ಖಾತೆ ಹಂಚಿಕೆ ಆಯ್ತು, ಸಿಎಂಗೀಗ ಹೊಸ ತಲೆನೋವು!

Published : Jan 27, 2021, 07:24 AM ISTUpdated : Jan 27, 2021, 07:30 AM IST
ಖಾತೆ ಹಂಚಿಕೆ ಆಯ್ತು, ಸಿಎಂಗೀಗ ಹೊಸ ತಲೆನೋವು!

ಸಾರಾಂಶ

ಸಿಎಂಗೆ ಈಗ ಜಿಲ್ಲಾ ಉಸ್ತುವಾರಿ ಸವಾಲು, ಮತ್ತೆ ಪ್ರಾಬ್ಲಂ| ಎಲ್ಲ ಸಚಿವರಿಗೂ ಉಸ್ತುವಾರಿ ಜಿಲ್ಲೆ ಬೇಕು| 33 ಸಚಿವರಿಗೆ ರಾಜ್ಯದಲ್ಲೇ ಇರೋದೇ 30 ಜಿಲ್ಲೆ!| ಕೆಲವರಿಂದ ನಿರ್ದಿಷ್ಟಜಿಲ್ಲೆಗೆ ಲಾಬಿ| ಖಾತೆಗಳಂತೆ ಉಸ್ತುವಾರಿ ಕೂಡ ಅದಲು-ಬದಲು ಸಂಭವ

ಬೆಂಗಳೂರು(ಜ.27): ಕೇವಲ ಐದು ದಿನಗಳಲ್ಲಿ ನಾಲ್ಕು ಬಾರಿ ಖಾತೆಗಳ ಮರುಹಂಚಿಕೆ ಮಾಡುವ ಮೂಲಕ ಸಚಿವರ ಅಸಮಾಧಾನ ಬಹುತೇಕ ಶಮನಗೊಳಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಇನ್ನು ಜಿಲ್ಲಾ ಉಸ್ತುವಾರಿ ನೇಮಕ ಮಾಡುವ ಬಿಸಿ ತಟ್ಟಲಿದೆ.

ನೂತನ ಸಚಿವರಾದ ಆರ್‌.ಶಂಕರ್‌, ಸಿ.ಪಿ.ಯೋಗೇಶ್ವರ್‌, ಎಂ.ಟಿ.ಬಿ.ನಾಗರಾಜ್‌, ಉಮೇಶ್‌ ಕತ್ತಿ, ಮುರುಗೇಶ್‌ ನಿರಾಣಿ, ಅರವಿಂದ್‌ ಲಿಂಬಾವಳಿ ಹಾಗೂ ಎಸ್‌.ಅಂಗಾರ ಅವರಿಗೆ ಜಿಲ್ಲಾ ಉಸ್ತುವಾರಿ ನೀಡಬೇಕಾಗಿದೆ. ಈ ಪೈಕಿ ಶಂಕರ್‌, ಯೋಗೇಶ್ವರ್‌, ಕತ್ತಿ, ನಿರಾಣಿ ಹಾಗೂ ನಾಗರಾಜ್‌ ಅವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡುವುದು ಸುಲಭದ ಮಾತಲ್ಲ. ಖಾತೆಗಳಂತೆ ಜಿಲ್ಲಾ ಉಸ್ತುವಾರಿಯಲ್ಲೂ ಅದಲು ಬದಲಾಗುವ ಸಾಧ್ಯತೆಯಿದೆ.

ಸದ್ಯ ರಾಜ್ಯದಲ್ಲಿರುವ ಜಿಲ್ಲೆಗಳ ಸಂಖ್ಯೆ 30. ಮುಖ್ಯಮಂತ್ರಿ ಸೇರಿ ಸಂಪುಟದಲ್ಲಿ 33 ಸಚಿವರಿದ್ದಾರೆ. ಹೇಗೆಯೇ ಹಂಚಿಕೆ ಮಾಡಿದರೂ ಮೂವರು ಸಚಿವರಿಗೆ ಉಸ್ತುವಾರಿ ಜವಾಬ್ದಾರಿ ನೀಡಲು ಸಾಧ್ಯವಿಲ್ಲ. ಆದರೆ, ಎಲ್ಲ ಸಚಿವರೂ ಸಹಜವಾಗಿಯೇ ತಮಗೆ ಬೇಕಾದದ್ದು ಸಿಗದಿದ್ದರೂ ಕನಿಷ್ಠ ಯಾವುದಾದರೊಂದು ಜಿಲ್ಲೆಯ ಉಸ್ತುವಾರಿ ಬಯಸುವಂಥವರೇ. ಹೀಗಾಗಿ, ಯಾವ ಸಚಿವರು ಉಸ್ತುವಾರಿಯಿಂದ ಹೊರಗುಳಿಯುವಂತಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಬೆಂಗಳೂರು ಉಸ್ತುವಾರಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮುಂದುವರೆಯುವ ಸಾಧ್ಯತೆ ನಿಚ್ಚಳವಾಗಿದೆ. ಬೇರೆ ಯಾರೊಬ್ಬರಿಗೇ ಕೊಟ್ಟರೂ ಇನ್ನಿತರರಿಗೆ ಮುನಿಸು ಉಂಟು ಮಾಡುವುದರಲ್ಲಿ ಎರಡು ಮಾತಿಲ್ಲ.

ಸಚಿವ ಶಂಕರ್‌ ಅವರು ಹಾವೇರಿ ಜಿಲ್ಲೆಯ ಉಸ್ತುವಾರಿ ನೀಡುವಂತೆ ಈಗಾಗಲೇ ಬೇಡಿಕೆ ಇಟ್ಟಿದ್ದಾರೆ. ಆ ಜಿಲ್ಲೆಯನ್ನು ಒಟ್ಟು ಮೂವರು ಸಚಿವರು ಪ್ರತಿನಿಧಿಸುತ್ತಿದ್ದಾರೆ. ಹಾಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಮತ್ತು ಉಡುಪಿ ಜಿಲ್ಲೆಯ ಉಸ್ತುವಾರಿ ಹೊಂದಿದ್ದಾರೆ. ಹಾವೇರಿ ಬಿಟ್ಟು ಕೊಡುವುದಕ್ಕೆ ಅಷ್ಟುಸುಲಭವಾಗಿ ಒಪ್ಪಲಿಕ್ಕಿಲ್ಲ. ಅದೇ ಜಿಲ್ಲೆಯ ಮತ್ತೊಬ್ಬ ಸಚಿವ ಬಿ.ಸಿ.ಪಾಟೀಲ್‌ ಅವರು ಹಿಂದೆ ಉಸ್ತುವಾರಿ ಕೇಳಿದಾಗಲೂ ಅವರಿಗೆ ಹಾವೇರಿ ನೀಡಲಿಲ್ಲ. ಇದೀಗ ಖಾತೆ ಹಂಚಿಕೆಯಲ್ಲಿ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಭಾವಿಸಿರುವ ಶಂಕರ್‌ ಅವರು ಹಾವೇರಿ ಜಿಲ್ಲಾ ಉಸ್ತುವಾರಿ ನೀಡುವ ಮೂಲಕ ಅನ್ಯಾಯ ಸರಿಪಡಿಸುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ. ಅಂತಿಮವಾಗಿ ಹಾವೇರಿ ಯಾರ ಪಾಲಾಗಲಿದೆ ಎಂಬುದು ಕುತೂಹಲಕರವಾಗಿದೆ.

ಇನ್ನು ಯೋಗೇಶ್ವರ್‌ ಅವರು ರಾಮನಗರ ಜಿಲ್ಲೆ ಪ್ರತಿನಿಧಿಸುವವರು. ಸದ್ಯ ಆ ಜಿಲ್ಲೆ ಉಸ್ತುವಾರಿಯಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇದ್ದಾರೆ. ಮೂಲತಃ ಅದೇ ಜಿಲ್ಲೆಗೆ ಸೇರಿದವರು. ಆಡಳಿತಾರೂಢ ಬಿಜೆಪಿ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಎದುರಿಸಲು ಯೋಗೇಶ್ವರ್‌ ಅವರಿಗೆ ರಾಮನಗರ ಉಸ್ತುವಾರಿ ನೀಡಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಈಗಿನ ಉಸ್ತುವಾರಿ ಅಶ್ವತ್ಥನಾರಾಯಣ ಅವರು ಮೃದು ಧೋರಣೆ ಹೊಂದಿದ್ದಾರೆ ಎಂಬ ಆರೋಪವೂ ಇದೆ. ಆದರೆ, ಶಿವಕುಮಾರ್‌ ಮತ್ತು ಕುಮಾರಸ್ವಾಮಿ ಅವರೊಂದಿಗೆ ಉತ್ತಮ ಸ್ನೇಹ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಗೇಶ್ವರ್‌ ಅವರಿಗೆ ಉಸ್ತುವಾರಿ ನೀಡುವ ಬಗ್ಗೆ ಬಿಜೆಪಿ ಪಾಳೆಯದಲ್ಲಿಯೇ ಅನುಮಾನವಿದೆ.

ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಯಾಗಿ ಸದ್ಯ ಕಂದಾಯ ಸಚಿವ ಆರ್‌.ಅಶೋಕ್‌ ಅವರಿದ್ದಾರೆ. ನೂತನ ಸಚಿವ ಎಂ.ಟಿ.ಬಿ.ನಾಗರಾಜ್‌ ಅವರು ಸಹಜವಾಗಿಯೇ ಆ ಜಿಲ್ಲೆಯ ವ್ಯಾಪ್ತಿಗೆ ಸೇರುವುದರಿಂದ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಅಲ್ಲದಿದ್ದರೂ ಬೆಂಗಳೂರು ಗ್ರಾಮಾಂತರ ಸಿಕ್ಕಿದೆಯಲ್ಲ ಎಂಬ ಸಮಾಧಾನ ಹೊಂದಿರುವ ಅಶೋಕ್‌ ಅವರು ಸುಲಭವಾಗಿ ಬಿಟ್ಟು ಕೊಡುತ್ತಾರೆಯೇ ಎಂಬುದು ಸ್ಪಷ್ಟತೆಯಿಲ್ಲ.

ಹಿರಿಯ ಸಚಿವರಾದ ಉಮೇಶ್‌ ಕತ್ತಿ ಅವರಿಗೆ ತಾವು ಬಯಸುವ ಬೆಳಗಾವಿ ಉಸ್ತುವಾರಿ ಸಿಗುವ ಪರಿಸ್ಥಿತಿ ಇಲ್ಲವೇ ಇಲ್ಲ. ಜಿಲ್ಲಾ ಉಸ್ತುವಾರಿ ಸಂಬಂಧ ಉದ್ಭವಿಸಿದ್ದ ತಿಕ್ಕಾಟದಿಂದಾಗಿಯೇ ರಮೇಶ್‌ ಜಾರಕಿಹೊಳಿ ಕಾಂಗ್ರೆಸ್‌ ತೊರೆದು ಬಂದು ಇದೀಗ ಮತ್ತೆ ಬಿಜೆಪಿಯಲ್ಲಿ ಉಸ್ತುವಾರಿ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಕತ್ತಿ ಅವರ ತೂಕಕ್ಕೆ ತಕ್ಕಂಥ ಜಿಲ್ಲಾ ಉಸ್ತುವಾರಿ ಯಾವುದು ಎಂಬುದು ಇನ್ನೂ ಅಳತೆಗೆ ಸಿಗುತ್ತಿಲ್ಲ.

ಮುರುಗೇಶ್‌ ನಿರಾಣಿ ಅವರು ಬಾಗಲಕೋಟೆ ಜಿಲ್ಲೆಯವರಾದರೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕಾರಣದಿಂದಾಗಿ ಅವರಿಗೆ ಆ ಜಿಲ್ಲೆ ಉಸ್ತುವಾರಿ ಸಿಗುವುದು ಅನುಮಾನ. ಒಂದು ವೇಳೆ ಮುಖ್ಯಮಂತ್ರಿಗಳು ಬಯಸಿದರೆ ಕಾರಜೋಳ ಅವರನ್ನು ಪಕ್ಕದ ವಿಜಯಪುರಕ್ಕೆ ಸ್ಥಳಾಂತರಿಸಿ ಬಾಗಲಕೋಟೆಯನ್ನು ನಿರಾಣಿ ಅವರಿಗೆ ನೀಡಬಹುದು. ಇಲ್ಲದಿದ್ದರೆ ವಿಜಯಪುರ ನಿರಾಣಿ ಅವರಿಗೆ ಸಿಗಬಹುದು ಎನ್ನಲಾಗಿದೆ.

ಬಿಎಸ್‌ವೈಗೆ ಇಕ್ಕಟ್ಟು

1. ಬೊಮ್ಮಾಯಿ ಉಸ್ತುವಾರಿ ಹೊತ್ತಿರುವ ಹಾವೇರಿಗಾಗಿ ಆರ್‌.ಶಂಕರ್‌ ಪಟ್ಟು

2. ಈ ಹಿಂದೆ ಬಿ.ಸಿ. ಪಾಟೀಲ್‌ಗೆ ಕೊಡದ ಹಾವೇರಿ ಈಗ ಶಂಕರ್‌ಗೆ ಕೊಡ್ತಾರಾ?

3. ರಾಮನಗರದ ಮೇಲೆ ಯೋಗೇಶ್ವರ್‌ ಕಣ್ಣು; ಆದರೆ ಅಶ್ವತ್ಥನಾರಾಯಣ ಬಿಡ್ತಾರಾ?

4. ಬೆಂಗಳೂರು ಗ್ರಾಮಾಂತರಕ್ಕೆ ಎಂಟಿಬಿ ಬೇಡಿಕೆ; ಅಶೋಕ್‌ ಒಪ್ಪುವುದು ಕಷ್ಟ

5. ಉಮೇಶ್‌ ಕತ್ತಿಗೆ ಯಾವ ಜಿಲ್ಲೆ ಕೊಡೋದು? ಜಾರಕಿಹೊಳಿ ಬೆಳಗಾವಿ ಬಿಡೋದಿಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?