
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಭಾರತದ ಏಕೈಕ ಪುರುಷ ಕುಸ್ತಿಪಟು ಅಮನ್ ಶೆಹ್ರಾವತ್, ಇದೀಗ ಪುರುಷರ 57 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಬೇನಿಯಾದ ಮಾಜಿ ವಿಶ್ವ ಚಾಂಪಿಯನ್ ಝೆಲಿಮ್‌ಖಾನ್ ಅಬಕಾರ್ವ್ ಎದುರು 12-0 ಅಂತರದ ಟೆಕ್ನಿಕಲ್ ಸೂಪಿರಿಯಾರಿಟಿ ಆಧಾರದಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇನ್ನೊಂದು ಗೆಲುವು ಅಮನ್ ಅವರಿಗೆ ಚೊಚ್ಚಲ ಒಲಿಂಪಿಕ್ ಪದಕ ಖಚಿತಪಡಿಸಲಿದೆ. ಇದೀಗ ಅಮನ್ ಸೆಮಿಫೈನಲ್‌ನಲ್ಲಿ ನಂಬರ್ 1 ಶ್ರೇಯಾಂಕಿತ ಜಪಾನ್‌ನ ರೈ ಹಿಗುಚಿ ಅವರನ್ನು ಎದುರಿಸಲಿದ್ದಾರೆ.
ಹೌದು, 5ನೇ ಶ್ರೇಯಾಂಕಿತ ಅಮನ್, ಕ್ವಾರ್ಟರ್ ಫೈನಲ್‌ನಲ್ಲಿ ಅಲ್ಬೇನಿಯಾದ ನಾಲ್ಕನೇ ಶ್ರೇಯಾಂಕಿತ ಕುಸ್ತಿಪಟು ಎದುರು ದಿಟ್ಟ ಹೋರಾಟ ತೋರಿದರು. ಆರಂಭದಲ್ಲಿ 3-0 ಮುನ್ನಡೆ ಕಾಯ್ದುಕೊಂಡಿದ್ದ ಭಾರತದ ಕುಸ್ತಿಪಟು, ಇದಾದ ಬಳಿಕ ಮಿಂಚಿನ ರೀತಿಯಲ್ಲಿ ಎದುರಾಳಿ ಕಾಲನ್ನು ಹಿಡಿದು ಮೂರು ಬಾರಿ ರೋಲ್ ಮಾಡುವ ಮೂಲಕ 12-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
Paris Olympics 2024 ಸತತ ಎರಡನೇ ಕಂಚು ಗೆಲ್ಲಲು ಭಾರತ ತಂಡ ರೆಡಿ: ಶ್ರೀಜೇಶ್‌ಗೆ ಗೆಲುವಿನ ವಿದಾಯ?
ಇನ್ನು ಇದಕ್ಕೂ ಮುನ್ನ 21 ವರ್ಷದ ಅಮನ್ ಶೆಹ್ರಾವತ್, ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಷ್ಯಾ ಮೂಲದ ಮರ್ಸಿಡಿನಿಯನ್ ಕುಸ್ತಿಪಟು ವ್ಲಾಡಿಮೀರ್ ಇಗರೋವ್ ಎದುರು 10-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಅನಾಯಾಸವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಪ್ರಿಕ್ವಾರ್ಟರ್ ನಲ್ಲಿ ಮೊದಲಾರ್ಧದಲ್ಲಿ ಅಮನ್ 6-0 ಮುನ್ನಡೆ ಕಾಯ್ದುಕೊಂಡಿದ್ದರು. ಇದಾದ ಬಳಿಕ ದ್ವಿತಿಯಾರ್ಧದಲ್ಲೂ ಅದೇ ಪಟ್ಟು ಮುಂದುವರೆಸಿದ ಅಮನ್, ಟೆಕ್ನಿಕಲ್ ಸೂಪಿರಿಯಾರಿಟಿ ಆಧಾರದಲ್ಲಿ 10-0 ಅಂತರದಲ್ಲಿ ಗೆಲುವು ಸಾಧಿಸಿದರು.
ಇನ್ನೊಂದೆಡೆ ಮಹಿಳೆಯರ 57 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಭಾರತದ ಅನ್ಶು ಮಲಿಕ್ ಮೊದಲ ಸುತ್ತಿನಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.