
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ(ಮೇ.04): ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ನಾಯಕರ ಮತಪ್ರಚಾರದಲ್ಲಿ ಮಾತಿನ ವಾಗ್ಯುದ್ಧ ಬಹಳ ಜೋರಾಗಿ ಕಂಡುಬರುತ್ತಿದೆ. ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾದಗಿರಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು.
ಮೋದಿಗೆ ಗುಜರಾತ್‌ನಂತೆ, ಕರ್ನಾಟಕ ನನ್ನ ಕರ್ಮಭೂಮಿ: ಎಂ.ಖರ್ಗೆ
ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಪರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತಯಾಚನೆ ಮಾಡಿದರು. ಸುರಪುರದ ಕಾಂಗ್ರೆಸ್ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತಾನಾಡಿದ ಖರ್ಗೆ ಭಾಷಣದುದಕ್ಕೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದರು. ಗುಜರಾತ್ ಚುನಾವಣೆ ಸಂದರ್ಭದಲ್ಲಿ ನಾನು ಗುಜರಾತ್ ಎಲೆಕ್ಷನ್ ಪ್ರಚಾರಕ್ಕೆ ಹೋಗಿದ್ದೆ, ಆಗ ಅಲ್ಲಿ ಪಿಎಂ ಮೋದಿ ಇದು ನನ್ನ ರಾಜ್ಯ, ನನ್ನ ಪಕ್ಷ ಗೆಲ್ಲಿಸಿ ಅಂತ ಹೇಳಿದ್ರು, ಅದು ನನ್ನನ್ನು ಉದ್ದೇಶಿಸಿ ಮಾತನಾಡಿದ್ದರು. ಈಗ ನಾನು ಕೇಳ್ತೆನೆ ಕರ್ನಾಟಕ ನನ್ನ ಕರ್ಮಭೂಮಿ, ನಾನು ಇದೇ ಜಿಲ್ಲೆಯವನು. ಇದೇ ಕರ್ಮಭೂಮಿ ಇಲ್ಲಿಯೇ 50 ವರ್ಷ ಆರಿಸಿ ಬಂದಿದ್ದೀನಿ, ಕಾಂಗ್ರೆಸ್ ಪಕ್ಷಕ್ಕೆ ಈಗ ನಾನು ಅಧ್ಯಕ್ಷನಾಗಿದ್ದೇನೆ. ನಮ್ಮ ಪಾರ್ಟಿ ನನ್ನ ಆಯ್ಕೆ ಮಾಡಿದೆ, ಈ ಅಧ್ಯಕ್ಷ ಸ್ಥಾನ ಎಲ್ಲರಿಗೂ ಸಿಕ್ಕಿಲ್ಲ. ಗಾಂಧೀಜಿ, ನೆಹರು, ಪಟೇಲರಂಥ ಅನೇಕ ಜನ ಹಿರಿಯರು ಕಾಂಗ್ರೆಸ್ ಪಾರ್ಟಿ ಅಧ್ಯಕ್ಷರಾಗಿದ್ದರು. ನಿಮ್ಮ ಆಶೀರ್ವಾದದಿಂದ ಆ ಸ್ಥಾನ ನನಗೆ ಸಿಕ್ಕಿದೆ. ರಾಜಾ ವೆಂಕಟಪ್ಪ ನಾಯಕ ಆರಿಸಿ ತಂದಾಗ ಮಾತ್ರ ನನ್ನ ಮರ್ಯಾದೆ ಕಾಪಾಡಿದಂಗೆ. ಕರ್ಮಭೂಮಿಯಲ್ಲಿ ಮರ್ಯಾದೆ ಇಲ್ಲದಿದ್ರೆ ಹೇಗೆ..? ಗುಜರಾತ್ ನಲ್ಲಿ ಹೇಗೆ ಮೋದಿಯವ್ರನ್ನ ಆರಿಸಿ ತಂದ್ರೋ, ಅದೇ ರೀತಿ ನೀವು ಕರ್ನಾಟಕದಲ್ಲಿ ಕಾಂಗ್ರೆಸ್ ತರಬೇಕು ಎಂದರು.
ಅಪಘಾತಗೊಂಡು ಆಸ್ಪತ್ರೆ ಸೇರಿದರೂ, ಆಂಬುಲೆನ್ಸ್‌ನಲ್ಲಿ ಬಂದು ಪ್ರಚಾರ ಮಾಡಿದ ಬಾಬುರಾವ್ ಚಿಂಚನಸೂರು!
ಮೋದಿ ಹಾಗೂ ಶಾ ಅವ್ರು ಗಲಭೆಗೆ ಫ್ಲಾನ್..!: ಖರ್ಗೆ ಕಿಡಿ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಟ ಮಾಡ್ತಿದ್ದಾರೆ. ಅದರಲ್ಲೂ ಬಿಜೆಪಿ ಪರವಾಗಿ ಪಿಎಂ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿಯೇ ಠಿಕಾಣಿ ಹೂಡಿ ಕೇಸರಿ ಪಡೆ ಗೆಲುವಿಗೆ ರಣತಂತ್ರ ಹಾಗೂ ಮಿಂಚಿನ ಪ್ರಚಾರ ಮಾಡ್ತಿದ್ದಾರೆ. ಪಿಎಂ ಮೋದಿ ಪದೇ ಪದೇ ರಾಜ್ಯಕ್ಕೆ ಭೇಟಿಗೆ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಇಂದು ಸುರಪುರ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಪಿಎಂ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ. ಕೆಲವರು ಗದ್ದಲ ಮಾಡಲು ಹೋಗ್ತಿದ್ದಾರೆ. ಮೋದಿ ಹಾಗೂ ಶಾ ಪ್ಲಾನ್ ಮಾಡಿದ್ದಾರೆ ಅನಿಸ್ತದೆ. ಕರ್ನಾಟಕದ ಜನರು ಶಾಂತಿಪ್ರಿಯರು. ಎಲ್ಲರನ್ನೂ ತಗೆದುಕೊಂಡು ಹೋಗುವ ಜನ, ಕಾಂಗ್ರೆಸ್ ಬಂದ್ರೆ ಎಲ್ಲರೂ ಕೂಡಿ ಕೆಲಸ ಮಾಡ್ತೇವೆ. ಆದ್ರೆ ಕೆಲವರು ಬಂದು ದಂಗೆ ಆಗುತ್ತರ ಅಂತ ಹೇಳ್ತಿದ್ದಾರೆ. ಗಲಭೆ, ದಂಗೆ ಅವೆಲ್ಲಾ ಗುಜರಾತ್ ಹಾಗೂ ಉ.ಪ್ರದೇಶ ಆಗಿದೆ. ಆದ್ರೆ ನಮಲ್ಲಿ ಆಗಲ್ಲ, ಆದ್ರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆಗಿದೆ. ಹೀಜಾಬ್ ಹಾಕಬೇಡಿ ಅಂತಾರೆ, ಆಕಳು(ಗೋವು) ವಿಚಾರದಲ್ಲಿ ರಾಜಕೀಯ ಮಾಡ್ತಾರೆ ಎಂದು ಮೋದಿ ಹಾಗೂ ಶಾ ವಿರುದ್ದ ಕೆಂಡಕಾರಿದರು.
ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್ ನಾವು ಹೆದರಲ್ಲ: ಖರ್ಗೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಶಾಸಕ ಪ್ರಿಯಾಂಕ ಖರ್ಗೆ ಮಗ ನಾಲಾಯಕ್ ಎಂಬ ಪದ ಬಳಕೆ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದರು. ಇದಕ್ಕೆ ಎಲೆಕ್ಷನ್ ಕಮಿಷನ್ ಶಾಸಕ ಪ್ರಿಯಾಂಕ ಖರ್ಗೆ ನೋಟಿಸ್ ನೀಡಿದೆ. ಸುರಪುರ ಬಹಿರಂಗ ಸಮಾವೇಶದಲ್ಲಿ ಉಲ್ಲೇಖಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾವು ಅದಕ್ಕೆಲ್ಲಾ ಹೆದರುವವರಲ್ಲ. ಪ್ರಿಯಾಂಕ್ ಖರ್ಗೆ ತನ್ನ ತತ್ವ ಬೀಡುವುದಿಲ್ಲ, ತತ್ವದ ಮೇಲೆ ನಡಿತಾನೆ. ನಾವು ಬುದ್ಧ, ಬಸವ, ಅಂಬೇಡ್ಕರ್ ತತ್ವದ ಮೇಲೆ ನಡೆಯುವವರು ಎಂದರು. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಸೋನಿಯಾ ಗಾಂಧಿಗೆ ವಿಷಕನ್ಯೆ ಎಂಬ ಪದ ಬಳಕೆ ಮಾಡಿದ್ದರೂ, ಆದ್ರೆ ಅವರಿಗೆ ಡಿಸಿ ನೋಟಿಸ್ ನೀಡಿದ್ದಾರೆ. ಒಬ್ಬರಿಗೆ ಡಿಸಿ ನೋಟಿಸ್ ನೀಡಿದ್ರೆ, ಇನ್ನೊಬ್ಬರಿಗೆ ದೆಹಲಿಯಿಂದ ನೋಟಿಸ್ ನೀಡ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.