ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತಾಗಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಅಂತ್ಯವಾಗಿದ್ದು, ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.
ಬೆಂಗಳೂರು. (ಜೂನ್.15): ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‍ನ 7 ಸ್ಥಾನಕ್ಕೆ ನಡೆಯುವ ಚುನಾವಣೆಗೆ ಮೂರು ಪಕ್ಷಗಳಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿದೆ.
ಇದರ ಮಧ್ಯೆ ಅಭ್ಯರ್ಥಿ ಆಯ್ಕೆ ಕುರಿತಾಗಿ ರಾಜ್ಯ ಬಿಜೆಪಿ ಇಂದು (ಸೋಮವಾರ) ಸಂಜೆ ನಡೆಸಿದ್ದ ಕೋರ್ ಕಮಿಟಿ ಸಭೆ ಅಂತ್ಯವಾಗಿದ್ದು, ತನ್ನ ಪಾಲಿನ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನ ಫೈನಲ್ ಮಾಡಿದೆ.
ರಾಜ್ಯಸಭೆ ಫೈಟ್ ಮುಗಿಯುತ್ತಿದ್ದಂತೆಯೇ MLC ಟಿಕೆಟ್ ಫೈಟ್: ಮತ್ತೆ ಶಾಕ್ ಕೊಡುತ್ತಾ ಹೈಕಮಾಂಡ್?
ಸಂಸದ ಉಮೇಶ್ ಜಾಧವ್ ಪುತ್ರನಿಗೆ ಕ್ಷೇತ್ರ ತ್ಯಾಗ ಮಾಡಿದ್ದ ಸುನೀಲ್ ವಲ್ಯಾಪುರೆ, ಆರ್. ಶಂಕರ್, ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಹೆಸರು ಕೋರ್ ಕಮಿಟಿಯಲ್ಲಿ ಫೈನಲ್ ಮಾಡಲಾಗಿದ್ದು, ಈ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಪಿ ಎಚ್ ಪೂಜಾರ್- ಬಾಗಲಕೋಟೆ ಬಿಜೆಪಿ ಮುಖಂಡ, ಮಾಜಿ ಶಾಸಕ, ಸಂಘ ನಿಷ್ಠ ನಾಯಕ ಭಾನುಪ್ರಕಾಶ್ ಹೆಸರುಗಳು ಕೇಳಿಬಂದವು. ಆದ್ರೆ, ಅಂತಿಮವಾಗಿ ಸರ್ಕಾರ ರಚನೆಗೆ ಕಾರಣರಾಗಿದ್ದ ಆರ್. ಶಂಕರ್, ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಹೆಸರು ಫೈನಲ್ ಮಾಡಲಾಗಿದೆ.
ಆದ್ರೆ, ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತೋ ಎನ್ನುವುದು ಕಾದು ನೋಡಬೇಕಿದೆ. ರಾಜ್ಯ ಕೋರ್ ಕಮಿಟಿ ಕಳುಹಿಸಿದ ಪಟ್ಟಿಗೆ ಓಕೆ ಅನ್ನುತ್ತೋ ಅಥವಾ ರಾಜ್ಯಸಭೆ ಚುನಾವಣೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಕೈಗೊಳ್ಳುತ್ತೋ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.
ರಾಜ್ಯಸಭಾ ಎಲೆಕ್ಷನ್ ವೇಳೆ ರಾಜ್ಯ ಬಿಜೆಪಿ ಶಿಫಾರಸ್ಸು ಮಾಡಿದ್ದ ಹೆಸರಗಳನ್ನು ಕೈಬಿಟ್ಟು ಬೇರೆ ಅಭ್ಯರ್ಥಿಗಳನ್ನು ಘೋಷಿಸಿದ ರೀತಿಯಲ್ಲಿ ಪರಿಷತ್ ಚುನಾವಣೆಯಲ್ಲೂ ಮಾಡಿದ್ರೂ ಅಚ್ಚರಿ ಪಡಬೇಕಿಲ್ಲ.
ಕರ್ನಾಟಕ ವಿಧಾನಸಭೆಯಿಂದ ಒಟ್ಟು 7 ಸದಸ್ಯರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಲು ಜೂನ್ 29ರಂದು ಚುನಾವಣೆ ನಡೆಯಲಿದ್ದು, ಜೂನ್ 18 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ.
ವಿಧಾನಸಭೆಯಲ್ಲಿ ಬಿಜೆಪಿ 116 ಸದಸ್ಯ ಬಲವನ್ನು ಹೊಂದಿದ್ದು, ನಾಲ್ವರು ಸದಸ್ಯರು ಆಯ್ಕೆಯಾಗಲಿದ್ದಾರೆ. ಇನ್ನು ಕಾಂಗ್ರೆಸ್ 2 ಮತ್ತು ಜೆಡಿಎಸ್ ಒಬ್ಬರು ಪರಿಷತ್‌ಗೆ ಆಯ್ಕೆಯಾಗಲಿದೆ.