
ಬೆಂಗಳೂರು (ಸೆ.28): ಅಮೆರಿಕ ಭಾರತದ ಉತ್ಪನ್ನಗಳ ಮೇಲೆ ವಿಪರೀತ ಸುಂಕ ವಿಧಿಸುತ್ತಿರುವುದು ಕಳವಳಕಾರಿಯಾಗಿದ್ದು, ಈ ಕುರಿತು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಭಾರತದ ಮೇಲೆ ಅಮೆರಿಕ ವಿಪರೀತ ಸುಂಕ ಹೇರುತ್ತಿದೆ. ಈಗ ನಮ್ಮ ಔಷಧೋತ್ಪನ್ನಗಳ ಮೇಲೂ ಸುಂಕದ ಪ್ರಮಾಣ ಹೆಚ್ಚಿಸಲಾಗಿದೆ. ಚೈನಾ ಮತ್ತು ವಿಯೆಟ್ನಾಂ ಎರಡೂ ದೇಶಗಳು ಉತ್ಪಾದನೆ ಮತ್ತು ರಫ್ತಿನಲ್ಲಿ ನಮಗಿಂತ ಮುಂದಿವೆ.
ಅವುಗಳ ಮೇಲೆ ಅಮೆರಿಕ ಕ್ರಮವಾಗಿ ಶೇ.30 ಮತ್ತು ಶೇ.19ರಷ್ಟು ಮಾತ್ರ ಸುಂಕ ವಿಧಿಸಿದೆ. ಆದರೆ, ಭಾರತದ ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕ ಹೇರಿದ್ದಾರೆ. ಇದರಿಂದ ದೇಶಕ್ಕೆ ಹೊಡೆತ ಬೀಳುವುದರಲ್ಲಿ ಅನುಮಾನವಿಲ್ಲ ಎಂದರು. ಪ್ರಧಾನಿ ಮೋದಿ ಅವರು ಈ ಹಿಂದೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಎಂದು ಪ್ರಚಾರ ಮಾಡಿದ್ದರು. ಆದರೆ, ಆಗ ಜೋ ಬೈಡನ್ ಗೆಲುವು ಸಾಧಿಸಿದರು. ಅವರು ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಗೆದ್ದ ಟ್ರಂಪ್ ಭಾರತದ ಮೇಲೆ ಅವೈಜ್ಞಾನಿಕವಾಗಿ ಸುಂಕ ವಿಧಿಸುತ್ತಿದ್ದಾರೆ. ಅದರ ದುಷ್ಪರಿಣಾಮ ನಾವು ಎದುರಿಸಬೇಕಾಗಿದೆ ಎಂದು ಹೇಳಿದರು.
ಅಮೆರಿಕದ ಎಚ್1ಬಿ ವೀಸಾ ಮೇಲೂ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸಿರುವುದು ಅಘಾತಕಾರಿ. ಇಂತಹ ತೀರ್ಮಾನಗಳಿಂದ ನಮ್ಮ ಐಟಿ ಸೇವೆಗಳು, ಎಫ್‌ಡಿಐ ಮೇಲೆ ಪರಿಣಾಮ ಬೀರಲಿದೆ. ಈಗ ಫಾರ್ಮಾ ಉತ್ಪನ್ನಗಳ ಮೇಲೂ ದುಬಾರಿ ಸುಂಕ ವಿಧಿಸಲಾಗಿದೆ. ಇದು ಕರ್ನಾಟಕ ಮಾತ್ರವಲ್ಲದೆ ದೇಶದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.