
-ಎಸ್.ಗಿರೀಶ್‌ಬಾಬು
ಬೆಂಗಳೂರು(ಜೂ.28): ಕರುನಾಡು ಸಾರ್ವತ್ರಿಕ ಚುನಾವಣೆ ಹಾದಿಯಲ್ಲಿರುವ ಪ್ರಸ್ತುತ ಘಟ್ಟದಲ್ಲಿ ಮಹತ್ವದ ರಾಜಕೀಯ ಸಂದೇಶ ರವಾನಿಸಲು ಹಾಗೂ ತಮ್ಮ ನಾಯಕನಿಗಿರುವ ಜನ ಮನ್ನಣೆಯನ್ನು ಸ್ಪಷ್ಟವಾಗಿ ನಿರೂಪಿಸುವ ಉದ್ದೇಶದಿಂದ ಬೃಹತ್ ಬಲ ಪ್ರದರ್ಶನ ನಡೆಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿ ಬಳಗ ಸಜ್ಜಾಗಿದೆ.
ಇದಕ್ಕಾಗಿ ಆಗಸ್ಟ್ 3ಕ್ಕೆ 75 ವರ್ಷಕ್ಕೆ ಕಾಲಿಡಲಿರುವ ಸಿದ್ದರಾಮಯ್ಯ ಅವರ ಜನುಮ ದಿನದ ಅಮೃತ ಮಹೋತ್ಸವವನ್ನು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದೆ. ಈ ಬಲ ಪ್ರದರ್ಶನ ಸಾಮಾನ್ಯವಾಗಿರುವುದಿಲ್ಲ. ನಾಡಿನ ಮೂಲೆ ಮೂಲೆಯಿಂದ ಸುಮಾರು ಐದು ಲಕ್ಷ ಜನರನ್ನು ಸೇರಿಸುವ ಹಾಗೂ ಸ್ವತಃ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಿಂದ ಕಾರ್ಯಕ್ರಮ ಉದ್ಘಾಟಿಸುವ ಯೋಜನೆಯನ್ನು ಅವರ ಅಭಿಮಾನಿ ಬಳಗ ಹೊಂದಿದೆ. ಈ ಉದ್ದೇಶಕ್ಕಾಗಿ ‘ಸಿದ್ದರಾಮಯ್ಯ 75 ಅಭಿನಂದನಾ ಸಮಿತಿ’ಯನ್ನು ರಚಿಸಲಾಗಿದೆ.
ಈ ಸಮಿತಿಗೆ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಗೌರವ ಅಧ್ಯಕ್ಷರಾಗಿದ್ದರೆ, ಮುಖಂಡ ಕೆ.ಎನ್.ರಾಜಣ್ಣ ಅಧ್ಯಕ್ಷರಾಗಿದ್ದಾರೆ. ಬಸವರಾಜ ರಾಯರಡ್ಡಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಶಾಸಕ ಬೈರತಿ ಸುರೇಶ್ ಖಜಾಂಚಿಯಾಗಿದ್ದಾರೆ. ಸಮಿತಿಯಲ್ಲಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಸಂಸದರನ್ನು ಒಳಗೊಂಡ 129 ಮಂದಿ ಸದಸ್ಯರು ಇದ್ದಾರೆ.
ಈ ಸಮಿತಿಯ ಉದ್ದೇಶ ದಕ್ಷಿಣ ಭಾರತದಲ್ಲಿ ಇತ್ತೀಚೆಗೆ ಆಂಧ್ರಪ್ರದೇಶದ ಸೂಪರ್ ಸ್ಟಾರ್ ಚಿರಂಜೀವಿ ತಮ್ಮ ಹೊಸ ಪಕ್ಷ ‘ಪ್ರಜಾ ರಾಜ್ಯಂ’ ಘೋಷಿಸುವ ವೇಳೆ ಐದು ಲಕ್ಷ ಜನರನ್ನು ಸೇರಿಸಿದ ನಂತರದ ಅತಿ ದೊಡ್ಡ ಸಮೂಹವನ್ನು ಸೇರಿಸಿ ಸಿದ್ದರಾಮಯ್ಯ ಅವರ ಜನಪ್ರಿಯತೆಯ ಮಟ್ಟವನ್ನು ನಾಡಿನ ಮುಂದಿಡುವುದು. ರಾಜ್ಯದಲ್ಲಿ ನೆಲೆ ನಿಂತಿರುವ ಕೋಮು ಆಧಾರಿತ ರಾಜಕೀಯ ಶಕ್ತಿಗೆ ಎದುರೇಟು ನೀಡುವ ಸಾಮರ್ಥ್ಯವಿರುವ ಜನನಾಯಕ ಸಿದ್ದರಾಮಯ್ಯ ಎಂಬುದನ್ನು ಸಂಶಯಕ್ಕೆ ಎಡೆಯಿಲ್ಲದಂತೆ ನಿರೂಪಿಸುವುದು. ಇದಕ್ಕಾಗಿ ನಾಡಿನ ಮೂಲೆ ಮೂಲೆಯಿಂದ ಜನ ಸಮೂಹವನ್ನು, ಪ್ರಗತಿಪರರನ್ನು, ಸಾಹಿತಿಗಳನ್ನು, ವಿದ್ವಾಂಸರನ್ನು, ಸ್ವಾಮೀಜಿಗಳನ್ನು ವೇದಿಕೆಯಲ್ಲಿ ಸೇರಿಸುವುದಾಗಿದೆ.
ಈ ಉದ್ದೇಶಕ್ಕಾಗಿ ಕೋಟ್ಯಂತರ ರು. ಬಜೆಟ್‌ನಲ್ಲಿ ಅಮೃತ ಮಹೋತ್ಸವವನ್ನು ಆಯೋಜಿಸಲು ಸಿದ್ಧತೆ ಈಗಾಗಲೇ ಆರಂಭಗೊಂಡಿದೆ. ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರಡ್ಡಿ ಅವರನ್ನು ಒಳಗೊಂಡ ತಂಡ ಈ ಕಾರ್ಯಕ್ಕಾಗಿ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ದಾವಣಗೆರೆಯ ಹರಿಹರ ರಸ್ತೆಯಲ್ಲಿ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ವಿಶಾಲ ಜಾಗದಲ್ಲಿ ಸಮಾವೇಶ ಆಯೋಜನೆಗೆ ಅಗತ್ಯ ಪೂರ್ವ ತಯಾರಿ ನಡೆಸಿದ್ದಾರೆ ಎನ್ನುತ್ತವೆ ಮೂಲಗಳು.
ಕಾಂಗ್ರೆಸ್ ಆಶ್ರಿತ ಕಾರ್ಯಕ್ರಮ:
ಸಿದ್ದರಾಮಯ್ಯ ಅವರ ಅಭಿಮಾನಿ ಬಳಗ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರೂ ಇದು ಪಕ್ಕಾ ಕಾಂಗ್ರೆಸ್ ಆಶ್ರಿತ ಸಮಾರಂಭವಾಗಿರಲಿದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಿಂದ ಈ ಅಮೃತ ಮಹೋತ್ಸವಕ್ಕೆ ಚಾಲನೆ ಕೊಡಿಸುವ ಉದ್ದೇಶವಿದೆ. ಜತೆಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರನ್ನು ಆಹ್ವಾನಿಸಲಾಗುತ್ತದೆ. ರಾಜ್ಯದ ಪ್ರಮುಖ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಪ್ರತಿಯೊಬ್ಬ ಪ್ರಮುಖ ನಾಯಕನನ್ನು ಸಮಾರಂಭಕ್ಕೆ ಆಹ್ವಾನಿಸಲು ಸಿದ್ಧತೆ ನಡೆದಿದೆ.
ಒಟ್ಟಾರೆ, ಇದು ಸಿದ್ದರಾಮಯ್ಯ ಅವರ ಬಣದ ಬೃಹತ್ ಶಕ್ತಿ ಪ್ರದರ್ಶನವಾಗಲಿದ್ದು, ರಾಜಕೀಯವಾಗಿ ನಾಡಿಗೆ ಸ್ಪಷ್ಟಸಂದೇಶ ನೀಡುವ ಉದ್ದೇಶ ಹೊಂದಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ನಾನಾಗಲಿ ಅಥವಾ ಸಿದ್ದರಾಮಯ್ಯ ಅವರಾಗಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮನಸ್ಥಿತಿಯವರಲ್ಲ. ಆದರೆ, ರಾಜ್ಯಕ್ಕೆ ಗುಣಮಟ್ಟದ ಹಾಗೂ ಸಾಂಸ್ಕೃತಿಕ ನಾಯಕತ್ವ ನೀಡುವ ಮೇರು ವ್ಯಕ್ತಿತ್ವ ಇರುವ ಕೆಲವೇ ನಾಯಕರಲ್ಲಿ ಸಿದ್ದರಾಮಯ್ಯ ಪ್ರಮುಖರು. ಇಂತಹ ನಾಯಕ ರಾಜಕಾರಣದಲ್ಲಿ ಐವತ್ತು ವರ್ಷ ಪೂರ್ಣಗೊಳಿಸಿದ್ದಾರೆ ಹಾಗೂ 75 ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ನಾಯಕತ್ವವನ್ನು ನಾಡು ಸಂಭ್ರಮಿಸುವಂತಹ ಸಮಾರಂಭ ನಡೆಸಬೇಕು ಎಂಬ ಚಿಂತನೆ ಅವರ ಗೆಳೆಯರ ಬಳಗದಲ್ಲಿದೆ. ಆದರೆ, ಯಾವುದೂ ಇನ್ನು ಅಂತಿಮವಾಗಿಲ್ಲ.
-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.