ತಿ ವಿ. ಗೋಪಾಲಗೌಡ ಮಾತನಾಡಿ, ನನ್ನ ಕೊನೆಯ ಉಸಿರು ಇರುವವರೆಗೂ ಜನಪರ ಹೋರಾಟ ಮುಂದುವರೆಸುತ್ತೇನೆ. ಸಮಾಜದಲ್ಲಿ ಇಂದಿಗೂ ಇರುವ ಅನೇಕ ತಾರತಮ್ಯಗಳು, ಅಸಮಾನತೆಯನ್ನು ನೋಡಿಕೊಂಡು ಕುಳಿತುಕೊಳ್ಳಲು ಆಗುವುದಿಲ್ಲ. ಸಮಾಜದಲ್ಲಿ ಬದಲಾವಣೆ, ಎಲ್ಲಾ ವರ್ಗಗಳ ಅಭಿವೃದ್ಧಿಗಾಗಿ ನನ್ನ ಸೇವೆ ಮುಂದುವರೆಯುತ್ತದೆ ಎಂದು ಹೇಳಿದರು.
ಬಡ ರೈತ ಕುಟುಂಬದಲ್ಲಿ ಹುಟ್ಟಿ, ವಿದ್ಯುತ್ ಇಲ್ಲದೆ ದೀಪದ ಕೆಳಗೆ ಓದಿದೆ. ಪಾಲಕರು ತಮ್ಮ ಜೀವನ ತ್ಯಾಗ ಮಾಡಿ ಶಿಕ್ಷಣವನ್ನು ಕೊಡಿಸಿದರು. ಬಡತನ, ಕಷ್ಟವನ್ನು ಅನುಭವಿಸಿಕೊಂಡು ಬಂದ ನನಗೆ ಜನ ಸಾಮಾನ್ಯರ ಕಷ್ಟದ ಅರಿವಿದೆ. ಹೀಗಾಗಿ, ಜೀವನ ಗುಣಮಟ್ಟ ಸುಧಾರಣೆಗೆ ಹೋರಾಡುತ್ತಿರುತ್ತೇನೆ ಎಂದು ನ್ಯಾ. ಗೋಪಾಲಗೌಡ ನುಡಿದರು. ಕಾರ್ಯಕ್ರಮದಲ್ಲಿ ‘ಮಾನವತಾವಾದಿ ನ್ಯಾಯಮೂರ್ತಿ ವಿ.ಗೋಪಾಲ ಗೌಡ’ ಎಂಬ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಯಿತು. ನಿವೃತ್ತ ನ್ಯಾ.ಎನ್.ಸಂತೋಷ್ ಹೆಗ್ಡೆ, ನ್ಯಾ. ಎ.ಕೆ.ಪಟ್ನಾಯಕ್, ಮಾಜಿ ಸಚಿವ ಜಿ.ಟಿ.ದೇವೇಗೌಡ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.