ಅಮೆರಿಕಕ್ಕೆ ಮೋದಿ ‘ದಾಖಲೆ’ಯ ಪ್ರವಾಸ: 5 ದಿನ, 75 ದೇಶಗಳ ಜತೆ ನಮೋ ಟೀಂ ಚರ್ಚೆ

By Web Desk  |  First Published Sep 21, 2019, 7:27 AM IST

ಅಮೆರಿಕಕ್ಕೆ ಮೋದಿ ‘ದಾಖಲೆ’ಯ ಪ್ರವಾಸ| 5 ದಿನ, 75 ದೇಶಗಳ ಜತೆ ನಮೋ ಟೀಂ ಚರ್ಚೆ| ವಿಶ್ವಸಂಸ್ಥೆಯಲ್ಲಿ ಮೋದಿ ಬಿಡುವಿಲ್ಲದ ಕಾರ‍್ಯಕ್ರಮ| ವಿಶ್ವಸಂಸ್ಥೆ ಮಹಾಧಿವೇಶನ ಸೇರಿ ವಿವಿಧ ಕಾರ‍್ಯಕ್ರಮಗಳಲ್ಲಿ ಮೋದಿ ಭಾಗಿ| ಈ ಸಂದರ್ಭ ಮೋದಿ, ತಂಡದಿಂದ 75 ದೇಶಗಳ ಜತೆ ದ್ವಿಪಕ್ಷೀಯ ಚರ್ಚೆ| ಪ್ರತಿ ದೇಶದ ಪ್ರತಿನಿಧಿ ಜತೆ ಕನಿಷ್ಠ 30 ನಿಮಿಷಗಳ ಕಾಲ ಸಮಾಲೋಚನೆ| ಭಾರತದ ರಾಜತಾಂತ್ರಿಕ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಮಾತುಕತೆ


ನ್ಯೂಯಾರ್ಕ್[ಸೆ.21]: ಪ್ರಧಾನಿ ನರೇಂದ್ರ ಮೋದಿ ಅವರ ಬಹುನಿರೀಕ್ಷಿತ ಮತ್ತು ಬಹುಮಹತ್ವವುಳ್ಳ ಒಂದು ವಾರದ ಅಮೆರಿಕದ ಪ್ರವಾಸ ಶುಕ್ರವಾರ ರಾತ್ರಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸುದೀರ್ಘ ಪ್ರವಾಸಕ್ಕಾಗಿ ಶುಕ್ರವಾರ ತಡರಾತ್ರಿ ನವದೆಹಲಿಯಿಂದ ಅಮೆರಿಕದತ್ತ ಪ್ರಯಾಣ ಬೆಳೆಸಿದರು.

ವಿಶ್ವಸಂಸ್ಥೆಯ ಮಹಾಧಿವೇಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಈ ಭೇಟಿ ಅಮೆರಿಕ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಹೊಸ ಅಧ್ಯಾಯ ತೆರೆಯಲಿದೆ ಎಂದೇ ಭಾವಿಸಲಾಗಿದೆ.

Latest Videos

undefined

ಈ ಪ್ರವಾಸದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡ ಕೇವಲ ಐದು ದಿನಗಳ ಅಂತರದಲ್ಲಿ ಬರೋಬ್ಬರಿ 75 ದೇಶಗಳ ಮುಖ್ಯಸ್ಥರು ಹಾಗೂ ವಿದೇಶಾಂಗ ಸಚಿವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸುವ ಮೂಲಕ ಹೊಸ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ.

ಶುಕ್ರವಾರ ತಡರಾತ್ರಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ ಮೋದಿ ಅವರು ಭಾನುವಾರ ಹೂಸ್ಟನ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸೆ.23ರ ಸೋಮವಾರದಿಂದ ಸೆ.27ರವರೆಗೆ ವಿಶ್ವಸಂಸ್ಥೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ಅದೇ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್‌ ಅವರನ್ನು ಒಳಗೊಂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತಂಡ 75 ದೇಶಗಳ ನಾಯಕರ ಜತೆ ಮಾತುಕತೆ ನಡೆಸಲಿದೆ ಎಂದು ವಿಶ್ವಸಂಸ್ಥೆಯನಲ್ಲಿನ ಭಾರತದ ಕಾಯಂ ಪ್ರತಿನಿಧಿಯಾಗಿರುವ ಸೈಯದ್‌ ಅಕ್ಬರುದ್ದೀನ್‌ ಅವರು ಮಾಹಿತಿ ನೀಡಿದ್ದಾರೆ.

ಈ ಮಾತುಕತೆಗಳು ವಿಶ್ವಸಂಸ್ಥೆ ಅಧಿವೇಶನದ ಬದಿಯಲ್ಲಿ ನಡೆಯುವಂಥವೋ ಅಥವಾ ಸುಖಾಸುಮ್ಮನೆ ನಡೆಯುವಂಥವೋ ಅಲ್ಲ. ಪ್ರಧಾನಿ ಹಾಗೂ ಅವರ ತಂಡದ ಸದಸ್ಯರು ವಿವಿಧ ದೇಶಗಳ ಪ್ರತಿನಿಧಿಗಳ ಜತೆ ಕನಿಷ್ಠ 30 ನಿಮಿಷಗಳ ಕಾಲ ಒಂದೇ ಕೋಣೆಯಲ್ಲಿ ಸಮಾಲೋಚನೆ ನಡೆಲಿದ್ದಾರೆ. ಈ ರೀತಿಯ ಮಾತುಕತೆ ಹಿಂದೆಂದೂ ನಡೆದಿಲ್ಲ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ಇಷ್ಟುಸಂಖ್ಯೆ ದೇಶಗಳ ಜತೆ ಇಷ್ಟೊಂದು ತೀವ್ರ ರೀತಿಯ ಮಾತುಕತೆ ನಡೆದಿರಲಿಲ್ಲ ಎಂದು ಅವರು ವಿವರಿಸಿದ್ದಾರೆ.

click me!