
ವಿಧಾನ ಪರಿಷತ್(ಸೆ.15): ‘ಮೂಲಸೌಕರ್ಯ ಕಲ್ಪಿಸುವ ಅನುದಾನದಲ್ಲಿಯೂ ರಾಜ್ಯ ಸರ್ಕಾರ ಶೇ. 40ರಷ್ಟು ಭ್ರಷ್ಟಾಚಾರ ನಡೆಸಿದ್ದರಿಂದ ಬೆಂಗಳೂರಿಗೆ ಈ ಪರಿಸ್ಥಿತಿ ಬಂದಿದೆ’ ಎಂದು ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಆಡಿದ ಮಾತು ಆಡಳಿತ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಆಕ್ಷೇಪ, ವಾಗ್ವಾದ, ಮಾತಿನ ಚಕಮಕಿಗೆ ಕಾರಣವಾಗಿದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.
ಇತ್ತೀಚೆಗೆ ಸುರಿದ ಮಳೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆಗಿರುವ ಹಾನಿ ಬಗ್ಗೆ ಮಾತನಾಡುವ ವೇಳೆ ಬಿ.ಕೆ.ಹರಿಪ್ರಸಾದ್ ಅವರು, ‘ರಾಜ್ಯ ಸರ್ಕಾರ ಮೂಲಸೌಕರ್ಯಗಳನ್ನು ಕಲ್ಪಿಸಲು ಬಳಸಬೇಕಿರುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಖರ್ಚು ಮಾಡಿಲ್ಲ. ಅದರಲ್ಲಿ ಶೇ.40 ರಷ್ಟುಅನುದಾನವನ್ನು ಭ್ರಷ್ಟಾಚಾರ ನಡೆಸಿದ್ದು, ಇದರಿಂದ ಸೂಕ್ತ ಕೆಲಸವಾಗದೇ ಬೆಂಗಳೂರಿಗೆ ಈ ಪರಿಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು’ ಎಂದರು.
ಅಧಿವೇಶನದಲ್ಲಿ ಸ್ವಾರಸ್ಯಕರ ಚರ್ಚೆ: ಸಿದ್ದರಾಮಯ್ಯ ಕಿಚಾಯಿಸಿದ ಸಿಎಂ ಬೊಮ್ಮಾಯಿ
ಆಗ ಮಧ್ಯಪ್ರವೇಶಿಸಿದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ‘ಮನಸ್ಸಿಗೆ ಬಂದಂತೆ ಮಾತನಾಡಬೇಡಿ, ನಿಮ್ಮ ಬಳಿ ಇರುವ ಸಾಕ್ಷಿ ಕೊಡಿ. ಸದನದಲ್ಲಿ ದಾಖಲಾತಿಗಳನ್ನು ನೀಡಿ ನಂತರ ಮಾತನಾಡಿ. ಪದೇ ಪದೇ ಪಕೋಡ ಎಂದು ಪ್ರಧಾನಿಗಳಿಗೆ ಅವಮಾನ ಮಾಡುವುದನ್ನು ಸಹಿಸುವುದಿಲ್ಲ’ ಎಂದು ಹರಿಹಾಯ್ದರು.
ಸಚಿವರ ಮಾತಿಗೆ ಬಿಜೆಪಿ ಸದಸ್ಯರು ದನಿಗೂಡಿಸಿ ಕಾಂಗ್ರೆಸ್ ಸರ್ಕಾರ ಶೇ.90 ಭ್ರಷ್ಟಾಚಾರ ಮಾಡಿದೆ ಎಂದು ಹೇಳತೊಡಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ‘ಬಿಜೆಪಿ ಸರ್ಕಾರ ಶೇ.40 ಸರ್ಕಾರ’ ಎಂದು ಘೋಷಣೆ ಕೂಗಿದರು.
ಎರಡೂ ಕಡೆ ವಾಗ್ವಾದ, ಆರೋಪ-ಪ್ರತ್ಯಾರೋಪಗಳು ನಡೆದು, ತಣ್ಣಗಾಗದೆ ಇದ್ದಾಗ ಸಭಾಪತಿಗಳು ಎದ್ದುನಿಂತು ಸೂಚನೆ ನೀಡಿದರೂ ಬಿಜೆಪಿ ಸದಸ್ಯರು ಬಿ.ಕೆ.ಹರಿಪ್ರಸಾದ್ ಅವರು ಮಾತು ಮುಂದುವರೆಸಲು ಅವಕಾಶ ನೀಡಲಿಲ್ಲ. ಕೊನೆಗೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಳಿದು ವಿರೋಧ ಪಕ್ಷದ ನಾಯಕರಿಗೆ ಬಿಜೆಪಿ ಸದಸ್ಯರು ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು ಕೆಲ ಕಾಲ ಮುಂದೂಡಿದರು.
ಬಳಿಕ ಮತ್ತೆ ಸದನ ಆರಂಭವಾದ ಬಳಿಕ ತಮ್ಮ ಮಾತು ಮುಂದುವರಿಸದ ಬಿ.ಕೆ.ಹರಿಪ್ರಸಾದ್, ಪ್ರವಾಹ ಹಾನಿ ಬಗ್ಗೆ ವಿವರಿಸುತ್ತಾ ಪುನಃ ರಾಜ್ಯ ಸರ್ಕಾರ ಶೇ.40 ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಸಚಿವ ಡಾ.ಅಶ್ವತ್ಥನಾರಾಯಣ ಸಾಕ್ಷಿ ಇಟ್ಟು ಮಾತನಾಡಿ ಎಂದರು. ಇದಕ್ಕೆ ಬಿ.ಕೆ.ಹರಿಪ್ರಸಾದ್ ‘ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಶೇ.10ರಷ್ಟು ಕಮಿಷನ್ ಪಡೆಯುತ್ತದೆ ಎಂದು ಪ್ರಧಾನಿ ಮೋದಿ ಆರೋಪಿಸುವಾಗ ಯಾವ ದಾಖಲೆ ನೀಡಿ ಆರೋಪಿಸಿದ್ದರು?’ ಎಂದು ಪ್ರಶ್ನಿಸಿದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾಂಗ್ರೆಸ್ ಮುಚ್ಚಿದ್ದ ಲೋಕಾಯುಕ್ತವನ್ನು ಬಿಜೆಪಿ ಮತ್ತೆ ಆರಂಭಿಸಿದೆ ಎಂದರು. ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ಮುಂದುವರೆದಾಗ ಸಭಾಪತಿಗಳು ಸದನವನ್ನು ಗುರುವಾರಕ್ಕೆ ಮುಂದೂಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.