
ಮಂಡ್ಯ : ದೀಪಾವಳಿ ಕೊಡುಗೆ ಕೊಡುತ್ತಿದ್ದೇವೆ ಎಂದು ಹೇಳಿ ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ-ಖಾತಾ ಸೋಗಿನಲ್ಲಿ 15ಸಾವಿರ ಕೋಟಿ ರು. ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತ ಆಟೋ ನಿಲ್ದಾಣವನ್ನು ಉದ್ಘಾಟಿಸಿದ ಬಳಿಕ ರೈತ ಭವನದ ಬಳಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದೀಪಾವಳಿ ಕೊಡುಗೆ ಎಂದರೆ ಏನೋ ನಮಗೆ ದೊಡ್ಡ ಕೊಡುಗೆ ಕೊಡುತ್ತದೆ ಎಂದು ಜನರು ಭಾವಿಸಿದ್ದರು. ದೊಡ್ಡ ದೊಡ್ಡ ಜಾಹೀರಾತುಗಳನ್ನು ನೋಡಿ ನಾನು ಕೂಡ ಹಾಗೆಯೇ ಅಂದುಕೊಂಡಿದ್ದೆ. ಆದರೆ, ಅದು ದೀಪಾವಳಿ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಮಹಾನ್ ದೋಖಾ ಎಂದು ಕಿಡಿಕಾರಿದರು.
ಇದು ದೀಪಾವಳಿ ಕೊಡುಗೆಯಲ್ಲ. ಬೆಂಗಳೂರು ಜನರಿಗೆ ನೀಡುತ್ತಿರುವ ಶಾಕ್. ಅದು ಹೇಗಿದೆ ಎಂದರೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮಾಡುವ ಅರ್ಜಿಗೆ ೫೦೦ ರು. ಶುಲ್ಕ ತುಂಬಬೇಕು. ಆ ಶುಲ್ಕದ ಹೆಸರಿನಲ್ಲಿಯೇ ಈ ಸರ್ಕಾರ ನೂರಾರು ಕೋಟಿ ರು. ಸುಲಿಗೆ ಮಾಡುತ್ತಿದೆ. 30 * 40 ಚದರಡಿ ನಿವೇಶನಕ್ಕೆ 4 ರಿಂದ 8 ಲಕ್ಷ ರು.ವರೆಗೆ ಕಿತ್ತುಕೊಳ್ಳುತ್ತಿದ್ದಾರೆ. ಮೊದಲು 10 ರಿಂದ 13 ಸಾವಿರ ರು.ಮಾತ್ರ ಕಟ್ಟಬೇಕಿದ್ದ ಬೆಂಗಳೂರು ಜನರು ಇನ್ನು ಮುಂದೆ ಲಕ್ಷಗಳಲ್ಲಿ ಪಾವತಿಸಬೇಕಿದೆ. ಎ-ಖಾತಾ ದಂಧೆಯ ಮೂಲಕ ರಾಜ್ಯ ಸರ್ಕಾರ 15 ಸಾವಿರ ಕೋಟಿ ರು. ವಸೂಲಿ ಮಾಡುತ್ತಿದೆ ಎಂದು ಆಪಾದಿಸಿದರು.
ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡೋದು ಎಂದರೆ ಹೀಗೆನಾ?, ಜನರ ಮೇಲೆ ತೆರಿಗೆ ವಿಧಿಸಿ ಆರನೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಈ ಸರ್ಕಾರ ಬಂದ ಮೇಲೆ ಜನರನ್ನು ನಿರಂತರವಾಗಿ ಸುಲಿಗೆ ಮಾಡುತ್ತಿದೆ. ಕೇವಲ ಹಣ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಪ್ರತಿಯೊಂದರಲ್ಲಿ ದುಡ್ಡು ಮಾಡುವ ಬಗ್ಗೆಯಷ್ಟೇ ಆಲೋಚನೆ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು.
ಈ ಸರ್ಕಾರದಲ್ಲಿ ಹಣ ಇಲ್ಲ. ಅದಕ್ಕಾಗಿ ಕಂಡ ಕಂಡ ಕಡೆಗೆಲ್ಲಾ ಹಣಕ್ಕೆ ಕೈ ಹಾಕುತ್ತಿದೆ. ಬೆಂಗಳೂರಿನ ಗುಂಡಿ ಮುಚ್ಚೋದು ಇರಲಿ. ರಾಜ್ಯದಲ್ಲಿರುವ ಗುಂಡಿಗಳನ್ನೂ ಮುಚ್ಚೋಕೂ ಇವರಿಂದ ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ ಅವರು, ಜೆಡಿಎಸ್ ಕೊಡುಗೆ ಏನು ಎಂದು ಹಾಸನದಲ್ಲಿ ಸಿಎಂ ಪ್ರಶ್ನೆ ಮಾಡಿದ್ದಾರೆ. ನನ್ನ ಆರೋಗ್ಯ ವಿಚಾರಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ದೆಹಲಿಗೆ ಬಂದಿದ್ದರು. 2018 ರಲ್ಲಿ ನೀವು ಕೊಟ್ಟ 500 ಕೋಟಿ ರು. ಅನುದಾನದಲ್ಲಿಯೇ ಇನ್ನೂ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳುತ್ತಾರೆ. ಅನುದಾನದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು, ನಾನು ಅಧಿಕಾರದಲ್ಲಿ ಇದ್ದಾಗ ಎಷ್ಟು ಹಣ ಕೊಟ್ಟಿದ್ದೇನೆ, ಇವರು ಎಷ್ಟು ಕೊಟ್ಟಿದ್ದಾರೆ ಎಂಬ ಬಗ್ಗೆ ಜನರ ಮುಂದೆ ದಾಖಲೆ ಇಡಲಿ ಎಂದು ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.