
ಬೆಂಗಳೂರು(ಜೂ.22): ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಹೈಕಮಾಂಡ್‌ಗೆ ವರದಿ ನೀಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವಕ್ಕೆ ಹೆಚ್ಚಿನ ವಿರೋಧವಿಲ್ಲ ಎಂಬ ಅಭಿಪ್ರಾಯ ಮಂಡಿಸಿದ್ದಾರೆ.
ಈ ಮೂಲಕ ನಾಯಕತ್ವ ಬದಲಾವಣೆಗೆ ಕಳೆದ ಹಲವು ತಿಂಗಳುಗಳಿಂದ ತೆರೆಮರೆಯಲ್ಲಿ ಸತತ ಪ್ರಯತ್ನ ನಡೆಸುತ್ತಿದ್ದ ಪಕ್ಷದ ಕೆಲವು ಶಾಸಕರಿಗೆ ಹಿನ್ನಡೆ ಉಂಟಾದಂತಾಗಿದೆ.
ಕಳೆದ ವಾರ ಮೂರು ದಿನಗಳ ಕಾಲ ರಾಜ್ಯಕ್ಕೆ ಆಗಮಿಸಿ ಸರಣಿ ಸಭೆಗಳನ್ನು ನಡೆಸುವ ಮೂಲಕ ಸುಮಾರು 50ಕ್ಕೂ ಹೆಚ್ಚು ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದ ಅವರು ಅದರ ಆಧಾರದ ಮೇಲೆ ವರದಿ ನೀಡಿದ್ದಾರೆ. ಆ ವರದಿ ಸುಮಾರು 60ರಿಂದ 70 ಪುಟಗಳನ್ನು ಒಳಗೊಂಡಿದೆ. ಈ ವರದಿ ಆಧರಿಸಿ ವರಿಷ್ಠರು ಮುಂದಿನ ಯಾವ ನಿಲುವು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿದು ಬಂದಿದೆ.
ರಾಜ್ಯಕ್ಕೆ ಆಗಮಿಸುವ ಮೊದಲು ಮತ್ತು ವಾಪಸ್ ಹೋಗುವವರೆಗೂ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಸರ್ಕಾರದ ಇನ್ನುಳಿದ ಅವಧಿಗೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬ ಮಾತನ್ನು ಸ್ಪಷ್ಟವಾಗಿಯೇ ಹೇಳಿದ್ದರು. ಜತೆಗೆ ನಾಯಕತ್ವ ಸೇರಿದಂತೆ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರವಾಗುವಂಥ ಹೇಳಿಕೆಗಳನ್ನು ಯಾರೊಬ್ಬರೂ ನೀಡಬಾರದು ಎಂಬ ಕಟ್ಟಪ್ಪಣೆಯನ್ನೂ ಮಾಡಿದ್ದರು.
ಹೈಕಮಾಂಡ್‌ಗೆ ನೀಡಿರುವ ವರದಿಯಲ್ಲಿ ಅರುಣ್ ಸಿಂಗ್ ಅವರು ತಮ್ಮನ್ನು ಭೇಟಿ ಮಾಡಿದ ಶಾಸಕರು, ಸಚಿವರ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಯಡಿಯೂರಪ್ಪ ಅವರ ನಾಯಕತ್ವಕ್ಕೆ ಸಂಬಂಧಿಸಿದಂತೆ ಮೂರ್ನಾಲ್ಕು ಮಂದಿ ಮಾತ್ರ ಚರ್ಚೆ ನಡೆಸಿದ್ದಾರೆಯೇ ಹೊರತು ಉಳಿದವರಾರೂ ಅದರ ಬಗ್ಗೆ ಚಕಾರ ಎತ್ತಿಲ್ಲ. ಬಹುತೇಕ ಎಲ್ಲ ಶಾಸಕರೂ ಯಡಿಯೂರಪ್ಪ ಅವರ ಕಾರ್ಯವೈಖರಿ ಮತ್ತು ವರ್ಚಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಇಳಿವಯಸ್ಸಿನಲ್ಲೂ ಉತ್ಸಾಹದಿಂದ ಕೆಲಸ ಮಾಡುವುದನ್ನು ಪ್ರಶಂಸಿಸಿದ್ದಾರೆ. ಕೆಲವು ಶಾಸಕರು ಆಡಳಿತದಲ್ಲಿ ಯಡಿಯೂರಪ್ಪ ಕುಟುಂಬದ ಸದಸ್ಯರ ಹಸ್ತಕ್ಷೇಪದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜತೆಗೆ ಇನ್ನು ಕೆಲವರು ತಾವು ಹಿರಿಯರಾದರೂ ಸಚಿವ ಸ್ಥಾನದಿಂದ ವಂಚಿತಗೊಂಡಿದ್ದೇವೆ ಎಂಬ ಅಳಲನ್ನು ತೋಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹೈಕಮಾಂಡ್ ನಿರ್ಧಾರ ಏನು?
- ಕರ್ನಾಟಕದಲ್ಲಿ 3 ದಿನ ಶಾಸಕರು, ಸಚಿವರಿಂದ ಸಂಗ್ರಹಿಸಿದ ಮಾಹಿತಿ
- 60-70 ಪುಟಗಳ ವರದಿ ಹೈಕಮಾಂಡ್‌ಗೆ ಸಲ್ಲಿಸಿದ ಅರುಣ್ ಸಿಂಗ್
- ಬಹುತೇಕ ಎಲ್ಲ ಶಾಸಕ, ಸಚಿವರಿಂದ ಸಿಎಂ ಪರ ಅಭಿಪ್ರಾಯ ಸಲ್ಲಿಕೆ
- ಯಡಿಯೂರಪ್ಪ ನಾಯಕತ್ವಕ್ಕೆ ಹೆಚ್ಚಿನ ವಿರೋಧವಿಲ್ಲ ಎಂದು ಹೇಳಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.