ಆಡಳಿತಾರೂಢ ಬಿಜೆಪಿಯು ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಇದೀಗ ಎರಡು ಹಂತದ ಪ್ರಕ್ರಿಯೆ ಮುಗಿಸಿದ್ದು, ಮೂರನೇ ಹಂತವಾದ ರಾಜ್ಯ ಕೋರ್ ಕಮಿಟಿ ಸಭೆಯು ಮಂಗಳವಾರ ಅಥವಾ ಬುಧವಾರ ನಡೆಯುವ ಸಾಧ್ಯತೆಯಿದೆ.
ಬೆಂಗಳೂರು (ಏ.3) : ಆಡಳಿತಾರೂಢ ಬಿಜೆಪಿಯು ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಇದೀಗ ಎರಡು ಹಂತದ ಪ್ರಕ್ರಿಯೆ ಮುಗಿಸಿದ್ದು, ಮೂರನೇ ಹಂತವಾದ ರಾಜ್ಯ ಕೋರ್ ಕಮಿಟಿ ಸಭೆಯು ಮಂಗಳವಾರ ಅಥವಾ ಬುಧವಾರ ನಡೆಯುವ ಸಾಧ್ಯತೆಯಿದೆ.
ಅದಾದ ಬಳಿಕ ನಾಲ್ಕನೇ ಹಂತವಾದ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಭೆ ಇದೇ ವಾರಾಂತ್ಯದಲ್ಲಿ ನಡೆಯಲಿದ್ದು, ಬಳಿಕ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
Karnataka election 2023: 100 ಅಭ್ಯರ್ಥಿಗಳ ಆಯ್ಕೆಗೆ ನಾಳೆ ಕಾಂಗ್ರೆಸ್ ಸಿಇಸಿ ಸಭೆ: ಡಿಕೆಶಿ
ಶುಕ್ರವಾರ ಎಲ್ಲ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳು ಹಾಗೂ ಶಕ್ತಿ ಕೇಂದ್ರಗಳ ಪ್ರಮುಖರಿಂದ ಮತದಾನ ವ್ಯವಸ್ಥೆ ಮೂಲಕ ಅಭ್ಯರ್ಥಿಗಳ ಹೆಸರುಗಳನ್ನು ಸಂಗ್ರಹಿಸಿದ್ದ ಬಿಜೆಪಿ ರಾಜ್ಯ ನಾಯಕರು ನಂತರ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಎಲ್ಲ ಜಿಲ್ಲೆಗಳ ಕೋರ್ ಕಮಿಟಿಗಳ ಸದಸ್ಯರನ್ನು ಬೆಂಗಳೂರಿಗೆ ಕರೆಸಿಕೊಂಡು ಅವರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ.
ನಗರದ ಹೊರವಲಯದ ಗೋಲ್ಡನ್ ಪಾಮ್ ರೆಸಾರ್ಚ್‌ನಲ್ಲಿ ನಡೆದ ಸಭೆಯಲ್ಲಿ ಪಕ್ಷದ ಎಲ್ಲ ಸಂಘಟನಾತ್ಮಕ ಜಿಲ್ಲೆಗಳ ಮುಖಂಡರೊಂದಿಗೆ ರಾಜ್ಯ ನಾಯಕರು ಪ್ರತ್ಯೇಕವಾಗಿ ಮಾತುಕತೆ ನಡೆಸಿ ಜಿಲ್ಲೆಯ ಪ್ರಸಕ್ತ ರಾಜಕೀಯ ಸನ್ನಿವೇಶ, ಪಕ್ಷಕ್ಕಿರುವ ಅನುಕೂಲ-ಅನನುಕೂಲತೆಗಳು ಹಾಗೂ ಯಾರನ್ನು ಕಣಕ್ಕಿಳಿಸಿದರೆ ಸೂಕ್ತವಾಗಬಹುದು ಎಂಬಿತ್ಯಾದಿ ಮಾಹಿತಿಯನ್ನು ಪಡೆದಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರೂ ಆಗಿರುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸ್ಮಶಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ: ರಾಹುಕಾಲದಲ್ಲಿ ನಾಮಪತ್ರ ಸಲ್ಲಿಕೆ- ಸತೀಶ
ಎರಡು ದಿನಗಳ ಕಾಲ ಸಂಗ್ರಹಿಸಿರುವ ಮಾಹಿತಿಯನ್ನು ಕ್ರೋಢಿಕರಿಸಿ ಮಂಗಳವಾರ ಅಥವಾ ಬುಧವಾರ ರಾಜ್ಯ ಕೋರ್ ಕಮಿಟಿ ಸಭೆ ನಡೆಯುವ ಸಾಧ್ಯತೆಯಿದ್ದು, ಅಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಒಂದು ಕ್ಷೇತ್ರಕ್ಕೆ ಒಂದು ಅಥವಾ ಅದಕ್ಕೂ ಹೆಚ್ಚಿನ ಆಕಾಂಕ್ಷಿಗಳ ಹೆಸರುಗಳ ಪಟ್ಟಿಸಿದ್ಧಪಡಿಸಿ ಬಳಿಕ ಕೇಂದ್ರ ಸಮಿತಿಗೆ ಕಳುಹಿಸಿಕೊಡಲಾಗುತ್ತದೆ. ಬಳಿಕ ಕೇಂದ್ರ ಸಂಸದೀಯ ಮಂಡಳಿ ಸಭೆ ಸೇರಿ ಅಭ್ಯರ್ಥಿಗಳ ಹೆಸರುಗಳನ್ನು ಅಖೈರುಗೊಳಿಸಲಿದೆ. ಬಹುತೇಕ ಈ ತಿಂಗಳ 7 ಅಥವಾ 8ರ ಹೊತ್ತಿಗೆ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಹೊರಬೀಳುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.