Kannada Rajyotsava| ರೋಹನ್ ಬೋಪಣ್ಣ ಸೇರಿ ನಾಲ್ವರಿಗೆ ಒಲಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

By Suvarna News  |  First Published Nov 1, 2021, 8:42 AM IST

* 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

* 66 ಸಾಧಕರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

* ನಾಲ್ವರು ಕ್ರೀಡಾಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ


ಬೆಂಗಳೂರು(ನ.01) 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ (Karnataka Rajyotsava Award) ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 66 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ರಾಜ್ಯದ ನಾಲ್ವರು ಕ್ರೀಡಾ ಸಾಧಕರನ್ನು ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. 

"

Tap to resize

Latest Videos

undefined

ಗ್ರ್ಯಾನ್‌ ಸ್ಲಾಂ ವಿಜೇತ ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ (Rohan Bopanna), ವೀಲ್ಹ್‌ಚೇರ್‌ ಟೆನಿಸ್‌ ಆಟಗಾರ ಕೆ.ಗೋಪಿನಾಥ್‌, ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್‌ ರೋಹಿತ್‌ ಕುಮಾರ್‌ ಕಟೀಲ್‌ ಹಾಗೂ ಕಬಡ್ಡಿ ಆಟಗಾರ ಎ.ನಾಗರಾಜ್‌ಗೆ ಪ್ರಶಸ್ತಿ ಲಭಿಸಿದೆ.

2017ರ ಫ್ರೆಂಚ್‌ ಓಪನ್‌ನ ಮಿಶ್ರ ಡಬಲ್ಸ್‌ (French Open Mixed Doubles) ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದ ಬೋಪಣ್ಣ, ಡೇವಿಸ್‌ ಕಪ್‌ (Davis Cup) ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೇ ಹಲವು ಎಟಿಪಿ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದಾರೆ. ಇನ್ನು 2013ರ ವರೆಗೂ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಆಡುತ್ತಿದ್ದ ಗೋಪಿನಾಥ್‌, ಅಪಘಾತದ ಬಳಿಕ ವೀಲ್ಹ್‌ಚೇರ್‌ ಟೆನಿಸ್‌ ಆಯ್ದುಕೊಂಡರು. ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದಾರೆ.

Kannada Rajyotsava| ಕನ್ನಡ ಬೆಳೆಸಲು ಕನ್ನಡಿಗರೇನು ಮಾಡಬಹುದು?

ಮಾಜಿ ಹೈಜಂಪ್‌ ಪಟು ರೋಹಿತ್‌ ಕುಮಾರ್‌, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್‌ ಆಗಿದ್ದರು. ವಿಶ್ವ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಭಾರತದ ಮೊದಲ ಹೈಜಂಪ್‌ ಪಟು ಎನ್ನುವ ಹಿರಿಮೆಗೂ ಪಾತ್ರರಾಗಿದ್ದರು. 2013ರಲ್ಲಿ ಬ್ರೆಜಿಲ್‌ನಲ್ಲಿ ನಡೆದಿದ್ದ ವಿಶ್ವ ಮಾಸ್ಟ​ರ್ಸ್‌f ಅಥ್ಲೆಟಿಕ್ಸ್‌ ಚಾಂಪಿಯನ್‌ನಲ್ಲಿ ಭಾರತ ತಂಡದ ವ್ಯವಸ್ಥಾಪಕರಾಗಿಯೂ ಕಾರ‍್ಯನಿರ್ವಹಿಸಿದ್ದರು.

ಮೊದಲ ಬಾರಿಗೆ ಸೈನಿಕರ ಸೇವೆ ಗುರುತಿಸಿ ಕಾರ್ಗಿಲ್‌ ಯೋಧನಿಗೆ  ಪ್ರಶಸ್ತಿ

ಹುಬ್ಬಳ್ಳಿ: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ದೇಶದ ಸೈನಿಕರ ಸೇವೆಯನ್ನು ಗುರುತಿಸಿ ರಾಜ್ಯದ ಹೆಮ್ಮೆಯ ಯೋಧನಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ. 1999ರ ಕಾರ್ಗಿಲ್‌ ಯುದ್ಧದಲ್ಲಿ ಶತ್ರು ಸೈನ್ಯದೊಂದಿಗೆ ವೀರಾವೇಶದಿಂದ ಯುದ್ಧ ಮಾಡಿ, ಪ್ರಾಣದ ಹಂಗು ತೊರೆದು ಎದುರಾಳಿಗಳ ಬಂಕರ್‌ ನಾಶ ಮಾಡಿದ್ದ ಕ್ಯಾಪ್ಟನ್‌ ನವೀನ್‌ ನಾಗಪ್ಪ ಅವರಿಗೆ 2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Kannada Rajyotsava| ಕನ್ನಡ ಉಳಿಸಿ, ಬೆಳೆಸಲು ಸರ್ಕಾರ ಏನು ಮಾಡಬೇಕು?

1973ರ ಸೆಪ್ಟೆಂಬರ್ 5ರಂದು ಜನಿಸಿದ ನಾಗಪ್ಪ, ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಉದ್ಯೋಗಕ್ಕಾಗಿ ಅಮೆರಿಕಗೆ ಹೋಗುವ ಅವಕಾಶ ಒದಗಿ ಬಂದಿದ್ದರೂ ಆ ಅವಕಾಶ ತ್ಯಜಿಸಿ ಭಾರತೀಯ ಸೇನೆಗೆ ಸೇರಿದರು. 1999ರಲ್ಲಿ ಜಮ್ಮು-ಕಾಶ್ಮೀರ ರೈಫಲ್ಸ್‌ನ 13ನೇ ಬೆಟಾಲಿಯನ್‌ನಲ್ಲಿ ಕೆಲಸ ನಿರ್ವಹಿಸಿದರು. ಪಾಕಿಸ್ತಾನ ವಿರುದ್ದ ಕಾರ್ಗಿಲ್‌ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದರು. ಯುದ್ಧ ನಿರ್ಣಾಯಕ ಹಂತ ತಲುಪಿದ್ದಾಗ, ಪ್ರಾಣಾಪಾಯ ಲೆಕ್ಕಿಸದೆ ಶತ್ರುವಿನ ಬಂಕರ್‌ ಎಡೆಗೆ ನುಗ್ಗಿದರು. ಈ ಹೋರಾಟದಲ್ಲಿ ಶತ್ರು ಎಸೆದ ಗ್ರೆನೇಡ್‌ ಸ್ಫೋಟಿಸಿ ಇವರ 2 ಕಾಲುಗಳಿಗೆ ತೀವ್ರ ಗಾಯಗಳಾದವು. ಪರಿಣಾಮ ಎಡಗಾಲಿನ ಹೆಬ್ಬೆರಳು ಇಲ್ಲವಾಯಿತು. ಆಂಶಿಕ ಲಕ್ವದಿಂದಾಗಿ ಬಲಗಾಲು ಆಕಾರ ಕಳೆದುಕೊಂಡಿತು. 21 ತಿಂಗಳ ಆಸ್ಪತ್ರೆ ವಾಸ ಹಾಗೂ 8 ಶಸ್ತ್ರ ಚಿಕಿತ್ಸೆಗಳ ಆನಂತರ ಇವರು ದೈಹಿಕವಾಗಿ ಸದೃಢರಲ್ಲ ಎಂದು ಘೋಷಿಸಿ ಭಾರತೀಯ ಸೈನ್ಯದ ಸೇವೆಯಿಂದ ಇವರನ್ನು ಬಿಡುಗಡೆ ಮಾಡಲಾಯಿತು. ಭಾರತ ಸರ್ಕಾರವು ಇವರಿಗೆ ಸೇನಾ ಮೆಡಲ್ ಪುರಸ್ಕಾರ ನೀಡಿ ಗೌರವಿಸಿದೆ.

ಇದೇ ಮೊದಲ ಬಾರಿಗೆ ಸೈನಿಕರ ಸೇವೆಯನ್ನು ಗುರುತಿಸಿ ಸರ್ಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತುಂಬಾ ಖುಷಿ ತಂದಿದೆ. ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಕನ್ನಡಿಗರಿಗೆ ಇದರ ಗೌರವ ಸಲ್ಲುತ್ತದೆ. ಈ ಪದ್ಧತಿ ಪ್ರತಿ ವರ್ಷ ಮುಂದುವರಿಯಬೇಕು ಎಂದು ಕ್ಯಾಪ್ಟನ್‌ ನವೀನ್‌ ನಾಗಪ್ಪ ಸಂತಸ ವ್ಯಕ್ತವಾಗಿದೆ.
 

click me!