* ಉಕ್ರೇನ್ ಮೇಲೆ ಯುದ್ದ ಸಾರಿರುವ ರಷ್ಯಾ ಮೇಲೆ ಮತ್ತಷ್ಟು ಒತ್ತಡ ಹೇರಿದ ಕ್ರೀಡಾ ಜಗತ್ತು
* ಹಲವು ಕ್ರೀಡಾ ಸಂಸ್ಥೆಗಳು ರಷ್ಯಾದ ತಂಡಗಳು, ಆಟಗಾರರಿಗೆ ನಿಷೇಧ ವಿಧಿಸಿವೆ
* ರಷ್ಯಾವನ್ನು ಬೆಂಬಲಿಸುತ್ತಿರುವ ನೆರೆ ರಾಷ್ಟ್ರ ಬೆಲಾರಸ್ ವಿರುದ್ಧವೂ ಕ್ರೀಡಾ ಸಂಸ್ಥೆಗಳು ನಿರ್ಬಂಧ
ಮಾಸ್ಕೋ(ಫೆ.02): ಉಕ್ರೇನ್ (Ukraine) ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ (Russia) ಕ್ರೀಡಾ ಜಗತ್ತಿನಿಂದ ಮತ್ತಷ್ಟು ಬಹಿಷ್ಕಾರ ಎದುರಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ತನ್ನ ಸದಸ್ಯ ಸಂಸ್ಥೆ ಹಾಗೂ ಒಕ್ಕೂಟಗಳಿಗೆ ರಷ್ಯಾ ವಿರುದ್ಧ ನಿರ್ಬಂಧ ವಿಧಿಸಲು ಕರೆ ಕೊಟ್ಟ ಬೆನ್ನಲ್ಲೇ ಹಲವು ಕ್ರೀಡಾ ಸಂಸ್ಥೆಗಳು ರಷ್ಯಾದ ತಂಡಗಳು, ಆಟಗಾರರಿಗೆ ನಿಷೇಧ ವಿಧಿಸಿವೆ. ರಷ್ಯಾವನ್ನು ಬೆಂಬಲಿಸುತ್ತಿರುವ ನೆರೆ ರಾಷ್ಟ್ರ ಬೆಲಾರಸ್ ವಿರುದ್ಧವೂ ಕ್ರೀಡಾ ಸಂಸ್ಥೆಗಳು ನಿರ್ಬಂಧ ಹೇರಿದ್ದು, ಇನ್ನಷ್ಟು ಕ್ರೀಡಾಕೂಟಗಳಿಂದ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ.
ಸೋಮವಾರ ರಷ್ಯಾ ಹಾಗೂ ಬೆಲಾರಸ್‌ನಲ್ಲಿ ನಿಗದಿಯಾಗಿದ್ದ ಎಲ್ಲಾ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳನ್ನು (Badminton Tournament) ರದ್ದುಗೊಳಿಸಿದ್ದ ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ ಮಂಗಳವಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಎರಡೂ ರಾಷ್ಟ್ರಗಳ ಕ್ರೀಡಾಪಟುಗಳಿಗೆ ನಿರ್ಬಂಧ ವಿಧಿಸಿದೆ. ಇನ್ನು, ರಷ್ಯಾದಲ್ಲಿ ನಿಗದಿಯಾಗಿದ್ದ ವಿಶ್ವ ಕಿರಿಯರ ಈಜು ಚಾಂಪಿಯನ್‌ಶಿಪ್ ಅನ್ನು ಸ್ಥಳಾಂತರಗೊಳಿಸಿರುವ ವಿಶ್ವ ಈಜು ಫೆಡರೇಶನ್ ಅಲ್ಲಿನ ಸ್ಪರ್ಧಿಗಳಿಗೂ ನಿರ್ಬಂಧ ವಿಧಿಸಿದೆ. ಆದರೆ ಬೇರೆ ತಂಡಗಳ ಪರ, ರಷ್ಯಾ ಹಾಗೂ ಬೆಲಾರಸ್‌ನ ಧ್ವಜ, ಹೆಸರು ಇಲ್ಲದೇ ಸ್ಪರ್ಧಿಸಲು ಅನುಮತಿ ನೀಡಿದೆ.
ಸ್ಕೇಟಿಂಗ್ ಯೂನಿಯನ್‌ನಿಂದ ನಿಷೇಧ
ರಷ್ಯಾದ ಪ್ರಸಿದ್ಧ ಕ್ರೀಡೆಯಾಗಿರುವ ಸ್ಕೇಟಿಂಗ್‌ನಿಂದಲೂ ರಷ್ಯಾ ಹಾಗೂ ಬೆಲಾರಸ್‌ನ ಸ್ಪರ್ಧಿಗಳಿಗೆ ನಿಷೇಧ ವಿಧಿಸಲಾಗಿದೆ. ಈ ಬಗ್ಗೆ ಮಂಗಳವಾರ ವಿಶ್ವ ಸ್ಕೇಟಿಂಗ್ ಯೂನಿಯನ್ ಪ್ರಕಟಣೆ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಅಂ.ರಾ. ಐಸ್ ಸ್ಕೇಟಿಂಗ್ ಸ್ಪರ್ಧೆಗಳಿಂದ ರಷ್ಯಾ, ಬೆಲಾರಸ್‌ನ ಸ್ಪರ್ಧಿಗಳನ್ನು ಹೊರಹಾಕಲಾಗಿದೆ ಎಂದು ತಿಳಿಸಿದೆ.
ವಿಶ್ವ ವಾಲಿಬಾಲ್ ಆತಿಥ್ಯದಿಂದ ಕೊಕ್
ಆಗಸ್ಟ್, ಸೆಪ್ಟಂಬರ್‌ನಲ್ಲಿ ರಷ್ಯಾದಲ್ಲಿ ನಿಗದಿಯಾಗಿದ್ದ 2022ರ ಪುರುಷರ ವಿಶ್ವ ವಾಲಿಬಾಲ್ ಚಾಂಪಿಯನ್‌ಶಿಪ್ ಆತಿಥ್ಯದಿಂದ ರಷ್ಯಾಗೆ ಕೊಕ್ ನೀಡಲಾಗಿದೆ. ಈ ಬಗ್ಗೆ ವಿಶ್ವ ವಾಲಿಬಾಲ್ ಫೆಡರೇಶನ್ ಮಂಗಳವಾರ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಯಾವ ದೇಶಕ್ಕೆ ಸ್ಥಳಾಂತರಗೊಂಡಿದೆ ಎನ್ನುವ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದೆ.
ಫುಟ್ಬಾಲ್ ತಂಡಗಳ ಅಮಾನತು
ರಷ್ಯಾದಲ್ಲಿ ಯಾವುದೇ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ನಡೆಸದಿರಲು ನಿರ್ಧರಿಸಿದ್ದ ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್(ಫಿಫಾ) ಹಾಗೂ ಯುರೋಪಿಯನ್ ಫುಟ್ಬಾಲ್ ಸಂಸ್ಥೆಗಳ ಸಂಘ(ಯುಇಎಫ್‌ಎ) ಮಂಗಳವಾರ ರಷ್ಯಾದ ರಾಷ್ಟ್ರೀಯ ಹಾಗೂ ಕ್ಲಬ್ ತಂಡಗಳನ್ನು ಅಮಾನತು ಮಾಡಿ ಆದೇಶಿಸಿದೆ. ಜೊತೆಗೆ 2022ರ ವಿಶ್ವಕಪ್ ಅರ್ಹತಾ ಸುತ್ತಿನಿಂದ ರಷ್ಯಾ ತಂಡವನ್ನು ಹೊರಗಿಡಲಾಗಿದೆ.
Russia Ukraine Crisis: ಪುಟಿನ್‌ಗೆ ನೀಡಿದ್ದ ಗೌರವ ಬ್ಲ್ಯಾಕ್‌ಬೆಲ್ಟ್ ಹಿಂಪಡೆದ ವರ್ಲ್ಡ್ ಟೇಕ್ವಾಂಡೋ!
ಭಾರತದ ಸೌಹಾರ್ದ ಪಂದ್ಯ ರದ್ದು
ಚೀನಾದಲ್ಲಿ ನಿಗದಿಯಾಗಿರುವ 2024ರ ಎಎಫ್‌ಸಿ ಏಷ್ಯನ ಕಪ್ ಫುಟ್ಬಾಲ್ ಟೂರ್ನಿಯ ಸಿದ್ಧತೆಯ ಭಾಗವಾಗಿ ನಿಗದಿಯಾಗಿದ್ದ ಭಾರತ ಹಾಗೂ ಬೆಲಾರಸ್ ನಡುವಿನ ಸೌಹಾರ್ದ ಫುಟ್ಬಾಲ್ ಪಂದ್ಯ ರದ್ದುಗೊಳಿಸಲಾಗಿದೆ. ಪಂದ್ಯ ಮಾ.26ಕ್ಕೆ ಬಹರೇನ್ ರಾಜಧಾನಿ ಮನಾಮದಲ್ಲಿ ನಿಗದಿಯಾಗಿತ್ತು. ‘ಬೆಲಾರಸ್ ಅಮಾನತುಗೊಂಡಿರುವುದರಿಂದ ನಾವು ಅವರ ವಿರುದ್ಧ ಆಡಲ್ಲ’ ಎಂದು ಭಾರತೀಯ ಫುಟ್ಬಾಲ್ ಫೆಡರೇಶನ್ ಕಾರ‍್ಯದರ್ಶಿ ಕುಶಾಲ್ ದಾಸ್ ತಿಳಿಸಿದ್ದಾರೆ.
ನಿಷೇಧಕ್ಕೆ ಬಾಕ್ಸಿಂಗ್ ಒಕ್ಕೂಟ ಚಿಂತನೆ
ಅಂ.ರಾ. ಒಲಿಂಪಿಕ್ ಸಮಿತಿಯ ಸೂಚನೆ ಮೇರೆಗೆ ರಷ್ಯಾ, ಬೆಲಾರಸ್‌ನ ಸ್ಪರ್ಧಿಗಳಿಗೆ ಬಾಕ್ಸಿಂಗ್ ಟೂರ್ನಿಗಳಲ್ಲಿ ಅವಕಾಶ ನೀಡದಿರಲು ವಿಶ್ವ ಬಾಕ್ಸಿಂಗ್ ಫೆಡರೇಶನ್(ಐಬಿಎಫ್) ಚಿಂತನೆ ನಡೆಸಿದೆ. ಈ ಬಗ್ಗೆ ಫೆಡರೇಶನ್ ಮುಂದಿನ ವಾರ ಸಭೆ ನಡೆಸಿ ಚರ್ಚಿಸಲಿದೆ. ಸದ್ಯ ರಷ್ಯಾದ ಉಮರ್ ಕ್ರೆಮ್‌ಲೆವ್ ಫೆಡರೇಶನ್‌ನ ಅಧ್ಯಕ್ಷರಾಗಿದ್ದು, ಜೂನ್‌ನಲ್ಲಿ ಚುನಾವಣೆ ನಡೆಸಿ ಹೊಸ ಅಧ್ಯಕ್ಷರ ಆಯ್ಕೆಗೆ ಐಬಿಎಫ್ ಮುಂದಾಗಲಿದೆ ಎನ್ನಲಾಗಿದೆ.
ರಷ್ಯಾ ಸ್ಪರ್ಧಿ ವಿರುದ್ಧ ಆಡಲು ನಕಾರ
ಟೆನಿಸ್ ಟೂರ್ನಿಯಲ್ಲಿ ರಷ್ಯಾ ಎದುರಾಳಿಗಳ ವಿರುದ್ಧ ಆಡುವುದಿಲ್ಲ ಎಂದ ಉಕ್ರೇನ್‌ನ ಟೆನಿಸ್ ತಾರೆ ಎಲೆನಾ ಸ್ವಿಟೋಲಿನಾ ಹೇಳಿದ್ದಾರೆ. ಮೊಂಟೆರ್ರೆ ಓಪನ್ ಟೆನಿಸ್‌ನ ಮೊದಲ ಸುತ್ತಿನಲ್ಲಿ ತಮಗೆ ಎದುರಾಗಿರುವ ರಷ್ಯಾದ ಅನಾಸ್ತೇಸಿಯಾ ಅಥವಾ ಬೇರೆ ಯಾವುದೇ ಸ್ಪರ್ಧಿ ವಿರುದ್ಧ ಆಡುವುದಿಲ್ಲ. ರಷ್ಯಾ ಹಾಗೂ ಬೆಲಾರಸ್‌ನ ಸ್ಪರ್ಧಿಗಳ ವಿರುದ್ಧ ಆಡಬೇಕಾದರೆ ಅವರು ತಮ್ಮ ದೇಶದ ಬಾವುಟದ ಅಡಿ ಸ್ಪರ್ಧಿಸಬಾರದು ಎಂದಿದ್ದಾರೆ.