
ನವದೆಹಲಿ : ರೈತರ ಸಾಲ ಮನ್ನಾ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಸಾಲ ಮನ್ನಾಕ್ಕಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದು, ಬುಧವಾರ ಬೆಂಗಳೂರಿನಲ್ಲಿ ಈ ಕುರಿತು ವಿವರ ನೀಡುವುದಾಗಿಯೂ ಅವರು ಪ್ರಕಟಿಸಿದ್ದಾರೆ.
ದೆಹಲಿಯಲ್ಲಿ ಸೋಮವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು 24 ಗಂಟೆಯೊಳಗೆ ಸಾಲ ಮನ್ನಾ ಮಾಡುವುದಾಗಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿದ್ದು ನಿಜ. ಆದರೆ ಉಸಿರಾಡಲು ಸಮಯವಾದರೂ ನೀಡಬೇಡವೇ. ನನಗೆ ನನ್ನದೇ ಆದ ಇತಿಮಿತಿಗಳಿವೆ. ಸಾಲ ಮನ್ನಾ ಮಾಡದಿದ್ದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ನಿಮಗೆ ಏಕೆ ಎರಡ್ಮೂರು ದಿನ ಸಮಯ ನೀಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಧ್ಯಮಗಳನ್ನು ಕುಮಾರಸ್ವಾಮಿ ಪ್ರಶ್ನಿಸಿದರು.
ಕೆಲ ಮಾಧ್ಯಮಗಳಲ್ಲಿ ಜನತೆಯಲ್ಲಿ ಗೊಂದಲ ಸೃಷ್ಟಿಸುವ ವರದಿಗಳು ಬರುತ್ತಿವೆ. ಕರ್ನಾಟಕದ ಇತಿಹಾಸದಲ್ಲಿ ನನ್ನಷ್ಟುಜನ ಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡುವ ರಾಜಕಾರಣಿಗಳು ಬೇರೆ ಇಲ್ಲ. ಸಾಮಾನ್ಯ ಪ್ರಜೆಯೂ ಮುಖ್ಯಮಂತ್ರಿ ಬಳಿ ನೇರವಾಗಿ ಬಂದು ಆಹವಾಲು ಸಲ್ಲಿಸುವ ಅವಕಾಶ ಮಾಡಿಕೊಟ್ಟವ ನಾನು. ಕುಮಾರಸ್ವಾಮಿ ಯೂಟರ್ನ್ ತೆಗೆದುಕೊಂಡರು, ರೈಟ್ ಟರ್ನ್ ತೆಗೆದುಕೊಂಡರು ಎಂದು ಏಕೆ ಕೆಲ ಮಾಧ್ಯಮಗಳು ವರದಿ ಮಾಡುತ್ತಿವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ನಾನು ಹೇಳೇ ಇಲ್ಲ. ನಾನು ಹೇಳಿದ್ದು ಯಾವುದೇ ತೀರ್ಮಾನವನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ಈ ವಿಚಾರದಲ್ಲಿ ನನಗೆ ಬೆಂಬಲ ನೀಡಿದ ಕಾಂಗ್ರೆಸ್ ಪಕ್ಷದ ಸಲಹೆ ಪಡೆಯುವ ಅನಿವಾರ್ಯತೆ ಇದೆ ಎಂದಷ್ಟೇ ತಿಳಿಸಿದ್ದೇನೆ. ಆದರೆ ಮಾಧ್ಯಮಗಳು ನಾನು ಬಳಸಿದ ಪದವನ್ನು ತಿರುಚಿವೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ನಿನ್ನೆ (ಭಾನುವಾರ) ನಾಲ್ಕು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರು ಜವಾಬ್ದಾರರು? ಬಿಜೆಪಿ ನಾಯಕರು ನಾನು ಸಾಲ ಮನ್ನಾ ಮಾಡುವುದಿಲ್ಲ ಎಂಬ ಅಭಿಪ್ರಾಯವನ್ನು ಜನಸಾಮಾನ್ಯರಲ್ಲಿ ಮೂಡಿಸಲು ಹೊರಟಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸದಸ್ಯರ ಕುಟುಂಬವನ್ನು ಉಳಿಸುವವರು ಯಾರು, ಯಡಿಯೂರಪ್ಪ ಅಥವಾ ಬಿಜೆಪಿ ಪಕ್ಷ ಆ ಕುಟುಂಬಗಳಿಗೆ ನೆರವು ನೀಡುತ್ತದೆಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ರಾಜ್ಯದ ಜನತೆ ಬಿಜೆಪಿಯ ಕುತಂತ್ರಕ್ಕೆ ಬಲಿಯಾಗಬಾರದು ಎಂದರು.
ಯಾರು ಯಾವುದೇ ರೀತಿಯ ಆತಂಕ, ಅನುಮಾನಗಳಿಗೆ ಒಳಗಾಗಬಾರದು. ರೈತರ ಸಾಲ ಮನ್ನಾ ಮಾತ್ರವಲ್ಲ, ಇನ್ನೂ ಅನೇಕ ಕಾರ್ಯಕ್ರಮಗಳನ್ನು ನೀಡಲಿದ್ದೇವೆ. ಹಲವು ತೊಂದರೆಗಳಿದ್ದರೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ನನ್ನ ಪ್ರತಿಕ್ಷಣವನ್ನು ಜನರಿಗೆ ಮುಡಿಪಾಗಿಡುತ್ತೇನೆ. ನಾನು ಕರ್ನಾಟಕದ ಜನತೆಗೆ ಅನ್ಯಾಯ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.