
ಗಂಗಾವತಿ (ಸೆ.18): ಮುಂದಿನ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯವರೇ ಮುಖ್ಯಮಂತ್ರಿಯಾಗುತ್ತಾರೆಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. 2028ಕ್ಕೆ ನಾನೇ ಸಿಎಂ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು ನಮ್ಮವರೇ ಮುಖ್ಯಮಂತ್ರಿಯಾಗುತ್ತಾರೆ ಎಂದರು. ಯತ್ನಾಳ ನನ್ನ ಆತ್ಮೀಯ ಸ್ನೇಹಿತರು. ಆದರೆ, ಇದೀಗ ಪಕ್ಷದಲ್ಲಿ ಇಲ್ಲ. ಬರುವ ದಿನಗಳಲ್ಲಿ ಏನೇನು ಬದಲಾವಣೆ ಆಗುತ್ತದೆಯೋ ಗಮನಿಸಬೇಕಿದೆ ಎಂದ ಅವರು, ತಾವೇ ಸಿಎಂ ಎಂದು ಹೇಳುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿರಬಹುದು ಎಂದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಹೇಳಿದ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಆದರೆ, ನಾನು ಒಂದು ಪತ್ರಿಕೆಯ ಸಂಪಾದಕನಾಗಿ ಕೆಲಸ ನಿರ್ವಹಿಸುತ್ತಿದ್ದು ಯಾವ ಬೆದರಿಕೆಗೆ ಹೆದರುವವನಲ್ಲ ಎಂದು ಸಂಸದ ಸಸಿಕಾಂತ್ ಸೆಂಥಿಲ್‌ಗೆ ತಿರುಗೇಟು ನೀಡಿದರು. ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಮಳೆ ಸುರಿಯುತ್ತಿರುವುದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಡಪಂಥೀಯ ಚಿಂತನೆಯ ಶಶಿಕಾಂತ ಸೆಂಥಿಲ್ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗಳನ್ನು ನಾಶ ಮಾಡಲೆಂದೇ ರಾಜಕಾರಣ ಪ್ರವೇಶ ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದೆ ಎಂಬ ಕಾರಣಕ್ಕಾಗಿಯೇ ಧರ್ಮಸ್ಥಳ ಪ್ರಕರಣದಲ್ಲಿ ಹುನ್ನಾರ ನಡೆಸಿದ್ದಾರೆ. ಧರ್ಮಸ್ಥಳ ಪ್ರಕರಣದ ಸೂತ್ರಧಾರಿಯೇ ಸೆಂಥಿಲ್ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಪುನರುಚ್ಛರಿಸಿದರು. ಸಂಸದ ಶಶಿಕಾಂತ ಸೆಂಥಿಲ್ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಹಿನ್ನೆಲೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಸೆಂಥಿಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದ ಹೆಸರು ಹಾಳು ಮಾಡಲು ಕಮ್ಯುನಿಸ್ಟರು ಹಾಗೂ ನಗರ ನಕ್ಸಲರು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಧರ್ಮಸ್ಥಳ ಪ್ರಕರಣದಲ್ಲಿ ಸೆಂಥಿಲ್ ಕೈವಾಡವಿದೆ ಎಂಬ ಹೇಳಿಕೆಗೆ ಬದ್ಧನಾಗಿದ್ದೇನೆ. ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಗೊತ್ತಾಯಿತು. ಅವರ ಎಷ್ಟೇ ಮೊಕದ್ದಮೆ ದಾಖಲಿಸಲಿ. ನಾನೂ ಸಹ ಕಾನೂನು ಹೋರಾಟ ಮಾಡುವೆ. ಈ ಪ್ರಕರಣದಿಂದ ನಾನೇನು ವಿಚಲಿತನಾಗುವುದಿಲ್ಲ. ಕಾನೂನು ಹೋರಾಟಕ್ಕೆ ಅವರೇ ದಾರಿ ಮಾಡಿಕೊಟ್ಟಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.