ಎಲ್ಲರೂ ಬಡತನ ಅನುಭವಿಸಲೆಂದು ಜೇಟ್ಲಿ ಓವರ್'ಟೈಮ್ ಕೆಲಸ ಮಾಡ್ತಿದ್ದಾರೆ: ಯಶವಂತ್ ಸಿನ್ಹಾ ಕುಟುಕು

Published : Sep 27, 2017, 07:12 PM ISTUpdated : Apr 11, 2018, 12:40 PM IST
ಎಲ್ಲರೂ ಬಡತನ ಅನುಭವಿಸಲೆಂದು ಜೇಟ್ಲಿ ಓವರ್'ಟೈಮ್ ಕೆಲಸ ಮಾಡ್ತಿದ್ದಾರೆ: ಯಶವಂತ್ ಸಿನ್ಹಾ ಕುಟುಕು

ಸಾರಾಂಶ

ಯಶವಂತ್ ಸಿನ್ಹಾ ಅವರು ಈ ವೇಳೆ ಪ್ರಧಾನಿ ಮೋದಿಯವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. "ಪ್ರಧಾನಿಯವರು ತಾವು ಬಡತನವನ್ನು ಹತ್ತಿರದಿಂದ ನೋಡಿದ್ದೇನೆಂದು ಹೇಳಿಕೊಳ್ಳುತ್ತಾರೆ. ಆದರೆ, ಪ್ರತಿಯೊಬ್ಬ ಭಾರತೀಯನೂ ಬಡತನವನ್ನು ಹತ್ತಿರದಿಂದ ನೋಡುವಂತಾಗಲೆಂದು ಹಣಕಾಸು ಸಚಿವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ," ಎಂದು ಸಿನ್ಹಾ ಲೇವಡಿ ಮಾಡಿದ್ದಾರೆ.

ನವದೆಹಲಿ(ಸೆ. 27): ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಈಗ ಭಿನ್ನ ರಾಗಗಳು ಭುಗಿಲೇಳಲು ಆರಂಭವಾಗಿದೆ. ಬಿಜೆಪಿಯ ಹಿರಿಯ ನಾಯಕರು ಈ ಮೊದಲಿಂದಲೂ ಮೋದಿ ಸರಕಾರದ ಬಗ್ಗೆ ಆಗಾಗ್ಗೆ ಸ್ವಲ್ಪಸ್ವಲ್ಪ ಅಪಸ್ವರ ಹಾಡುತ್ತಿದ್ದುದಂತೂ ನಿಜ. ಈಗ ಯಶವಂತ್ ಸಿನ್ಹಾ ಬಹಿರಂಗವಾಗಿಯೇ ಕೋಪ ಹೊರಹಾಕಿದ್ದಾರೆ. ಮೋದಿ ಸರಕಾರದ ಹೆಮ್ಮೆಯ ಹಾಗೂ ಅತೀ ಮಹತ್ವದ ಕ್ರಮಗಳೆಂದು ಬಣ್ಣಿಸಲಾದ ಜಿಎಸ್'ಟಿ ಮತ್ತು ನೋಟ್ ಬ್ಯಾನ್ ವಿರುದ್ಧ ಯಶವಂತ್ ಸಿನ್ಹಾ ಸಿಡಿದೆದಿದ್ದಾರೆ. ಜೇಟ್ಲಿಯವರು ಜಾರಿಗೆ ತಂದಿರುವ ಇವೆರಡು ಕ್ರಮಗಳು ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ಕೊಟ್ಟಿದೆ ಎಂದು ಮಾಜಿ ಕೇಂದ್ರ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ನೋಟ್ ಬ್ಯಾನ್ ಅಥವಾ ನೋಟು ಅಮಾನ್ಯ ಕ್ರಮವು ಒಂದು ಆರ್ಥಿಕ ದುರಂತವಾಗಿದೆ. ಜಿಎಸ್'ಟಿಯನ್ನು ಸರಿಯಾಗಿ ಯೋಜಿಸದೇ ಅಸಮರ್ಪಕವಾಗಿ ಜಾರಿಗೊಳಿಸಲಾಗಿದೆ ಎಂದು ವಾಜಪೇಯಿ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಯಶವಂತ್ ಸಿನ್ಹಾ ಟೀಕಿಸಿದ್ದಾರೆ.

"ಇವೆರಡು ಕ್ರಮಗಳು ದೇಶದ ಅರ್ಥವ್ಯವಸ್ಥೆಯನ್ನೇ ಛಿದ್ರಗೊಳಿಸಿವೆ. ಮುಂಬರುವ ಚುನಾವಣೆ ವೇಳೆಯಷ್ಟರಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುವುದು ಕಷ್ಟ. ಖಾಸಗಿ ಬಂಡವಾಳ ಪಾತಾಳಕ್ಕಿಳಿದಿದೆ. ಔದ್ಯಮಿಕ ಉತ್ಪನ್ನವು ಕುಸಿದಿದೆ. ಕೃಷಿ ಸಂಕಷ್ಟದಲ್ಲಿದೆ. ಕಟ್ಟಡ ನಿರ್ಮಾಣ ಉದ್ಯಮ ಡೋಲಾಯಮಾನ ಸ್ಥಿತಿಯಲ್ಲಿದೆ. ಇತರ ಸೇವಾ ಕ್ಷೇತ್ರವು ಕುಂಟುತ್ತಾ ಸಾಗಿದೆ. ರಫ್ತುಗಳು ತೀರಾ ಕಡಿಮೆಯಾಗಿವೆ. ಕೋಟ್ಯಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ಹೊಸ ಉದ್ಯೋಗಗಳ ಸೃಷ್ಟಿಯಾಗುತ್ತಿಲ್ಲ," ಎಂದು ಯಶವಂತ್ ಸಿನ್ಹಾ ಇಂಡಿಯನ್ ಎಕ್ಸ್'ಪ್ರೆಸ್ ಪತ್ರಿಕೆಯ ಲೇಖನದಲ್ಲಿ ಬರೆದಿದ್ದಾರೆ.

ಜೇಟ್ಲಿಗೆ ತುಂಬಾ ಕೆಲಸ ಕೊಟ್ಟು ಮೋದಿ ತಪ್ಪು ಮಾಡಿದ್ರು...!
ಒಬ್ಬ ವ್ಯಕ್ತಿಗೆ ಹಣಕಾಸು ಸಚಿವಾಲಯ ನಿಭಾಯಿಸುವ ಕೆಲಸವೇ ವಿಪರೀತವಾಯಿತು. ಅಂಥದ್ರಲ್ಲಿ ಅರುಣ್ ಜೇಟ್ಲಿಗೆ ವಿತ್ತ ಖಾತೆಯ ಜೊತೆಗೆ ಇತರ ಕೆಲ ಹೊಣೆಗಳನ್ನೂ ಕೊಟ್ಟಿದ್ದು ತಪ್ಪು ಎಂದು ಬಿಜೆಪಿಯ ಥಿಂಕ್'ಟ್ಯಾಂಕ್ ಟೀಮ್'ನ ಸದಸ್ಯರಾದ ಯಶವಂತ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ. ಹಣಕಾಸು ಸಚಿವನಿಗೆ ಬಹಳ ಕೆಲಸಗಳಿರುತ್ತವೆ. ಸಾಕಷ್ಟು ಗಮನ ಕೊಡಬೇಕಾಗುತ್ತದೆ. ಪ್ರತಿಯೊಂದು ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಪರಿಹಾರ ಕಂಡುಹಿಡಿಯುವುದು ಸಣ್ಣ ಕೆಲಸವಲ್ಲ. ಆದರೆ, ಅರುಣ್ ಜೇಟ್ಲಿಗೆ ಇದರ ಜೊತೆಗೆ ಬೇರೆ ಜವಾಬ್ದಾರಿಗಳ ಭಾರ ತೂಗುತ್ತಿದೆ. ಹೀಗಿರುವಾಗ ಅವರು ವಿತ್ತ ಖಾತೆಯನ್ನು ಸರಿಯಾಗಿ ನಿಭಾಯಿಸಲು ಹೇಗೆ ಸಾಧ್ಯ ಎಂಬುದು ಯಶವಂತ್ ಸಿನ್ಹಾ ಪ್ರಶ್ನೆ. ಈ ಮೊದಲು ಅರುಣ್ ಜೇಟ್ಲಿಯವರು ರಕ್ಷಣಾ ಖಾತೆ ಮತ್ತು ವಿತ್ತ ಖಾತೆ ಎರಡೂ ಮಹತ್ವದ ಖಾತೆಗಳನ್ನು ಹೊಂದಿದ್ದರು. ಇದೀಗ, ಅವರು ವಿತ್ತ ಖಾತೆ ಜೊತೆಗೆ ಬಂಡವಾಳ ಹಿಂತೆಗೆತ ಖಾತೆ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಖಾತೆಗಳನ್ನೂ ಹೊಂದಿದ್ದಾರೆ.

ಯಶವಂತ್ ಸಿನ್ಹಾ ಅವರು ಈ ವೇಳೆ ಪ್ರಧಾನಿ ಮೋದಿಯವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. "ಪ್ರಧಾನಿಯವರು ತಾವು ಬಡತನವನ್ನು ಹತ್ತಿರದಿಂದ ನೋಡಿದ್ದೇನೆಂದು ಹೇಳಿಕೊಳ್ಳುತ್ತಾರೆ. ಆದರೆ, ಪ್ರತಿಯೊಬ್ಬ ಭಾರತೀಯನೂ ಬಡತನವನ್ನು ಹತ್ತಿರದಿಂದ ನೋಡುವಂತಾಗಲೆಂದು ಹಣಕಾಸು ಸಚಿವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ," ಎಂದು ಸಿನ್ಹಾ ಲೇವಡಿ ಮಾಡಿದ್ದಾರೆ.

ಯಶವಂತ್ ಸಿನ್ಹಾ ಅಷ್ಟೇ ಅಲ್ಲ, ಸುಬ್ರಮಣಿಯನ್ ಸ್ವಾಮಿ, ಎಸ್.ಗುರುಮೂರ್ತಿ ಮೊದಲಾದ ಬಿಜೆಪಿ ಮುಖಂಡರೂ ಕೂಡ ಕೇಂದ್ರ ಸರಕಾರದ ನಿರ್ವಹಣೆ ಹಾಗೂ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಂಭೀರತೆ ಪಡೆದ ಕಲ್ಲಿದ್ದಲು ಕಳ್ಳತನ ಪ್ರಕರಣ, ಪವರ್ ಮೇಕ್ ಸಂಸ್ಥೆಯ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು
ಪಂದ್ಯದ ವೇಳೆ ಕಬಡ್ಡಿ ಪಟು ಹತ್ಯೆ ಪ್ರಕರಣ, ಆರೋಪಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿದ ಪೊಲೀಸ್