ಬಸ್ ನಿಲ್ದಾಣದಲ್ಲಿ ಯುವತಿ ಕಾಲಿಗೆ ಬಿದ್ದವನ ಬಂಧನ

By Suvarna Web DeskFirst Published Apr 12, 2017, 7:46 AM IST
Highlights

ಇತ್ತೀಚೆಗೆ ದೀಪಕ್‌ ಮದ್ಯ ವಸ್ಯನಿಯಾಗಿದ್ದು, ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಯುವತಿ ದೀಪಕ್‌'ನಿಂದ ಅಂತರ ಕಾಯ್ದುಕೊಂಡು ಪ್ರೀತಿ ನಿರಾಕರಿಸಿದ್ದಳು. ಆದರೂ ಪಟ್ಟು ಬಿಡದ ಆರೋಪಿ ತನ್ನನ್ನು ಪ್ರೀತಿಸುವಂತೆ ಯುವತಿ ಹಿಂದೆ ಬಿದ್ದಿದ್ದ. ಯುವತಿಯ ಮನೆ ಹಾಗೂ ಕಾಲೇಜು ಬಳಿ ಹೋಗಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದರಿಂದ ನೊಂದಿದ್ದ ಯುವತಿಯ ಪೋಷಕರು ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಯುವಕನ ವಿರುದ್ಧ ದೂರು ನೀಡಿದ್ದರು.

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಯುವತಿಯ ಕಾಲಿಗೆ ಬಿದ್ದು ಪ್ರೇಮ ನಿವೇದಿಸಿಕೊಳ್ಳುತ್ತಿದ್ದ ಭಗ್ನ ಪ್ರೇಮಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಮೈಸೂರು ರಸ್ತೆಯ ಟಿಂಬರ್‌ ಯಾರ್ಡ್‌ ನಿವಾಸಿ ದೀಪಕ್‌ ಬಂಧಿತ. ಯುವತಿ ಹಾಗೂ ದೀಪಕ್‌ ಇಬ್ಬರೂ ಒಂದೇ ಪ್ರದೇಶದವರಾಗಿದ್ದು, ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ದೀಪಕ್‌ ಚಾಲಕನಾಗಿದ್ದು, ಯುವತಿ ಖಾಸಗಿ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ.

ಮಂಗಳವಾರ ಸಂಜೆ ಸುಮಾರು 4 ಗಂಟೆ ಹೊತ್ತಿಗೆ ಯುವತಿ ಕತ್ರಿಗುಪ್ಪೆಯ ವಾಟರ್‌ ಟ್ಯಾಂಕ್‌ ರಸ್ತೆಯಲ್ಲಿ ಬಸ್‌ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಯುವತಿಯನ್ನು ಹಿಂಬಾಲಿಸಿದ್ದ ಆರೋಪಿ ದ್ವಿಚಕ್ರ ವಾಹನ ಹತ್ತುವಂತೆ ಹೇಳಿದ. ಇದಕ್ಕೆ ನಿರಾಕರಿಸಿದ ಯುವತಿ ಬಸ್‌ ನಿಲ್ದಾಣದಲ್ಲಿ ಹೋಗಿ ನಿಂತಳು. ದ್ವಿಚಕ್ರ ವಾಹನ ನಿಲ್ಲಿಸಿ ಬಸ್‌ ನಿಲ್ದಾಣಕ್ಕೆ ತೆರಳಿದ ಆರೋಪಿ ‘ನನ್ನನ್ನು ಕ್ಷಮಿಸು, ಪ್ರೀತಿಸು..' ಎಂದು ಕೇಳಿಕೊಂಡಿದ್ದಾನೆ. ಯುವತಿ ಇದಕ್ಕೆ ಪ್ರತಿಕ್ರಿಯೆ ನೀಡದಿದ್ದಾಗ ಸಾರ್ವಜನಿಕವಾಗಿ ಆಕೆಯ ಕಾಲಿಗೆ ಬಿದ್ದು, ಪರಿ ಪರಿ ಬೇಡಿ​ಕೊಂಡಿದ್ದಾನೆ. ಈ ದೃಶ್ಯಾವಳಿ ಸ್ಥಳೀಯ ಹೋಟೆಲ್‌'ವೊಂದರ ಸಿಸಿಟೀವಿ ಕ್ಯಾಮೆ​ರಾ​ದಲ್ಲಿ ಸೆರೆಯಾಗಿದ್ದು, ಅದೀಗ ಸಾಮಾ​ಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನು ಕಂಡ ಸಾರ್ವಜನಿಕರು ಪೊಲೀಸ್‌ ನಿಯಂತ್ರಣ ಕೊಠಡಿ 100ಕ್ಕೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಪೊಲೀಸ್‌ ನಿಯಂತ್ರಣ ಕೊಠಡಿಯಿಂದ ‘ಪಿಂಕ್‌ ಹೊಯ್ಸಳ' ಸಿಬ್ಬಂದಿಗೆ ಕರೆ ಹೋಗಿದೆ. ಸ್ಥಳಕ್ಕೆ ತೆರಳಿದ ಸಿ.ಕೆ.ಅಚ್ಚುಕಟ್ಟು ಠಾಣೆಯ ‘ಪಿಂಕ್‌ ಹೊಯ್ಸಳ' ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೂರವಾಗಿದ್ದ ಯುವತಿ: ಇತ್ತೀಚೆಗೆ ದೀಪಕ್‌ ಮದ್ಯ ವಸ್ಯನಿಯಾಗಿದ್ದು, ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಯುವತಿ ದೀಪಕ್‌'ನಿಂದ ಅಂತರ ಕಾಯ್ದುಕೊಂಡು ಪ್ರೀತಿ ನಿರಾಕರಿಸಿದ್ದಳು. ಆದರೂ ಪಟ್ಟು ಬಿಡದ ಆರೋಪಿ ತನ್ನನ್ನು ಪ್ರೀತಿಸುವಂತೆ ಯುವತಿ ಹಿಂದೆ ಬಿದ್ದಿದ್ದ. ಯುವತಿಯ ಮನೆ ಹಾಗೂ ಕಾಲೇಜು ಬಳಿ ಹೋಗಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದರಿಂದ ನೊಂದಿದ್ದ ಯುವತಿಯ ಪೋಷಕರು ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಯುವಕನ ವಿರುದ್ಧ ದೂರು ನೀಡಿದ್ದರು. ಆ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಆರೋಪಿ ಬಿಡುಗಡೆ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ
epaper.kannadaprabha.in

click me!