ಮೋಹಕ ರೂಪಕಗಳ ಲಂಕೇಶ್‌!

By Web Desk  |  First Published Aug 18, 2019, 12:18 PM IST

ಲಂಕೇಶರಿಗೆ ಶೂದ್ರ ಶ್ರೀನಿವಾಸ್‌ ಜೊತೆಗಿದ್ದದ್ದು ಒಂಥರದ ಲವ್‌-ಹೇಟ್‌ ಸಂಬಂಧ. ಲಂಕೇಶರ ಮಾತನ್ನು ಶಿರಸಾವಹಿಸಿದವರಂತೆ ಶೂದ್ರ ಕೂಡ ದೊಡ್ಡವರ ಕೆಲವು ಸಣ್ಣತನಗಳನ್ನು ದೋಷಗಳನ್ನು ನಾವು ಸಹಿಸಿಕೊಂಡೇ ಅವರೊಂದಿಗೆ ಇದ್ದವರು. ಲಂಕೇಶರ ಕುರಿತು ಇದುವರೆಗೆ ಆರೇಳು ಪುಸ್ತಕಗಳು ಬಂದಿರಬಹುದು. ಅವುಗಳಲ್ಲಿ ಲಂಕೇಶರ ಪ್ರತಿಭೆ, ವಿಕ್ಷಿಪ್ತತೆ ಎರಡೂ ದಾಖಲಾಗಿವೆ. ಈಗ ಶೂದ್ರ ಬರೆದಿರುವ ಲಂಕೇಶರ ಮೋಹಕ ರೂಪಕಗಳ ಕೃತಿ ಲಂಕೇಶರ ಕುರಿತು ಬಂದಿರುವ ಬಹುಮುಖ್ಯ ದಾಖಲೆ ಎನ್ನಬಹುದು. ಎಂದಿನಂತೆ, ಶೂದ್ರ ಇದನ್ನು ತಮ್ಮ ಗೊಂದಲ ಮತ್ತು ಸ್ಪಷ್ಟತೆಯ ನಡುವೆಯೇ ಬರೆದಂತಿದೆ. ಲಂಕೇಶರು ಇದ್ದದ್ದು ಕೂಡ ಹಾಗೆಯೇ ಅಲ್ಲವೇ.


ಶೂದ್ರ ಶ್ರೀನಿವಾಸ್‌ 

ಮಿತಭಾಷಿ ಮತ್ತು ಬೈಗಳು

Tap to resize

Latest Videos

undefined

ಲಂಕೇಶ್‌ ಅವರು ಎಂದಾಕ್ಷಣ, ಅವರ ಎರಡು ಭೌತಿಕ ಚಿತ್ರಗಳು ತಕ್ಷಣ ಮುಖಾಮುಖಿಯಾಗುತ್ತಿವೆ. ಸದಾ ಕೈಯಲ್ಲಿ ಸಿಗರೇಟು ಹಿಡಿದಿಡುತ್ತಿದ್ದ ಮತ್ತು ಪುಸ್ತಕದಲ್ಲಿ ತಲ್ಲೀನರಾಗುತ್ತಿದ್ದಂಥದ್ದು. ಅತ್ಯಂತ ಮಿತಭಾಷಿ. ಅಗತ್ಯವಿದ್ದರೆ ಮಾತಾಡುತ್ತಿದ್ದರು. ಇಲ್ಲದಿದ್ದರೆ ಒಂದೂ ಮಾತಾಡದೆ ಇದ್ದ ದಿನಗಳನ್ನು ಕಂಡಿದ್ದೇನೆ. ಪ್ರತಿಕ್ಷಣವೂ ಅವರಿಗೆ ಅನ್ನಿಸುತ್ತಿತ್ತು; ನಾವು ಮಾತು ಕಲಿತು ಹೆಚ್ಚು ವಂಚಿಸುತ್ತಿದ್ದೇವೆ ಹಾಗೂ ವಂಚನೆಗೊಳಗಾಗುತ್ತಿದ್ದೇವೆ ಎಂದು. ಇದನ್ನು ಬಹಳಷ್ಟುಬಾರಿ ಎದುರಿಸಿದ್ದೇನೆ. ಆದ್ದರಿಂದಲೇ ಅವರು ಸಂತ ಸ್ವರೂಪಿ ಚಿಂತಕರಾಗಿದ್ದರು. ತರಗತಿಗೆ ಹೋಗಿ ವಿದ್ಯಾರ್ಥಿಗಳ ಮುಂದೆ ಒಂದಷ್ಟುಮಾತು ಒದರಿ ಹೋಗುವ ಮನಸ್ಥಿತಿಯವರಾಗಿರಲಿಲ್ಲ. ಇದನ್ನು ಅವರ ಮೊದಲ ದಿನದ ತರಗತಿಯಿಂದಲೇ ಗಮನಿಸಿದ್ದೇನೆ.

ಗಾಂಧೀಜಿ, ರಾಜಾಜಿ, ನೆಹರೂ, ಲೋಹಿಯಾ ಕುರಿತು ಎಂಥ ಅಪೂರ್ವ ಒಳನೋಟಗಳನ್ನು ಧಾರೆಯೆರೆದಿದ್ದರು. ಆ ಒಳನೋಟ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸೂಕ್ಷ್ಮ ಸಂವೇದನೆಗಳನ್ನು ವಿಸ್ತರಿಸುತ್ತಿದ್ದುವು. ಹಾಗೆ ನೋಡಿದರೆ, ಅವರ ಪರಿಚಯವಾದ ಮೊದಲನೆಯ ತರಗತಿಯಲ್ಲಿಯೇ ಅವರ ವ್ಯಕ್ತಿತ್ವ ಸ್ವಲ್ಪಮಟ್ಟಿಗೆ ಪರಿಚಯವಾಗಿತ್ತು. ನಾನು ಅತ್ಯಂತ ಹುಂಬತನದಿಂದ ಬರೆದ ಕವಿತೆಯನ್ನು ಅವರಿಗೆ ತೋರಿಸಿದ್ದಕ್ಕೆ ತರಗತಿಯಲ್ಲಿ ಓದಿಸಿಯೇ ಬಿಟ್ಟರು. ತುಂಬ ಪ್ರಳಯಾಂತಕರೆಲ್ಲ ಇದ್ದ ವಿಜ್ಞಾನ ಮತ್ತು ಸಾಹಿತ್ಯದ ವಿದ್ಯಾರ್ಥಿಗಳ ಜಂಟಿ ತರಗತಿ ಅದು. ಆದರೆ ಕಾವ್ಯದ ರಚನೆ ಮತ್ತು ಕಾವ್ಯದ ಓದಿನ ಗಾಢವಾದ ಕಳಕಳಿಯನ್ನು ಹೊಂದಿದ್ದವರು.

ಸಹಾಯ ಮಾಡಿದವರ ಮೇಲೆ ದ್ವೇಷ ಸಾಧಿಸಿದ ಪಿ.ಲಂಕೇಶ್

ಇದು ಬೇರೆ ಬೇರೆ ರೂಪದಲ್ಲಿ ವಿಸ್ತಾರಗೊಳ್ಳುತ್ತ ಹೋಗಿದ್ದನ್ನು, ಅವರ ಸಂಪರ್ಕದ ಮುವತ್ತೆರಡು ವರ್ಷಗಳ ಆತ್ಮೀಯ ದಿನಗಳಲ್ಲಿ ಅದನ್ನು ಗ್ರಹಿಸಲು ಸಾಧ್ಯವಾಗಿದೆ. ಅದೇ ಸಮಯಕ್ಕೆ ಮೊದಲನೆಯ ತರಗತಿಯಲ್ಲಿ ಅವರ ಸಿಟ್ಟು ಮುಖಾಮುಖಿಯಾಗಿತ್ತು. ತರಗತಿಯಲ್ಲಿ ಜಿ.ಕೆ. ಚೆಸ್ಟರ್‌ಟನ್‌ನ ‘ಆಂಟ್ಸ್‌ ನೆಸ್ಟ್‌’ ಪ್ರಬಂಧವನ್ನು ಕುರಿತು ಪಾಠ ಮಾಡುವಾಗ, ವಿದ್ಯಾರ್ಥಿನಿಯೊಬ್ಬರು ಪಕ್ಕದಲ್ಲಿ ಕೂತಿದ್ದ ಹುಡುಗಿಯೊಬ್ಬಳ ಜೊತೆ ಏನೋ ಒಂದೆರಡು ಶಬ್ದ ಮಾತಾಡಿದ್ದಾಳೆ. ಅದಕ್ಕೆ ಎಷ್ಟುವೈಲ್ಡ್‌ ಆಗಿದ್ದರು! ಆದರೆ ಅದೇ ಸಮಯಕ್ಕೆ ಆ ಹುಡುಗಿ ಅಳುತ್ತಿದ್ದರೆ ಲಂಕೇಶ್‌ ಅವರು ಪೆಚ್ಚಾಗಿ ಸಮಾಧಾನ ಪಡಿಸಿದ್ದರು. ಅವರಿಗೆ ತಾವು ಮಾತಾಡುವಾಗ ಅಥವಾ ಏನಾದರೂ ಹೇಳುವಾಗ ಸ್ವಲ್ಪ ಗುಸುಗುಸು ಕಂಡರೂ ಸಹಿಸುತ್ತಿರಲಿಲ್ಲ. ಇದನ್ನು ಬಹಳಷ್ಟುಸಭೆ ಸಮಾರಂಭಗಳಲ್ಲಿ ಕಂಡಿದ್ದೇನೆ. ಕೇಳಿಸಿಕೊಳ್ಳುವ ಪ್ರಕ್ರಿಯೆಗೆ ಹೆಚ್ಚು ಒಲವು ತೋರುತ್ತಿದ್ದರು. ಆದ್ದರಿಂದಲೇ ಅವರು ಬುದ್ಧ, ಬಸವಣ್ಣ ಮತ್ತು ಗಾಂಧೀಜಿಯವರನ್ನು ಹೆಚ್ಚು ಆಪ್ತರನ್ನಾಗಿ ಸ್ವೀಕರಿಸಿದ್ದುದು.

ಹುಚ್ಚು ಮತ್ತು ಶಿಸ್ತು

ಹುಚ್ಚನಂತೆ ತೀವ್ರವಾಗಿ ಬದುಕುವುದನ್ನು ಯಾವಾಗಲೂ ಇಷ್ಟಪಡುತ್ತಿದ್ದರು. ಅದಕ್ಕೊಂದು ಸಣ್ಣ ಪ್ರಮಾಣದ ಶಿಸ್ತು ಬೇಕು ಎಂದು ತಿಳಿದಿದ್ದರು. ಹಾಗೆ ತಿಳಿದಿದ್ದರಿಂದಲೇ ಅವುಗಳ ಮಿತಿಯು ಯಾವ ಸ್ವರೂಪದ್ದೆಂದು; ಪ್ರತಿಭಾರಿಯೂ ಅವಲೋಕಿಸಿಕೊಳ್ಳುತ್ತಿದ್ದರು. ಹೀಗೆ ಅವಲೋಕಿಸಿಕೊಳ್ಳುತ್ತಲೇ ಅತ್ಯುತ್ತಮ ಕೃತಿಗಳಲ್ಲಿ ಬದುಕಿನ ಅರ್ಥಾತ್‌ ಆಯಾ ಕಾಲಘಟ್ಟದ ಏಳುಬೀಳುಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ದೃಷ್ಟಿಯಿಂದ ಬರವಣಿಗೆಯಲ್ಲಿ ಯಾವಾಗಲೂ ಅತೃಪ್ತಿಯನ್ನು ಕಾಣುತ್ತಿದ್ದರು.

ಪತ್ರಕರ್ತ ಲಂಕೇಶ್ ಹೆಸರಿನ ಪಿ ಅಂದರೆ ಪಾಳೇಗಾರ

ಏನೋ ಕೊರತೆ ಲೋಪವಿದೆಯೆಂದು ತಿಳಿಯಲು ಪ್ರಯತ್ನಿಸಿದವರು. ಆದ್ದರಿಂದಲೇ ಒಮ್ಮೆಯೂ ತಮ್ಮ ಬರವಣಿಗೆ ಕುರಿತು ಮಾತಾಡಲು ಹೋದವರಲ್ಲ. ಹಾಗೆಯೇ ಬೇರೆಯವರು ಮಾತಾಡಲು ಹೋದರೆ; ಒಂದು ಅರ್ಥದಲ್ಲಿ ಕಿವುಡರಾಗಿ ಬಿಡುತ್ತಿದ್ದರು. ಇದು ಬಹುಪಾಲು ಲೇಖಕರಲ್ಲಿ ನಾನು ಕಂಡಿಲ್ಲ. ಆದರೆ ಬೇರೆಯವರ ಅತ್ಯುತ್ತಮ ಕೃತಿಗಳನ್ನು ಯಾರಾದರೂ ಓದಿ ಪ್ರಸ್ತಾಪಿಸಿದರೆ ಕೇಳಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ; ನನ್ನ ವೈಯಕ್ತಿಕ ಅರಿವಿನಮಟ್ಟಿಗೆ ವಾರಕ್ಕೊಂದು ಕೃತಿಯನ್ನು ಓದುವಂತೆ ಪ್ರೇರೇಪಿಸುತ್ತಿದ್ದರು.

ಮನೆಯ ಒಂದು ಚಿತ್ರ!

ಮೇಸ್ಟ್ರ  ಮತ್ತು ನಾನು ಹೀಗೆಯೇ ಸುತ್ತಾಡುತ್ತ ಕೋಶಿಶ್‌ ಹೋಟೆಲ್‌ ಬಳಿ ಬಂದೆವು. ಅದು ಎಷ್ಟೋ ವರ್ಷಗಳಿಂದ ಒಂದು ವಿಧದಲ್ಲಿ ಸಾಂಸ್ಕತಿಕ ರೆಸ್ಟೋರೆಂಟ್‌. ಮೇಸ್ಟು್ರ ಮತ್ತು ನಾನು ಒಂದೊಂದು ಗ್ಲಾಸು ಬಿಯರ್‌ ಕುಡಿದು ಹೊರಗೆ ಬಂದಾಗ. ಭಾರತದ ಬಹುಮುಖ್ಯ ಮತ್ತು ನನಗೆ ಅತ್ಯಂತ ಪ್ರಿಯರಾದ ಇಬ್ಬರು ಕ್ರಿಕೆಟ್‌ ಆಟಗಾರರು ಅವರು ಕುಡಿದು ತಮ್ಮ ದೈಹಿಕ ಸ್ತಿಮಿತತೆಯನ್ನು ಕಳೆದುಕೊಂಡಿದ್ದರು. ಕಾಲಿಗೆ ಬಿದ್ದು ನಮಸ್ಕರಿಸಿದರು. ಕಿ.ರಂ. ನಾಗರಾಜ ಅವರು ನಿಮ್ಮ ಬಗ್ಗೆ ತುಂಬ ಹೇಳಿದ್ದರು ಎಂದು. ನಿಜವಾಗಿಯೂ ಅಂದು ರಾತ್ರಿ ಅವರಿಂದ ಬಿಡಿಸಿಕೊಂಡು ಹೊರಬರಲು ತುಂಬ ಕಷ್ಟವಾಗಿತ್ತು, ರಾತ್ರಿ ಒಂದೂವರೆಯಾಗಿತ್ತು. ಇಬ್ಬರೂ ಆಟೋದಲ್ಲಿ ಗಾಂಧಿ ಬಜಾರ್‌ನ ಅವರ ಮನೆಗೆ ಹೋದೆವು.

ಮೇಸ್ಟ್ರ ಮನೆಗೆ ಹೋದಾಗ ಇಂದಿರಮ್ಮನವರು ಮುನಿಸಿನಿಂದಲೇ ಬಾಗಿಲು ತೆರೆದರು. ನಾವು ಮಲಗುವಾಗ ಲಂಕೇಶ್‌ ಅವರಿಗೆ ಎಷ್ಟುಹೇಳಿದರೂ ಕೇಳಲಿಲ್ಲ. ‘‘ನಾನು ಒಳಗೆ ಮಲಗಿ, ನಿನ್ನನ್ನು ಇಲ್ಲಿ ಮಲಗಿಸುವುದು ಒಳ್ಳೆಯದಲ್ಲ’’ ಎಂದರು. ಅದಕ್ಕೆ ಒಂದು ಕ್ಷಣ ನಾನು ಭಾವುಕನಾದೆ. ಮನೆಯ ಪ್ರವೇಶ ದ್ವಾರದ ಸೋಫಾದ ಮೇಲೆಯೇ ಮಲಗಿದರು. ನಾನು ಮತ್ತೊಂದು ಕಡೆ ಸೋಫಾದಲ್ಲಿ ಮಲಗಿದೆ. ನನಗೆ ರಾತ್ರಿಯೆಲ್ಲ ನಿದ್ದೆ ಇಲ್ಲ. ಯಾಕೆಂದರೆ ಆ ಪ್ರಮಾಣದಲ್ಲಿ ಗೊರಕೆ ಅವರನ್ನು ಆಕ್ರಮಿಸಿಕೊಂಡಿತ್ತು. ಒಂದೆರಡು ಬಾರಿ ಅವರ ಕಾಲು ಮುಟ್ಟಿದಾಗ ಗೊರಕೆ ನಿಲ್ಲುತ್ತಿತ್ತು. ಮತ್ತೆ ಯಥಾಸ್ಥಿತಿ. ಬೆಳಿಗ್ಗೆ ಎದ್ದಾಗ ಮೇಡಂ ಅವರು ಕಾಫಿ ತಂದುಕೊಟ್ಟರು. ಮೇಸ್ಟ್ರು ಕೆಟ್ಟದಾಗಿದೆ ಎಂದರು. ಅದಕ್ಕೆ ಇಂದಿರಮ್ಮನವರು ವೈಲ್ಡ್‌ ಆಗಿ ‘‘ಬಿಸಾಕಿ ಹೊರಗೆ ಕುಡಿಯಲು ಹೋಗಿ’’ ಎಂದರು. ನಾನು ತಲ್ಲಣಿಸಿ ಹೋದೆ. ಮೇಸ್ಟು್ರ ಪೆಚ್ಚಾಗಿ ಕೂತಿದ್ದರು. ಅವರ ತಲೆ ನೇವರಿಸಿ ಸಮಾಧಾನಪಡಿಸಬೇಕು ಅನ್ನಿಸಿತು. ಅದೇ ಸಮಯಕ್ಕೆ ಕುಟುಂಬದ ಆರ್ಥಿಕ ಸ್ಥಿತಿಗತಿ ಬಗ್ಗೆ ಹೆಚ್ಚು ಮುತುವರ್ಜಿ ವಹಿಸದಿರುವುದೇ ಮುಖ್ಯ ಕಾರಣ ಎಂದು ಭಾವಿಸಿದೆ.

ಪಿ.ಲಂಕೇಶ್ ಅವರ ರೇಸು ಕುದುರೆಯ ಕಥಾಪ್ರಸಂಗ!

ಇದೇ ವಿಧದ ಸಿಟ್ಟನ್ನು ನಾನು ಇಂದಿರಮ್ಮನವರಿಂದ ಎದುರಿಸಿದ್ದು; ಲಂಕೇಶ್‌ ಅವರು ಚಲನಚಿತ್ರ ನಿರ್ದೇಶನದಲ್ಲಿ ತೊಡಗಿದ್ದಾಗ ಅವರ ‘ಎಲ್ಲಿಂದಲೋ ಬಂದವರು’ ಚಿತ್ರಕ್ಕೆ ವಿಜಯಭಾಸ್ಕರ್‌ ಅವರ ಸಂಗೀತ ನಿರ್ದೇಶನವಿತ್ತು. ಅವರು ಅಂದಿನ ಮದ್ರಾಸಿನಿಂದ ಬರುತ್ತಿದ್ದರು. ಅದಕ್ಕಾಗಿ ಅವರಿಗೆ ಸಂಜೆ ಆತಿಥ್ಯ ನೀಡಲು ಮನಸ್ಸು ಮಾಡಿದ್ದರು. ವಿಶ್ವವಿದ್ಯಾಲಯದ ನೂರು ರೂ.ಗಳ ಚೆಕ್‌ ಅವರ ಬಳಿ ಇತ್ತು. ಅದನ್ನು ನಗದುಗೊಳಿಸಲು ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದ ಬಳಿಯ ಕೆ.ಇ.ಬಿ. ಕಟ್ಟಡದ ಎಸ್‌.ಬಿ.ಎಂ. ಶಾಖೆಗೆ ಹೋದೆವು. ಅದನ್ನು ರೆಮಿಟ್‌ ಮಾಡಿದರು. ಅದು ಅಕೌಂಟ್‌ಪೇಯಿ ಚೆಕ್‌ ಎಂಬುದನ್ನು ಮೇಸ್ಟು್ರ ನೋಡಿಕೊಂಡಿಲ್ಲ. ಕ್ಯಾಷ್‌ ಕೊಡುವರು ಎಂದು ಕಾಯುತ್ತ ಕೂತರು. ಕೊನೆಗೆ ಸಂಬಂಧಪಟ್ಟಬ್ಯಾಂಕಿನ ಕೌಂಟರ್‌ನ ನೌಕರ ‘‘ಸಾರ್‌, ಕ್ಯಾಷ್‌ ಸೋಮವಾರ ಆಗುತ್ತದೆ’’ ಎಂದಾಗ; ಮೇಸ್ಟು್ರ ನಿಜವಾಗಿಯೂ ಗಾಬರಿಗೊಂಡಿದ್ದರು. ‘‘ಶೂದ್ರ ನಾನು ಎಂಥ ಮೂರ್ಖ ಕಣೋ ಅಕೌಂಟ್‌ಪೇಯಿ ಎಂಬುದನ್ನು ನೋಡಿಕೊಂಡಿಲ್ಲ’’ ಎಂದು ಒಂದು ಕ್ಷಣ ಮೌನಿಯಾದರು. ನಂತರ ‘‘ನೋಡೋ ಅರ್ಜೆಂಟಾಗಿ ಇಂದಿರಾ ಮಯೂರದಲ್ಲಿರ್ತಾಳೆ. ನೂರು ರೂಪಾಯಿ ತಗೊಂಡು ಬಾ. ಅವಳು ನಿನ್ನನ್ನು ಚೆನ್ನಾಗಿ ಬೈದೇ ಕೊಡುವುದು. ಹೋಗಿ ತಗೊಂಡು ಬಾ’’ ಎಂದರು.

ನಾನು ಕಿಂಚಿತ್ತೂ ಬೇಸರಪಡದೆ ಹೋದೆ. ಇಂದಿರಾ ಮೇಡಂ ಅವರು ಇದ್ದರು. ಮಯೂರದಲ್ಲಿ ಯಾರಾರ‍ಯರೋ ಹೆಂಗಸರು ಸೀರೆ ವ್ಯಾಪಾರಕ್ಕೆ ಬಂದಿದ್ದರು. ನಾನು ಹೋಗಿ ನಿಂತೆ. ‘‘ಏನು ಶೂದ್ರ?’’ ಎಂದರು. ‘‘ಮೇಡಂ, ಅರ್ಜೆಂಟಾಗಿ ನೂರು ರೂಪಾಯಿ ಬೇಕು. ಮೇಸ್ಟ್ರು ಹೇಳಿದ್ದಾರೆ’’ ಎಂದೆ. ‘‘ಅವರಿಗೇನು ಹೇಳೋದಿಕ್ಕೆ. ನಿಮ್ಮನ್ನು ಅದಕ್ಕೆ ಕಳಿಸ್ತಾರಲ್ಲಾ ಅವರಿಗೆ ನಾಚಿಕೆಯಾಗಬೇಕು’’ ಎಂದು ಕೊಟ್ಟರು. ನಾನು ಖುಷಿಯಿಂದ ಸ್ವಲ್ಪ ಮೆಟ್ಟಿಲಿಳಿದು ರಸ್ತೆಗೆ ಬಂದೆ. ಬಸವನಗುಡಿಯ ನ್ಯಾಷನಲ್‌ ಕಾಲೇಜಿನ ಅಧ್ಯಾಪಕ ಗೆಳೆಯರು ಸಿಕ್ಕಿದರು. ಟೀಗೆ ಕರೆದರು ಹೋಗಲಿಲ್ಲ. ನನ್ನ ಮನಸ್ಸೆಲ್ಲ ಮೈಸೂರು ಬ್ಯಾಂಕ್‌ ವೃತ್ತದ ಬಳಿ ಇತ್ತು. ಹೋದೆ. ಸಿಗರೇಟು ಸೇದುತ್ತ ನಿಂತಿದ್ದರು. ಕೊಟ್ಟೆ. ‘‘ಸಾರಿ’’ ಎಂದು ನನ್ನ ಮುಖವನ್ನೇ ನೋಡಿದರು. ಆದರೆ ಆ ನೂರು ರೂಪಾಯಿಯನ್ನು ನಾನು ಕೊಡಬಹುದಾಗಿತ್ತು. ಆದರೆ ಎಂದೂ ತೆಗೆದುಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಅವರೊಡನೆ ಎಷ್ಟೋ ಕಡೆ ಹೋಟೆಲ್‌, ಬಾರ್‌ಗಳಿಗೆ ಹೋಗಿರುವೆ. ಯಾರಿಂದಲೂ ಬಿಲ್‌ ಕೊಡಿಸಿದ್ದು ಕಂಡಿಲ್ಲ.

ಸಿಗರೇಟು ಮತ್ತು ಲಂಕೇಶ್‌

ಹೀಗೂ ಇದ್ದ ಪಿ.ಲಂಕೇಶ್ ಕಾರು ಕೊಂಡಿದ್ದು ಯಾವಾಗ?

ಸಿಗರೇಟು ಅದು ಲಂಕೇಶ್‌ ಮತ್ತು ಅಡಿಗರಿಗೆ ಎಷ್ಟುಪ್ರಿಯವಾಗಿತ್ತೋ; ಆದರೆ ಬದುಕಿನ ಪ್ರೀತಿಯ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಯೋಚಿಸಿದಾಗ; ‘‘ಹೌದು ಮೊದಲೇ ಬಿಡಬೇಕಾಗಿತ್ತು’’ ಅವರ ಅಂತರಂಗದಲ್ಲಿ ಪ್ರತಿಧ್ವನಿಸತೊಡಗಿತ್ತು. ಪ್ರೊ. ಎಂ.ಡಿ.ಎನ್‌. ಅವರಿಗೂ ಹಾಗೆ ಅನ್ನಿಸಿರಲು ಸಾಧ್ಯ. ಯಾಕೆಂದರೆ ಬದುಕಿನ ಪ್ರಶ್ನೆ ಮುಖಾಮುಖಿಯಾದಾಗ; ಹೀಗೆ ಅನ್ನಿಸುವುದು ಸ್ವಾಭಾವಿಕ. ಇಂಥದ್ದೊಂದು ನೇರವಾಗಿ ಕನ್ನಡ ಸಾಂಸ್ಕತಿಕ ಲೋಕದ ಇಬ್ಬರು ಮಹಾನುಭಾವರು ಎದುರಾದಾಗ; ಪ್ರಧಾನವಾಗಿ ಮಾತಿಗೆ ಪೀಠಿಕೆಯಾಗಿದ್ದೇ ಇದರಿಂದ. ಲಂಕೇಶ್‌ ಅವರು ಮತ್ತು ಗೋಪಾಲಕೃಷ್ಣ ಅಡಿಗರು ಸುಮಾರು ಇಪ್ಪತ್ತಾರು ವರ್ಷಕ್ಕೂ ಮೇಲ್ಪಟ್ಟು ಒಬ್ಬರನ್ನೊಬ್ಬರು ನೋಡೇ ಇರಲಿಲ್ಲ. ಆದರೆ ಸರ್ಕಲ್‌ ಲಂಚ್‌ ಹೋಂನಲ್ಲಿ ಸಾಹಿತ್ಯ ಮತ್ತು ಸಂಸ್ಕತಿಯ ಚರ್ಚೆ ಬಂದಾಗ, ಲಂಕೇಶ್‌ ಅವರು ಮಾತಿನ ನಡುವೆ ಬಂದುಹೋಗುತ್ತಿದ್ದರು.

ಲಂಕೇಶ್‌ ಅವರಿಗೂ ಅಷ್ಟೇ ಹಿಂದಿನ ಅವರ ಪ್ರೀತಿ ಮತ್ತು ಮಮತೆ ತೀವ್ರವಾಗಿಯೇ ಇತ್ತು. ಅವರನ್ನು ಭೇಟಿಯಾಗಬೇಕು ಎಂದು ಚಡಪಡಿಸುತ್ತಲೇ ಇದ್ದರು. ಹಾಗೆಯೇ ‘ಅಕ್ಷರ ಹೊಸ ಕಾವ್ಯ’ ಅಮೂಲ್ಯ ಕಾವ್ಯ ಸಂಗ್ರಹವನ್ನು ಮರು ಮುದ್ರಿಸುವ ತವಕದಲ್ಲಿದ್ದರು. ಅದು ಹಿಂದೆ ಹೆಗ್ಗೋಡಿನ ಅಕ್ಷರ ಪ್ರಕಾಶನದಿಂದ ಪ್ರಕಟವಾಗಿತ್ತು. ಪತ್ರಿಕೆ ಪ್ರಕಾಶನದಿಂದ ಪ್ರಕಟಿಸಲು ಅವರು ಸಿದ್ಧವಾಗಿದ್ದರು. ಅದಕ್ಕೆ ಕೆ.ವಿ. ಸುಬ್ಬಣ್ಣನವರಿಂದ, ಕಿರಂ., ಡಿ.ಆರ್‌. ನಾಗರಾಜ್‌ ಮತ್ತು ನಾನು ಮಾತಾಡಿ ಒಪ್ಪಿಗೆಯನ್ನು ಪಡೆದಿದ್ದೆವು. ಆದರೆ ಮರು ಮುದ್ರಿಸುವಾಗ ಕವಿಗಳ ಒಪ್ಪಿಗೆಗೆ ಸಂಬಂಧಿಸಿದಂತೆ; ಲಂಕೇಶ್‌ ಅವರು ಒಂದು ಮಾತು ಹೇಳಿದರು:

ಅಕ್ಷರ ಪ್ರೇಮಿ ಪಿ.ಲಂಕೇಶ್ ಅಂಕಿ ಪ್ರೇಮಿಯಾಗಿದ್ದು!

‘‘ನನಗೆ ಯಾರೂ ಒಪ್ಪಿಗೆ ಕೊಡದಿದ್ದರೂ ಚಿಂತೆ ಇಲ್ಲ. ಆದರೆ ಅಡಿಗರು ಒಬ್ಬರು ಒಪ್ಪಿಗೆ ಕೊಟ್ಟರೆ ಸಾಕು’’ ಎಂದು ಸಾಕಷ್ಟುಬಾರಿ ಹೇಳಿದ್ದರು. ಒಮ್ಮೆ ಸರ್ಕಲ್‌ ಲಂಚ್‌ ಹೋಂನಲ್ಲಿ ಅಡಿಗರ ಜೊತೆ ಚರ್ಚಿಸುವಾಗ ಸುಮತೀಂದ್ರ ನಾಡಿಗರು ಮತ್ತು ಶಾಂತಿನಾಥ ದೇಸಾಯಿಯವರೂ ಇದ್ದರು. ನಾನು ಅಡಿಗರ ಬಳಿ ‘‘ಸರ್‌, ಲಂಕೇಶ್‌ ಅವರು ಅಕ್ಷರ ಹೊಸ ಕಾವ್ಯವನ್ನು ಮರುಮುದ್ರಿಸಬೇಕೆಂದಿದ್ದಾರೆ. ಆದರೆ ಯಾರೂ ಒಪ್ಪಿಗೆ ಕೊಡದಿದ್ದರೂ ಚಿಂತೆ ಇಲ್ಲ. ಅಡಿಗರು ಒಬ್ಬರು ಒಪ್ಪಿಗೆ ಕೊಟ್ಟರೆ ಸಾಕು ಎಂದು ಹೇಳುತ್ತಿದ್ದಾರೆ’’ ಎಂದೆ. ‘‘ಒಪ್ಪಿಗೆ ಕೊಟ್ಟಿದ್ದೀನಿ ಎಂದು ಹೇಳಯ್ಯ. ಅವನು ನೀಚ ಇರಬಹುದು. ಆದರೆ ಚೆನ್ನಾಗಿ ಬರೆಯುತ್ತಾನೆ ಕಾವ್ಯ ಮತ್ತು ಗದ್ಯವನ್ನು’’ ಎಂದು ಹೇಳಿದಾಗ; ನಾನು ಉಲ್ಲಾಸಗೊಂಡಿದ್ದೆ.

ಬೀಚಿಯವರ ಜನಿವಾರ

ಮುಖ್ಯ ಉಪನ್ಯಾಸಕರಾಗಿ ಬೀಚಿಯವರು ಇದ್ದರು. ಆ ದಿನಗಳಲ್ಲಿ ಬೀಛಿkಯವರು ಹೆಚ್ಚು ವಿಚಾರವಾದಿಯಾಗಿ ಎದ್ದು ಕಾಣುತ್ತಿದ್ದ ಜನಪ್ರಿಯ ಲೇಖಕರಾಗಿದ್ದರು. ಅತ್ಯಂತ ಪ್ರಾಮಾಣಿಕ ಲೇಖಕ, ಮಡಿವಂತ ಬ್ರಾಹ್ಮಣರನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದರು. ಹಾಗೆಯೇ ಅನಕೃ., ತ.ರಾ.ಸು. ಮತ್ತು ಬೀಚಿಯವರು ಬಹಳಷ್ಟುಕಡೆ ಒಟ್ಟೊಟ್ಟಿಗೆ ಗುರ್ತಿಸಿಕೊಂಡಿದ್ದವರು. ಇರಲಿ, ಅಂದು ಗಾಂಧಿಭವನದಲ್ಲಿ ತುಂಬಾ ಗಂಭೀರವಾಗಿಯೇ ಮಾತಾಡಿದರು. ಹಾಗೆ ಮಾತಾಡುವಾಗ; ಅವರು ಶಿವಧಾರ ಮತ್ತು ಜನಿವಾರ ಕುರಿತು ಸ್ವಲ್ಪ ಒತ್ತು ಕೊಟ್ಟು ಮಾತಾಡಿದರು. ಆ ಸಂದರ್ಭದಲ್ಲಿ ಸಭಿಕರಲ್ಲಿ ಪ್ರೊ. ಎಂ.ಡಿ.ಎನ್‌. ಹಾಗೂ ಡಿ.ಆರ್‌. ನಾಗರಾಜ್‌ ಒಟ್ಟೊಟ್ಟಿಗೆ ಕೂತಿದ್ದರು. ಪ್ರೊಫೆಸರ್‌ ಅವರು ಡಿ.ಆರ್‌.ನನ್ನು ಪುಸಲಾಯಿಸಿದ್ದರು. ಅವನು ‘‘ಬೀಚಿಯವರೆ, ನೀವು ಜನಿವಾರ ಧರಿಸಿಲ್ಲವೇ? ನಿಮ್ಮ ಬಗ್ಗೆ ನನಗೆ ಗುಮಾನಿ ಇದೆ’’ ಎಂದ. ಅದಕ್ಕೆ ಅವರು ನಗುತ್ತ ‘‘ಬಾಪ್ಪ ನಾಗರಾಜ್‌, ನಿನಗೆ ನಂಬಿಕೆ ಇಲ್ಲದಿದ್ದರೆ; ದಯವಿಟ್ಟು ನನ್ನ ಮೈಮೇಲೆ ಚೆಕ್‌ ಮಾಡಬಹುದು’’ ಎಂದು ಆಹ್ವಾನಿಸಿದರು.

ಲೆಕ್ಕಾಚಾರದ ಕವಿಯಾಗಿದ್ದರು ಪಿ.ಲಂಕೇಶ್!

ಅದಕ್ಕೆ ಡಿ.ಆರ್‌. ಅತ್ಯಂತ ರೊಮ್ಯಾಂಟಿಕ್ಕಾಗಿ ಪ್ರೊಫೆಸರ್‌ ಅವರಿಂದ ಪ್ರೇರಣೆಗೊಂಡಿದ್ದರಿಂದ ವೇದಿಕೆಯ ಬಳಿ ಹೋಗಿ ಬೀಚಿಯವರ ಜುಬ್ಬಾದಲ್ಲಿ ಕೈಯಿಟ್ಟು ಹುಡುಕಿದ್ದ. ಆಗ ಪ್ರೊ. ಹಮೀದ್‌ ಮತ್ತು ಲಂಕೇಶ್‌ ಅವರು ಒಂದು ವಿಧದ ಮುಜುಗರದಿಂದ ಒದ್ದಾಡುತ್ತಿದ್ದರು. ಇಡೀ ಸಭಾಂಗಣ ಒಂದು ವಿಧದಲ್ಲಿ ಸ್ತಬ್ಧಗೊಂಡಿತ್ತು. ನಾನೂ ಮಾನಸಿಕವಾಗಿ ಒದ್ದಾಡುತ್ತಿದ್ದೆ. ಇಷ್ಟರಮಟ್ಟಿನ ಒರಟುತನ ಅಗತ್ಯವಿದೆಯಾ ಎಂದು. ಈ ರೀತಿಯಲ್ಲಿ ಅಲ್ಲಿ ಅಂದು ಬಹಳಷ್ಟುಮಂದಿಗೆ ಅನ್ನಿಸಿರಬಹುದು. ಆ ಸಭೆಯಲ್ಲಿ ನಾನು ತುಂಬಾ ಗೌರವಿಸುತ್ತಿದ್ದ ಕೆ.ಎಸ್‌. ನಾರಾಯಣಸ್ವಾಮಿ, ಗರುಡ ಶರ್ಮ, ಹೆಚ್‌.ಎಸ್‌. ದೊರೆಸ್ವಾಮಿ ಮತ್ತು ಮಹಾದೇವಿಯಕ್ಕ (ರಾಮಕೃಷ್ಣ ಹೆಗಡೆಯವರ ಸೋದರಿ) ಅವರೂ ಇದ್ದರು.

ಹೀಗೂ ಇದ್ದರು ಲಂಕೇಶ್

ಡಿ.ಆರ್‌. ನಾಗರಾಜ್‌ಗೆ ಜನಿವಾರ ಸಿಗಲಿಲ್ಲ. ಅವನು ನಾಚಿಕೆಯಿಂದ ಪ್ರೊಫೆಸರ್‌ ಅವರ ಬಳಿ ಹೋಗಿ ಕುಳಿತ. ಆದರೆ ಮುಂದೆ ಲಂಕೇಶ್‌ ಅವರು ಅತ್ಯಂತ ವಿಷಾದದಿಂದಲೇ ತಮ್ಮ ಮಾತನ್ನು ಪ್ರಾರಂಭಿಸಿದರು. ‘‘ಜನಿವಾರ ಮತ್ತು ಶಿವದಾರ ಸಂಕೇತಗಳಿರಬಹುದು. ನಾನಾ ಕಾರಣಗಳಿಗಾಗಿ. ಒಂದು ಬಹುದೊಡ್ಡ ಸಮಾಜದಲ್ಲಿ ನಮ್ಮ ಮನಸ್ಸುಗಳ ಮೇಲೆ ಆಕ್ರಮಣಕಾರಿಯಾಗಿ ಪ್ರವೇಶ ಮಾಡಿರುತ್ತವೆ. ಆದರೆ ಅದನ್ನು ನಾವು ಗಂಭೀರವಾಗಿ ಅರಿಯದೆ, ವೈಯಕ್ತಿಕ ತೀರ್ಮಾನಗಳಿಗೆ ಬರಬಾರದು. ಹಾಗೆಯೇ ಬೀಛಿkಯವರಂಥ ಹಿರಿಯ ಲೇಖಕರು ತಾವು ನಂಬಿದ ಧೋರಣೆಗಳಿಗೆ ಅನುಗುಣವಾಗಿ ಬದುಕುತ್ತಿರುವಂಥವರು. ಅವರ ಮಾತುಗಳಿಗೆ ಗೌರವ ಕೊಡದೆ; ಗುಮಾನಿಯಿಂದ ನೋಡುವುದು ಅಷ್ಟುಸರಿಯೆನ್ನಿಸುವುದಿಲ್ಲ. ಹಾಗೆಯೇ ತಮ್ಮ ದೇಹದ ಮೇಲಿನ ಜನಿವಾರ ಇರುವುದನ್ನು ಬೇಕಾದರೆ ಬಂದು ನೋಡಿ ಎಂದು ಹೇಳಿದ ಮೇಲೆ; ಇಂಥ ಸಭೆಯಲ್ಲಿ ಅತ್ಯಂತ ಕ್ರೂಡಾಗಿ ಅವರ ದೇಹದ ಮೇಲೆ ಜನಿವಾರ ತಡಕಾಡಿದ್ದು ಸರಿಯಾದ ಕ್ರಮವಲ್ಲ. ಮತ್ತೊಂದು ಮುಖ್ಯ ವಿಷಯ; ನಾವು ಜಾತೀಯತೆಯಿಂದ ಮತ್ತು ಅದರ ಕೆಲವು ಅನಗತ್ಯ ನಂಬಿಕೆಗಳಿಂದ ಬಿಡುಗಡೆ ಯಾಗಬೇಕಾದದ್ದು; ಅಂತರಂಗದ ದೃಷ್ಟಿಯಿಂದ. ಸಾಮಾಜಿಕವಾಗಿ ಕೆಲವು ಕಲ್ಮಷಗಳಿಂದ ಬಿಡುಗಡೆಯಾಗುವುದರ ಬಗ್ಗೆ ನಿರಂತರ ಮಾನಸಿಕ ಹೋರಾಟ ವಿರಬೇಕಾಗುತ್ತದೆ. ಇಷ್ಟಾದರೂ ಯಾವಯಾವ ಕಾರಣಕ್ಕೋ ನಾವು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿರುತ್ತೇವೆ. ಈ ದೃಷ್ಟಿಯಿಂದ ಕುರುಡು ವಿಚಾರದೃಷ್ಟಿಯೂ ಅಪರಾಧವಾಗುತ್ತದೆ. ಇಂಥದ್ದಕ್ಕೆ ಸಂಬಂಧಿಸಿದಂತೆ ನಮ್ಮ ನಡುವೆ ಅತ್ಯುತ್ತಮ ಮಾದರಿಗಳಿವೆ. ಆ ಮಾದರಿಗಳನ್ನು ಗ್ರಹಿಸದೆ ಒಂದು ದೊಡ್ಡ ಸಮಾಜದ ಸಾಂಸ್ಕತಿಕ ಸಂಗತಿಗಳ ಕುರಿತು ತೀರ್ಪುಗಾರರಾಗಿ ಹೋಗಬಾರದು’’ ಎಂದು ವಿಷಾದದಿಂದ ತಮ್ಮ ಮಾತು ಮುಗಿಸಿ ಕೂತರು.

ಅತೀ ಓದು ಅಪಾಯಕಾರಿ

ಅವರ ಮಿತಭಾಷೆಯ ಗುಣಾತ್ಮಕತೆಯಿಂದಲೇ; ಬಹುದೊಡ್ಡ ಗದ್ಯಬರಹಗಾರರಾಗಿ ಮತ್ತೆ ಮತ್ತೆ ಅವಲೋಕಿಸಿಕೊಳ್ಳಲು ಸಾಧ್ಯವಾಗಿರುವುದು. ಇರಲಿ, ಗಾಂಧಿಭವನದ ಆ ಘಟನೆಯಿಂದ ಡಿ.ಆರ್‌. ನಾಗರಾಜ್‌ ಮುದುಡಿ ಹೋಗಿದ್ದ, ಆಗಾಗ ಕೆಲವರ ನಡುವೆ ವ್ಯಂಗ್ಯಕ್ಕೆ ಮತ್ತು ಗೇಲಿಗೆ ತುತ್ತಾಗಿದ್ದುದು ಇದೆ. ಡಿ.ಆರ್‌. ಬಹುದೊಡ್ಡ ಪ್ರಮಾಣದಲ್ಲಿ ಬಹುಮುಖೀ ಓದಿಗೆ, ಅದರ ಮೂಲಕ ಬಹುರೂಪಿ ಚರ್ಚಾಪಟುವೂ ಆಗಿದ್ದ. ಅವನ ವಾದಸರಣಿಗೆ ಮೋಹಿತರಾಗಿ ಲಂಕೇಶ್‌ ಅವರು ಕೇಳಿಸಿಕೊಂಡಿದ್ದಿದೆ. ಆದರೆ ಅದೇ ಸಮಯದಲ್ಲಿ ಅವರು ಕಿ.ರಂ. ನಾಗರಾಜ್‌ ಮತ್ತು ಡಿ.ಆರ್‌. ಕುರಿತು ಒಂದು ಮಾತು ಹೇಳಿದರು: ‘‘ನೀವು ಇಷ್ಟುದೊಡ್ಡ ಪ್ರಮಾಣದ ಓದು, ಮಾತು ಮತ್ತು ನೆನಪಿನ ದಟ್ಟತೆಯ ಕಾರಣಕ್ಕಾಗಿಯೇ ಸೃಜನಶೀಲ ಲೇಖಕರಾಗಿ ಎಮಜ್‌ರ್‍ ಆಗದಿರುವುದು’’ ಎಂದಿದ್ದರು. ಈಗಲೂ ಅದನ್ನು ಅವಲೋಕಿಸಿಕೊಂಡಾಗ; ನನಗೆ ನಿಜ ಅನ್ನಿಸುತ್ತದೆ. ತಾತ್ವಿಕ ಸಿದ್ಧಾಂತಗಳ ಮತ್ತು ವಿಮರ್ಶೆಯ ವಿವಿಧ ಆಯಾಮಗಳ ಕುರಿತು ಹೆಚ್ಚು ಹೆಚ್ಚು ಓದಿದಂತೆಲ್ಲ; ಸೃಜನಶೀಲ ಚಿಂತನೆ ಮಂಕಾಗಿ ಬಿಡುತ್ತದೆ. ಆದ್ದರಿಂದಲೇ ಅವರು ಯಾವಾಗಲೂ ವಾಲ್ಮೀಕಿ ಮತ್ತು ವ್ಯಾಸನನ್ನು ಉದಾಹರಿಸುತ್ತಿದ್ದದು. ಅವರು ತಮ್ಮ ಗ್ರೇಟ್‌ ಕ್ಲಾಸಿಕ್ಸ್‌ನಲ್ಲಿ ಬುದ್ಧಿವಂತಿಕೆಯನ್ನು ಪ್ರದರ್ಶಿಸುವುದಿಲ್ಲ, ಜೀವನಾನುಭವವನ್ನು ಮುಂದಿಡುತ್ತಾರೆ. ಹಾಗಾಗಿ ಇಂದಿಗೂ ಅವು ನಮ್ಮ ಚಿಂತನೆಗೆ ಹತ್ತಿರವಾಗಿರುವುದು ಎನ್ನುತ್ತಿದ್ದರು. ಅದರಲ್ಲೂ ಅವರು ವಾಲ್ಮೀಕಿಗಿಂತ ವ್ಯಾಸನನ್ನು ತಮ್ಮ ಮನಸ್ಸಿಗೆ ತುಂಬ ಹತ್ತಿರ ತೆಗೆದುಕೊಂಡವರು. ಆ ಮಹಾನುಭಾವ ಎಲ್ಲಾ ಕಾಲಕ್ಕೂ ಬೇಕಾದ್ದನ್ನು ಚಿಂತಿಸಲು ಕೊಟ್ಟು ಹೋಗಿದ್ದಾನೆಂದು. ಈ ದೃಷ್ಟಿಯಿಂದ ಲಕ್ಷ್ಮೇಶ ತೊಳ್ಪಾಡಿಯವರು ಬೆಂಗಳೂರಿಗೆ ಬಂದಾಗಲೆಲ್ಲ ಮೇಸ್ಟ್ರನ್ನು ಕಾಣಲು ಬರುತ್ತಿದ್ದರು. ಆಗ ಎಷ್ಟುಸಂಭ್ರಮದಿಂದ ವ್ಯಾಸಭಾರತ ಕುರಿತು ಮಾತಾಡಿಸುತ್ತಿದ್ದರು. ಅದರಲ್ಲೂ ಒಮ್ಮೆ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ರಥಬೀದಿ ಗೆಳೆಯರ ಕಾರ್ಯಕ್ರಮದಲ್ಲಿ ತೊಳ್ಪಾಡಿಯವರ ‘ಮಹಾಭಾರತ’ ಕುರಿತ ಉಪನ್ಯಾಸವನ್ನು ಲಂಕೇಶ್‌ ಅವರು ಎಷ್ಟುರೋಮಾಂಚಿತರಾಗಿ ಸ್ವೀಕರಿಸಿದ್ದರು!

ಬಾಲ್ಯವೇ ಶ್ರೀಮಂತ

ಮೇಸ್ಟು್ರ ಯಾವಾಗಲೂ ಗಾಢವಾಗಿ ನಂಬಿದ್ದರು; ಪ್ರತಿಯೊಬ್ಬರ ಬದುಕಿನಲ್ಲಿ ಅವನ ಶ್ರೀಮಂತವಾದ ಬಾಲ್ಯವೇ ‘ನೆನಪೆಂಬ’ ಅಂತಃಶಕ್ತಿಯ ಮೂಲಕ ಶ್ರೀಮಂತವಾಗಿ ಉಳಿಯುವುದು ಎಂದು. ಆದ್ದರಿಂದಲೇ ಆ ನೆನಪಿಗೆ ಆಯಾಸಗೊಳಿಸಬಾರದೆಂದು; ಒಂದು ಅಮೂಲ್ಯ ಸಲಹೆ ನೀಡಿದರು; ಅದೇನೆಂದರೆ; ‘‘ಯಾವಾಗಲೂ ತಲೆದಿಂಬಿನ ಪಕ್ಕದಲ್ಲಿ ಒಂದು ನೋಟ್‌ಬುಕ್ಕನ್ನು ಮತ್ತು ಒಂದು ಪೆನ್ಸಿಲ್‌ ಅಥವಾ ಪೆನ್ನು ಇಟ್ಟುಕೊಂಡಿರು. ಏನೇ ನೆನಪಿಗೆ ಬಂದರೂ ಆ ಕಾಗದದ ಮೇಲೆ ಕಣ್ಣುಮುಚ್ಚಿಕೊಂಡೇ ಬರೆದಿಡು. ಬೆಳಿಗ್ಗೆ ಎದ್ದ ತಕ್ಷಣ ಅದನ್ನು ನೆನಪು ಮಾಡಿಕೊಳ್ಳಲು ಒದ್ದಾಡದೆ, ನೀನು ಗ್ರಹಿಸಬಹುದು’’ ಎಂದು ಹೇಳಿದ್ದನ್ನು ಕಳೆದ ಮುವತ್ತು ವರ್ಷಗಳಿಂದ ತಪ್ಪದೇ ಪಾಲಿಸುತ್ತಿರುವೆ. ಇದರೊಟ್ಟಿಗೆ; ಅವರ ಮತ್ತೊಂದು ಛೇಡಿಸುವಿಕೆ ನನಗೆ ತುಂಬ ಅನುಕೂಲವಾಯಿತು. ನಾನು ಎಷ್ಟೋ ವರ್ಷ ಮೇಸ್ಟ್ರಂಥ ಶಿಸ್ತುಬದ್ಧ ವ್ಯಕ್ತಿಯ ಮುಂದೆ, ಕೆಲವು ಮುಖ್ಯ ಪಾಯಿಂಟ್ಸನ್ನ ಕೈಮೇಲೆ ಬರೆದುಕೊಳ್ಳುತ್ತಿದ್ದೆ. ಅದಕ್ಕೆ ಅವರು ‘‘ಇವನೆಷ್ಟುಅನಾಗರಿಕ ಎಂದರೆ, ಅಮೂಲ್ಯ ಸಂಗತಿಗಳನ್ನು ಕೈಮೇಲೆ ಬರೆದುಕೊಳ್ಳುವನು. ಮತ್ತೆ ಅದನ್ನು ಕುಂಡಿಗೊರಿಸಿ ಬಿಡುವನು.’’ ಹೀಗೆ ಹೇಳಿ ಅಥವಾ ಸಣ್ಣ ಪ್ರಮಾಣದಲ್ಲಿ ಅವಮಾನಕ್ಕೊಳಪಡಿಸಿ; ಕಡ್ಡಾಯವಾಗಿ ಜೇಬಿನಲ್ಲಿ ಒಂದು ಚಿಕ್ಕ ಬರವಣಿಗೆಯ ಪ್ಯಾಡ್‌ ಮತ್ತು ಜೇಬಿನಲ್ಲಿ ಪೆನ್ನು ಇರುವಂತೆ ನೋಡಿಕೊಂಡರು.

click me!