ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಸರ್ಕಾರದಿಂದ ಹೈಟೆಕ್‌ ಸ್ಪರ್ಶ

By Suvarna NewsFirst Published Feb 12, 2021, 2:57 PM IST
Highlights

ಬೆಂಗಳೂರಿನ ಹೃದಯಭಾಗದಲ್ಲಿರುವ ಶ್ರೀ ಕಂಠೀರವ ಸ್ಟೇಡಿಯಂಗೆ ಹೈ-ಟೆಕ್ ಸ್ಪರ್ಶ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಫೆ.12): ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಹೈ-ಟೆಕ್‌ ಸ್ಪರ್ಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, 1500 ಕೋಟಿ ರು. ವೆಚ್ಚದಲ್ಲಿ ಕ್ರೀಡಾಂಗಣ ಉನ್ನತೀಕರಣಗೊಳಿಸುವುದಾಗಿ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಗುರುವಾರ ಘೋಷಿಸಿದರು.

ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು, ‘ರಾಜ್ಯದಿಂದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳ ಸಂಖ್ಯೆ ಏರಿಕೆಯಾಗಬೇಕಿದ್ದು, 100ಕ್ಕಿಂತ ಹೆಚ್ಚು ಅಥ್ಲೀಟ್‌ಗಳನ್ನು ಸಿದ್ಧಪಡಿಸಬೇಕಿದೆ. ಈ ಪೈಕಿ ಕನಿಷ್ಠ 50 ಮಂದಿ ಅರ್ಹತೆ ಪಡೆಯುವಂತಾಗಬೇಕು’ ಎಂದರು.

ಕಂಠೀರವ ಕ್ರೀಡಾಂಗಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಉನ್ನತೀಕರಣಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ನೀಲನಕ್ಷೆ (ಡಿಪಿಆರ್‌) ಸಿದ್ಧವಾಗಿದ್ದು, ಮುಂದಿನ 2-3 ತಿಂಗಳಲ್ಲಿ ಅಭಿವೃದ್ಧಿ ಕುರಿತು ಸಂಪೂರ್ಣ ಚಿತ್ರಣ ದೊರೆಯಲಿದೆ. ಕ್ರೀಡಾಂಗಣದ ಉನ್ನತೀಕರಣದ ಜೊತೆಗೆ ಇದೇ ಅವರಣದಲ್ಲಿ ಬಹುಮಾಡಿ ಕಟ್ಟದ, ಪಂಚತಾರಾ ಹೋಟೆಲ್‌, ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ ಎಂದು ನಾರಾಯಣಗೌಡ ತಿಳಿಸಿದರು.

ಕಂಠೀರವ ಟ್ರ್ಯಾಕ್‌ ಅಳವಡಿಕೆ ಕಾರ‍್ಯದಲ್ಲಿ ಮತ್ತೊಂದು ಎಡವಟ್ಟು

1000 ಕೋಟಿ ಅನುದಾನ: ಮುಂದಿನ ತಿಂಗಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರಾಜ್ಯ ಬಜೆಟ್‌ ಮಂಡಿಸಲಿದ್ದು, ಕ್ರೀಡಾ ಕ್ಷೇತ್ರಕ್ಕೆ 1000 ಕೋಟಿ ರು. ಅನುದಾನ ಕೇಳುವುದಾಗಿ ನಾರಾಯಣ ಗೌಡ ತಿಳಿಸಿದ್ದಾರೆ. ಪಂಜಾಬ್‌, ಹರ್ಯಾಣಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕ್ರೀಡೆಗೆ ನೀಡುತ್ತಿರುವ ಅನುದಾನ ಬಹಳ ಕಡಿಮೆ. ಈ ಬಾರಿ ಬಜೆಟ್‌ನಲ್ಲಿ ಕ್ರೀಡೆಗೆ 1000 ಕೋಟಿ ರು. ಮೀಸಲಿಡುವಂತೆ ಕೇಳಲಾಗುತ್ತದೆ ಎಂದು ಸಚಿವರು ಹೇಳಿದರು.

ಇದೇ ವೇಳೆ ಬಿಡುಗಡೆಯಾಗಿರುವ ಅನುದಾನವನ್ನು ಜಿಲ್ಲಾ ಮಟ್ಟದಲ್ಲಿ ಸರಿಯಾಗಿ ಬಳಕೆ ಮಾಡದ್ದಕ್ಕೆ ಸಚಿವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯುವ ಕ್ರೀಡಾಪಟುಗಳಿಗೆ ಅನ್ಯಾಯವಾಗದಂತೆ ಎಚ್ಚರವಹಿಸಲು ಸೂಚಿಸಿದರು.

click me!