ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ನೂತನ ಸಾರಥಿ ನೇಮಕ, ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್

By Suvarna NewsFirst Published Nov 9, 2021, 4:18 PM IST
Highlights

* ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ನೂತನ ಸಾರಥಿ ನೇಮಕ
* ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ 
* ನವೆಂಬರ್ 16 ರಂದು ಅರಮನೆ ಮೈದಾನದಲ್ಲಿ  ಪದಗ್ರಹಣ

ಬೆಂಗಳೂರು. (ನ.09): ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ (KPCC Minority Cell) ನೂತನ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಅವರನ್ನು ನೇಮಕ ಮಾಡಲಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರನ್ ಪ್ರತಪ್ಗರ್ಹಿ ಅವರು ಜಬ್ಬಾರ್ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ

 ಅಬ್ದುಲ್  ಜಬ್ಬಾರ್ ಅವರು 10 ವರ್ಷಗಳ ಕಾಲ ದಾವಣಗೆರೆ (Davanagere) ಜಿಲ್ಲಾ ಅಧ್ಯಕ್ಷರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು.

ಜಬ್ಬಾರ್ ಅವರು ಇದೇ ನವೆಂಬರ್ 16 ರಂದು ಅರಮನೆ ಮೈದಾನದ ನಲಪಾಡ್ ಪೆವಿಲಿಯನ್‍ನಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಪಕ್ಷದ ನಾಯಕರು, ಕಾರ್ಯಕರ್ತರು ಆಗಮಿಸಲಿದ್ದಾರೆ.

 ಈ ಬಗ್ಗೆ ಶಾಸಕ ಎನ್‌.ಎ. ಹ್ಯಾರಿಸ್ ಹಾಗೂ ಅಬ್ದುಲ್ ಜಬ್ಬರ್ ಜಂಟಿಯಾಗಿ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಘೋಷ್ಠಿ ನಡೆಸಿ ಮಾಹಿತಿ ನೀಡಿದರು.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ನೇಮಕವಾದ ಅಬ್ದುಲ್ ಜಬ್ಬಾರ್ ಅವರ ಪದಗ್ರಹಣ ನವೆಂಬರ್ 16ರಂದು ಅರಮನೆ ಮೈದಾನದ ನಲಪಾಡ್ ಪೆವಿಲಿಯನ್‌ನಲ್ಲಿ ನಡೆಯಲಿದೆ. ಇಂದು ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಲಾಯಿತು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ‌ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
- pic.twitter.com/2MChem00VQ

— Karnataka Congress (@INCKarnataka)

 ಸದ್ಯ ಜಾತಿ ಹಾಗೂ ಧರ್ಮದ ಮೇಲೆ ಯಾವ ರೀತಿಯ ರಾಜಕಾರಣ ನಡೆಯುತ್ತಿದೆ ಎಂದು ನಾವು ನೋಡುತ್ತಿದ್ದೇವೆ. ಜಾತ್ಯಾತೀತ ರಾಜಕಾರಣಕ್ಕಾಗಿ ಎಲ್ಲ ಸಮಾಜಕ್ಕೆ ಆದ್ಯತೆ ನೀಡಲು ಕಾಂಗ್ರೆಸ್ ಪಕ್ಷ ಈ ಘಟಕವನ್ನು ಸ್ಥಾಪಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅಲ್ಪಸಂಖ್ಯಾತ ಘಟಕವನ್ನು ಮತ್ತಷ್ಟು ಬಲಪಡಿಸಲು ಕಾರ್ಯಕ್ರಮ ರೂಪಿಸುತ್ತೇವೆ. ಕಾಂಗ್ರೆಸ್ ಅಲ್ಪಸಂಖ್ಯಾತರು, ದಲಿತರು, ಕೆಳ ಹಂತದಲ್ಲಿರುವ ಸಮಾಜದವರನ್ನು ಕೈ ಹಿಡಿದು ಮೇಲೆತ್ತಲು ಶ್ರಮಿಸುತ್ತಲೇ ಬಂದಿದೆ. ಕಾಂಗ್ರೆಸ್ ಪಕ್ಷ ಈ ಸಮುದಾಯದ ಪರವಾಗಿ ಹೋರಾಡುತ್ತಿದೆ. ಈ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ವಿರುದ್ಧ ದೊಡ್ಡ ಹೋರಾಟದ ಮೂಲಕ ಜಾತ್ಯಾತೀತವಾಗಿ ಎಲ್ಲರನ್ನು ಒಟ್ಟಾಗಿ ಸೇರಿಸಿ ಪಕ್ಷ ಬಲಪಡಿಸಲು ಶ್ರಮಿಸುತ್ತೇವೆ ಎಂದು ಹ್ಯಾರಿಸ್ ಹೇಳಿದರು.

ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ನಾಯಕರನ್ನು ಹಂತ ಹಂತವಾಗಿ ರಾಜಕೀಯವಾಗಿ ಮುಗಿಸುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅಲ್ಪಸಂಖ್ಯಾತ ನಾಯಕರನ್ನು ಯಾರು ಮುಗಿಸಿದ್ದಾರೆ ಎಂದು ಜನ ನೋಡಿದ್ದಾರೆ. ತಮ್ಮ ಪಕ್ಷದಲ್ಲಿದ್ದ ಅಲ್ಪಸಂಖ್ಯಾತರಿಗೆ ಅವರು ಯಾವ ಸ್ಥಾನಮಾನ ಕೊಟ್ಟಿದ್ದರು ಎಂದು ಆ ಪಕ್ಷದಲ್ಲಿದ್ದ ನಾಯಕರೇ ಹೇಳಿದ್ದಾರೆ ಎಂದು ಹ್ಯಾರೀಸ್ ತಿರುಗೇಟು ನೀಡಿದರು. 

ಅಬ್ದುಲ್ ಜಬ್ಬಾರ್ ಮಾತನಾಡಿ, ಸೋನಿಯಾ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಆಶೀರ್ವಾದದಿಂದ ನಾನು ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನಾಗಿ ನೇಮಕಗೊಂಡಿದ್ದೇನೆ. ನವೆಂಬರ್ 16 ರಂದು ಬೆಳಗ್ಗೆ 10.30ಕ್ಕೆ ಅರಮನೆ ಮೈದಾನದ ನಲಪಾಡ್ ಪೆವಿಲಿಯನ್‍ನಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದೇನೆ ಎಂದರು.

 ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್ ಮುನಿಯಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್.ಆರ್ ಪಾಟೀಲ್, ಎಐಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇಮ್ರನ್ ಪ್ರತಪ್ಗರ್ಹಿ ಹಾಗೂ ರಾಜ್ಯದ ಮತ್ತಿತರ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು. 

ನಾನು ಅಧಿಕಾರ ಸ್ವೀಕರಿಸಿದ ನಂತರ ರಾಜ್ಯಾದ್ಯಂತ ಅಲ್ಪಸಂಖ್ಯಾತರು ಕೇವಲ 7 ಕಡೆಗಳಲ್ಲಿ ಮಾತ್ರ ಆಯ್ಕೆಯಾಗಿದ್ದು, ಇಬ್ಬರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಹೀಗಾಗಿ 224 ಕ್ಷೇತ್ರಗಳ ಇತರ ಕಡೆಗಳಲ್ಲೂ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರುವ ಕ್ರೈಸ್ತರು, ಸಿಖ್ಖರು, ಬುದ್ಧರು ಹಾಗೂ ಇತರೆ ಸಮುದಾಯದವರು ಕೂಡ ಆಯ್ಕೆಯಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎಲ್ಲೆಲ್ಲಿ ನ್ಯೂನ್ಯತೆ ಇದೆಯೋ ಅದನ್ನು ಸರಿಪಡಿಸಲು ಶ್ರಮಿಸುತ್ತೇನೆ. ಆಮೂಲಕ ಪಕ್ಷ ಸಂಘಟನೆ ಮಾಡುತ್ತೇನೆ ವಿಶ್ವಾಸ ವ್ಯಕ್ತಪಡಿಸಿದರು.

click me!