ಜಗನ್ ಎನ್'ಡಿಎ ಸೇರಲು ಜನಾರ್ಧನ ರೆಡ್ಡಿ ಮಧ್ಯಸ್ಥಿಕೆ..?

By Suvarna Web DeskFirst Published Aug 21, 2017, 12:25 PM IST
Highlights

ಜಗನ್ ಅವರನ್ನು ಎನ್‌'ಡಿಎಗೆ ಸೇರಿಸಿಕೊಳ್ಳಲು ಬಿಜೆಪಿಗೆ ಆಸಕ್ತಿ ಇದೆಯಾದರೂ, ಮಿತ್ರಪಕ್ಷವಾಗಿರುವ ಆಂಧ್ರ ಪ್ರದೇಶದ ಆಡಳಿತಾರೂಢ ಟಿಡಿಪಿ ಪ್ರಮುಖ ಅಡ್ಡಿಯಾಗಿದೆ.

ಅಮರಾವತಿ(ಆ.21): ಬಿಜೆಪಿ ಸಾರಥ್ಯದ ಎನ್‌'ಡಿಎ ಪಾಳೆಯಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮರಳಿದ ಬೆನ್ನಲ್ಲೇ, ಆಂಧ್ರಪ್ರದೇಶದ ವೈಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಜಗನ್ ಮೋಹನ ರೆಡ್ಡಿ ಕೂಡ ಅದೇ ಹಾದಿಯಲ್ಲಿದ್ದಾರೆ. ಬಿಜೆಪಿ ಜತೆ ಕೈಜೋಡಿಸಲು ಜಗನ್ ಉತ್ಸುಕರಾಗಿದ್ದು, ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಜಗನ್ ಬಯಸಿದ್ದರು. ಆದರೆ ಈ ಕುರಿತು ಆ ಪಕ್ಷದ ಉಪಾಧ್ಯಕ್ಷ ರಾಹುಲ್ ಜತೆ ನಡೆದ ಮಾತುಕತೆ ವಿಫಲವಾದ ಬೆನ್ನಲ್ಲೇ, ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಬಯಸಿದ್ದಾರೆ. ಜನಾರ್ದನ ರೆಡ್ಡಿ ಅವರು ಬಿಜೆಪಿ ಕೇಂದ್ರ ನಾಯಕರು ಹಾಗೂ ಜಗನ್ ನಡುವೆ ಮಧ್ಯಸ್ಥಿಕೆ ವಹಿಸಿದ್ದಾರೆ. ಜಗನ್‌'ರನ್ನು ದೆಹಲಿಗೆ ಕರೆದೊಯ್ದು ವಿವಿಧ ನಾಯಕರನ್ನು ಭೇಟಿ ಮಾಡಿಸಿದ್ದಾರೆ. ಈ ಸಂದರ್ಭ ಎನ್‌'ಡಿಎ ಸೇರಲು ಜಗನ್ ಒಲವು ತೋರಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ರಿಪಬ್ಲಿಕ್’ ಚಾನೆಲ್ ವರದಿ ಪ್ರಕಟಿಸಿದೆ.

ಜಗನ್ ಅವರನ್ನು ಎನ್‌'ಡಿಎಗೆ ಸೇರಿಸಿಕೊಳ್ಳಲು ಬಿಜೆಪಿಗೆ ಆಸಕ್ತಿ ಇದೆಯಾದರೂ, ಮಿತ್ರಪಕ್ಷವಾಗಿರುವ ಆಂಧ್ರ ಪ್ರದೇಶದ ಆಡಳಿತಾರೂಢ ಟಿಡಿಪಿ ಪ್ರಮುಖ ಅಡ್ಡಿಯಾಗಿದೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡುಗೆ ಜಗನ್ ವಿರೋಧಿಯಾಗಿದ್ದಾರೆ. ಜಗನ್ ಇರುವೆಡೆ ತಾವಿರುವುದಿಲ್ಲ ಎಂದು ನಾಯ್ಡು ತಿಳಿಸಿದ್ದಾರೆ ಎನ್ನಲಾಗಿದೆ.

click me!