
ಬೆಂಗಳೂರು(ಏ.04): ಮಾತುಕತೆಗಾಗಿ ದೆಹಲಿಗೆ ಬನ್ನಿ ಎಂದು ದೂರವಾಣಿ ಮೂಲಕ ಆಹ್ವಾನ ನೀಡಿದ ಬಳಿಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಈಶ್ವರಪ್ಪ ಅವರು ಬುಧವಾರ ರಾತ್ರಿ ದೆಹಲಿಗೆ ತಲುಪಿದರೂ ಅಮಿತ್ ಶಾ ಅವರು ಭೇಟಿ ಮಾಡಲು ಬಯಸಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ಅವರು ದೂರವಾಣಿ ಮೂಲಕ ಈಶ್ವರಪ್ಪ ಅವರೊಂದಿಗೆ ಮಾತನಾಡಿ ಸ್ಪರ್ಧೆಯ ನಿರ್ಧಾರದಿಂದ ಹಿಂದೆ ಸರಿಯುವಂತೆ ಸೂಚಿಸಿದರೂ ಒಪ್ಪಿರಲಿಲ್ಲ. ಹೀಗಾಗಿ, ಚರ್ಚೆ ನಡೆಸಲು ದೆಹಲಿಗೆ ಬನ್ನಿ ಎಂದಿದ್ದರು. ಅದಕ್ಕೆ ಈಶ್ವರಪ್ಪ ಅವರೂ ಒಪ್ಪಿದ್ದರು.
ದಿಲ್ಲಿಗೆ ಕರೆಸಿ ಭೇಟಿಯಾಗದೆ ಕಳಿಸಿದರು: ಈಶ್ವರಪ್ಪ
ಆದರೆ, ಈಶ್ವರಪ್ಪ ಅವರು ಅಮಿತ್ ಶಾ ಅವರು ಮಾತುಕತೆಗೆ ಆಹ್ವಾನಿಸಿರುವುದನ್ನು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಬಹಿರಂಗಪಡಿಸಿದ್ದಲ್ಲದೆ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ದೆಹಲಿಯಲ್ಲಿ ಅಮಿತ್ ಶಾ ಸೇರಿದಂತೆ ಪಕ್ಷದ ವರಿಷ್ಠರನ್ನೇ ಮನವೊಲಿಸಿ ಬರುತ್ತೇನೆ. ಒಂದು ವೇಳೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಬದಲಿಸಿದರೆ ಮಾತ್ರ ಸ್ಪರ್ಧೆಯ ನಿರ್ಧಾರದಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದರು.
ಒಂದು ವೇಳೆ ಮಾತುಕತೆಯ ಬಳಿಕವೂ ಈಶ್ವರಪ್ಪ ಅವರು ಹಿಂದೆ ಸರಿಯದಿದ್ದರೆ ಹೈಕಮಾಂಡ್ ದುರ್ಬಲ ಎಂಬ ಸಂದೇಶ ರವಾನೆಯಾಗಬಹುದು ಎಂಬ ಕಾರಣಕ್ಕಾಗಿ ವರಿಷ್ಠರು ಮಾತುಕತೆ ನಡೆಸುವುದೇ ಬೇಡ ಎಂಬ ನಿಲವಿಗೆ ಬಂದರು ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.