ಎನ್‌ಇಡಿಎ ಸಮಾವೇಶದಲ್ಲಿ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ| ದೇಶದೆಲ್ಲೆಡೆಯಿಂದ ಅಕ್ರಮ ವಲಸಿಗರ ಗಡೀಪಾರು: ಶಾ| ದೇಶಾದ್ಯಂತ ನೆಲೆಸಿರುವ ಅಕ್ರಮ ವಲಸಿಗರಲ್ಲಿ ನಡುಕ
ಗುವಾಹಟಿ[ಸೆ.10]: ಅಸ್ಸಾಂನಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಆರ್‌ಸಿ) ಅಂತಿಮ ಪಟ್ಟಿಪ್ರಕಟಗೊಂಡ ಬೆನ್ನಲ್ಲೇ, ಕೇವಲ ಅಸ್ಸಾಂ ಅಷ್ಟೇ ಅಲ್ಲ ಇಡೀ ದೇಶದಿಂದಲೇ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಗುವಾಹಟಿಯಲ್ಲಿ ನಾಥ್‌ರ್ ಈಸ್ಟ್ ಡೆಮೊಕ್ರಾಟಿಕ್ ಅಲಯನ್ಸ್ (ಎನ್‌ಇಡಿಎ)ನ ನಾಲ್ಕನೇ ಸಮಾವೇಶ ಉದ್ದೇಶಿಸಿ ಮಾತನಾಡಿದ ಶಾ, ಈಶಾನ್ಯ ರಾಜ್ಯಗಳಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳ ವೈಫಲ್ಯದಿಂದಾಗಿ ಸುದೀರ್ಘಕಾಲದ ಉಗ್ರಗಾಮಿತ್ವ ನೆಲೆಸಿತ್ತು. ದೇಶದ ಇತರ ರಾಜ್ಯಗಳಿಂದ ಈಶಾನ್ಯ ರಾಜ್ಯಗಳನ್ನು ದೂರ ಇಡಲಾಗಿತ್ತು. ಈಶಾನ್ಯ ರಾಜ್ಯಗಳ ಬಗ್ಗೆ ಕಾಂಗ್ರೆಸ್ ಗಮನ ಹರಿಸಲಿಲ್ಲ. ಆ ಪಕ್ಷ ಒಡೆದ ಆಳುವ ನೀತಿಯಲ್ಲಿ ಯಾವಾಗಲೂ ನಂಬಿಕೆ ಹೊಂದಿದೆ. ಹೀಗಾಗಿ ಉಗ್ರವಾದ ಬೆಳೆಯಲು ಕಾರಣವಾಯಿತು ಎಂದು ಅಮಿತ್ ಶಾ ಪ್ರತಿಪಾದಿಸಿದ್ದಾರೆ.
371ನೇ ಕಲಂ ರದ್ದು ಮಾಡಲ್ಲ: ಅಮಿತ್ ಶಾ ಸ್ಪಷ್ಟನೆ
ಅಮಿತ್ ಶಾ ಅವರ ಭಾಷಣ ಅಕ್ರಮ ವಲಸಿಗರ ಬಗ್ಗೆಯೇ ಗಮನ ಕೇಂದ್ರೀಕರಿಸಿದ್ದರೂ, ಕಾರ್ಯಕ್ರಮದಲ್ಲಿ ಉಪಸ್ಥಿತರಿಂದ ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಪೌರತ್ವ (ತಿದ್ದುಪಡಿ) ಮಸೂದೆಯ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಕಾನೂನು ಜಾರಿಗೂ ಮುನ್ನ ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆಯುವಂತೆ ಮನವಿ ಮಾಡಿದ್ದಾರೆ.