Sri Kanteerava Stadium: ಕೊನೆಗೂ ಕಂಠೀರವಕ್ಕೆ ಹೊಸ ಟ್ರ್ಯಾಕ್‌ ಮೆರುಗು

By Kannadaprabha News  |  First Published Feb 23, 2022, 11:01 AM IST

* ರಾಜ್ಯ ರಾಜಧಾನಿ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಹೊಸ ಮೆರುಗು

* ಯೋಗ್ಯವಲ್ಲದ ಸಿಂಥೆಟಿಕ್‌ ಟ್ರ್ಯಾಕ್‌ ಕಿತ್ತು ಹೊಸ ಟ್ರ್ಯಾಕ್‌ ಅಳವಡಿಸುವ ಕಾರ್ಯ ಬಹುತೇಕ ಪೂರ್ಣ

* ಇದೀಗ 2 ವರ್ಷಗಳ ಬಳಿಕ ಟ್ರ್ಯಾಕ್‌ ಬಳಕೆಗೆ ಸಿದ್ಧಗೊಳ್ಳುತ್ತಿದೆ


- ನಾಸಿರ್ ಸಜಿಪ, ಕನ್ನಡಪ್ರಭ

ಬೆಂಗಳೂರು(ಫೆ.23): ನಗರದ ಶ್ರೀ ಕಂಠೀರವ ಕ್ರಿಡಾಂಗಣದಲ್ಲಿನ ಸಿಂಥೆಟಿಕ್‌ ಟ್ರ್ಯಾಕ್‌ ಕಾಮಗಾರಿ ಪೂರ್ಣಗೊಳ್ಳಲು 2 ವರ್ಷಗಳಿಂದ ಕಾಯುತ್ತಿದ್ದ ಅಥ್ಲೀಟ್‌ಗಳಿಗೆ ಕೊನೆಗೂ ಶುಭ ಸುದ್ದಿ ಸಿಕ್ಕಿದೆ. ಗುಂಡಿ ಬಿದ್ದು ಬಳಕೆಗೆ ಯೋಗ್ಯವಲ್ಲದ ಸಿಂಥೆಟಿಕ್‌ ಟ್ರ್ಯಾಕ್‌ ಕಿತ್ತು ಹೊಸ ಟ್ರ್ಯಾಕ್‌ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಅಥ್ಲೀಟ್‌ಗಳ ದೂರು, ಕ್ರೀಡಾಭಿಮಾನಿಗಳ ಆಕ್ರೋಶ, ಅಧಿಕಾರಿಗಳ ಜಾಣ ಕುರುಡತನದ ವಿರುದ್ಧ ಸತತ ವರದಿ ಬಳಿಕ ಎಚ್ಚೆತ್ತುಕೊಂಡಿದ್ದ ರಾಜ್ಯ ಕ್ರೀಡಾ ಇಲಾಖೆ ಸಿಂಥೆಟಿಕ್‌ ಟ್ರ್ಯಾಕ್‌ ಅಭಿವೃದ್ಧಿ ಕಾರ್ಯವನ್ನು 2019-20ರಲ್ಲಿ ಕೈಗೆತ್ತಿಕೊಂಡಿತ್ತು. ಆದರೆ ಕೋವಿಡ್‌ ಸಾಂಕ್ರಾಮಿಕದ ಕಾರಣ ಟ್ರ್ಯಾಕ್‌ಗೆ ಬೇಕಾದ ಕಚ್ಚಾವಸ್ತುಗಳನ್ನು ಸೂಕ್ತ ಸಮಯದಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಲಾಕ್‌ಡೌನ್‌ನಿಂದ ಕೆಲಸಗಾರರ ಅಲಭ್ಯತೆ, ವಿಪರೀತ ಮಳೆಯ ಕಾರಣದಿಂದಲೂ ಟ್ರ್ಯಾಕ್‌ ಅಳವಡಿಕೆ ಕಾರ್ಯ ಕುಂಠಿತಗೊಂಡಿತ್ತು. ಇದೀಗ 2 ವರ್ಷಗಳ ಬಳಿಕ ಟ್ರ್ಯಾಕ್‌ ಬಳಕೆಗೆ ಸಿದ್ಧಗೊಳ್ಳುತ್ತಿದೆ.

Tap to resize

Latest Videos

undefined

ಹಳೆ ಟ್ರ್ಯಾಕ್‌ ಕಿತ್ತು ಯುರೋಪ್‌ನಿಂದ ತರಿಸಿದ ಹೊಸ ಟ್ರ್ಯಾಕ್‌ ಅಳವಡಿಸಲಾಗಿದ್ದು, ಫೆಬ್ರವರಿ ತಿಂಗಳ ಅಂತ್ಯಕ್ಕೆ ಎಲ್ಲ ಕೆಲಸ ಪೂರ್ಣಗೊಳ್ಳಲಿದೆ. ಬಳಿಕ ಅಂತಾರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಶನ್‌(ಐಎಎಎಫ್‌) ಅಧಿಕಾರಿಗಳು ಟ್ರ್ಯಾಕ್‌ ಪರಿಶೀಲನೆಗೆ ಆಗಮಿಸಲಿದ್ದಾರೆ. ಅವರಿಂದ ಬಳಕೆಗೆ ಅನುಮತಿ ಪತ್ರ ಸಿಕ್ಕ ಬಳಿಕ ಉದ್ಘಾಟನೆ ಮಾಡುವುದಾಗಿ ಕ್ರೀಡಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

7 ವರ್ಷ ಬಾಳಿಕೆ: 1996-97ರಲ್ಲಿ ಕಂಠೀರವ ಕ್ರೀಡಾಂಗಣಲ್ಲಿ ರಾಷ್ಟ್ರೀಯ ಅಥ್ಲೆಟಿಕ್‌ ಗೇಮ್ಸ್‌ ಆಯೋಜಿಸುವ ಸಲುವಾಗಿ ಮೊದಲ ಬಾರಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಲಾಗಿತ್ತು. ಕೆಲ ವರ್ಷಗಳ ಬಳಿಕ ಟ್ರ್ಯಾಕ್‌ ಹಾಳಾಗಿದ್ದರಿಂದ 2006ರಲ್ಲಿ ದುರಸ್ಥಿ ಕಾರ‍್ಯ ನಡೆಸಲಾಗಿತ್ತು. ಸರಿಯಾದ ನಿರ್ವಹಣೆ ಕೊರತೆಯಿಂದ ಹಾಳಾಗಿದ್ದ ಟ್ರ್ಯಾಕ್‌ಗೆ 2013ರಲ್ಲಿ ತೇಪೆ ಹಾಕಲಾಗಿತ್ತು. ಆದರೆ 2018ರ ವೇಳೆಗೆ ಸಂಪೂರ್ಣವಾಗಿ ಹಾಳಾಗಿ ಗುಂಡಿ ಬಿದ್ದಿತ್ತು. ಹೊಸದಾಗಿ ನಿರ್ಮಿಸಿರುವ ಟ್ರ್ಯಾಕ್‌ ಸುಮಾರು 7 ವರ್ಷಗಳ ಕಾಲ ಬಾಳಿಕೆ ಬರಲಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೈತಪ್ಪಿದ್ದ ಕ್ರೀಡಾಕೂಟ

ಹಳೆಯ ಟ್ರ್ಯಾಕ್‌ನಲ್ಲಿ ಕ್ರೀಡಾಪಟುಗಳು ಅಭ್ಯಾಸ ನಡೆಸುತ್ತಿದ್ದಾಗ ಹಲವರು ಬಿದ್ದು ಗಾಯಗೊಂಡ ಘಟನೆಗಳೂ ನಡೆದಿತ್ತು. ಟ್ರ್ಯಾಕ್‌ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌, ರಾಷ್ಟ್ರೀಯ ಕೂಟದ ಆತಿಥ್ಯದ ಅವಕಾಶವನ್ನೂ ಹಿಂಪಡೆದು ಬೇರೆ ರಾಜ್ಯಕ್ಕೆ ಸ್ಥಳಾಂತರಿಸಿತ್ತು. ಇದೀಗ ಹೊಸ ಟ್ರ್ಯಾಕ್‌ ಆಗಿದ್ದರಿಂದ ಮುಂದಿನ ತಿಂಗಳುಗಳಲ್ಲಿ ಖೇಲೋ ಇಂಡಿಯಾದ ಯುನಿವರ್ಸಿಟಿ ಗೇಮ್ಸ್‌ಗಳು ಸೇರಿದಂತೆ ರಾಷ್ಟ್ರೀಯ ಕೂಟಗಳು ಇಲ್ಲಿ ನಡೆಯುವ ನಿರೀಕ್ಷೆಯಿದೆ.

5 ಕೋಟಿ ರು. ಖರ್ಚು:

ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಕೆ ಕಾರ್ಯದ ಗುತ್ತಿಗೆಯನ್ನು ಡೆಲ್ಲಿ ಮೂಲಕ ಅಡ್ವಾನ್ಸ್‌ಡ್‌ ಸ್ಪೋಟ್ಸ್‌ರ್‍ ಟೆಕ್ನಾಲಜೀಸ್‌ ಸಂಸ್ಥೆ ವಹಿಸಿಕೊಂಡಿತ್ತು. ಟ್ರ್ಯಾಕ್‌ ನಿರ್ಮಾಣಕ್ಕೆ ಸುಮಾರು 5.06 ಕೋಟಿ ರು. ಖರ್ಚಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಭ್ಯಾಸಕ್ಕೆ ಬದಲಿ ವ್ಯವಸ್ಥೆ

ಕಂಠೀರವದ ಟ್ರ್ಯಾಕ್‌ ನವೀಕರಣ ಕಾಮಗಾರಿ ಆರಂಭವಾದ ಬಳಿಕ ಅಥ್ಲೀಟ್‌ಗಳು ಕ್ರೀಡಾಂಗಣದ ಸಮೀಪದ 200 ಮೀಟರ್‌ ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಅಲ್ಲದೇ, ನಗರದ ಹೊರವಲಯದಲ್ಲಿರುವ ವಿದ್ಯಾನಗರದ ಕ್ರೀಡಾ ಆವರಣದಲ್ಲಿರುವ 400 ಮೀ. ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸಲು ಇಲಾಖೆ ವ್ಯವಸ್ಥೆ ಮಾಡಿತ್ತು.

ಸರಣಿ ವರದಿ ಮಾಡಿದ್ದ ‘ಕನ್ನಡಪ್ರಭ’

ಕಿತ್ತು ಹೋಗಿದ್ದ ಟ್ರ್ಯಾಕ್‌, ಕ್ರೀಡಾ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ‘ಕನ್ನಡಪ್ರಭ’ 2019ರ ಮೇ ತಿಂಗಳಲ್ಲಿ ಸರಣಿ ವರದಿಗಳನ್ನು ಮಾಡಿ ಸರ್ಕಾರವನ್ನು ಎಚ್ಚರಿಸಿತ್ತು. ಆ ಬಳಿಕ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಆರ್‌.ಅಶೋಕ್‌ ಹಾಗೂ ಕೆಲ ಶಾಸಕರು ಕಂಠೀರವ ಕ್ರೀಡಾಂಗಣಕ್ಕೆ ದಿಢೀರ್‌ ದಾಳಿ ಮಾಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು. ನಂತರ ಟ್ರ್ಯಾಕ್‌ ನವೀಕರಣ ಕೆಲಸ ಕೈಗೆತ್ತಿಕೊಂಡಿದ್ದರೂ ಕೋವಿಡ್‌ನಿಂದಾಗಿ ಕುಂಠಿತಗೊಂಡಿತ್ತು. ಇದೀಗ 2 ವರ್ಷಗಳ ಬಳಿಕ ಟ್ರ್ಯಾಕ್‌ ಬಳಕೆಗೆ ಸಿದ್ಧಗೊಳ್ಳುತ್ತಿದ್ದು, ಕ್ರೀಡಾಂಗಣದ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದ ‘ಕನ್ನಡಪ್ರಭ’ ಸರಣಿ ವರದಿಗಳು ಯಶಸ್ಸು ಕಂಡಿವೆ.

click me!