
ನವದೆಹಲಿ: ಧರ್ಮದ ಆಧಾರದಲ್ಲಿ ಮತ ಯಾಚನೆ ಮಾಡಿದ ಕಾರಣಕ್ಕೆ ಕೇರಳದ ಶಾಸಕರೊಬ್ಬರು ಮಾಸಾರಂಭದಲ್ಲಿ ಅನರ್ಹಗೊಂಡ ಪ್ರಕರಣ ಹಚ್ಚ ಹಸಿರಿರುವಾಗಲೇ, 9 ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಕಾಂಗ್ರೆಸ್ಸಿನ ಹಿರಿಯ ನಾಯಕ ಕಮಲನಾಥ್ ಕೂಡ ಧರ್ಮದ ಆಧಾರದಲ್ಲೇ ಮತ ಯಾಚನೆ ಮಾಡಿದ ವಿವಾದಕ್ಕೆ ಸಿಲುಕಿದ್ದಾರೆ.
ನ.28ರಂದು ವಿಧಾನಸಭೆ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದಲ್ಲಿ ಮುಸ್ಲಿಮರು ಸಾಮೂಹಿಕವಾಗಿ ಮತ ಹಾಕದಿದ್ದರೆ ಕಾಂಗ್ರೆಸ್ ಸೋಲಲಿದೆ ಎಂದು ಕಮಲನಾಥ್ ಹೇಳಿದ್ದರೆನ್ನಲಾದ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಇದು ಕಾಂಗ್ರೆಸ್ಸಿನ ಕೋಮುವಾದಿ ಪ್ರಚಾರಕ್ಕೆ ಸಾಕ್ಷ್ಯ ಎಂದು ಬಿಜೆಪಿಯ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ಜೊತೆಗೆ ಈ ಬಗ್ಗೆ ಚುನಾವಣಾ ಆಯೋಗ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ಸಿನ ವಕ್ತಾರೆ ಶೋಭಾ ಓಝಾ ‘ವಿವಿಧ ಸಮುದಾಯದ ಜನರಿಗೆ ಕಮಲನಾಥ್ ಮತದಾನ ಮಾಡಿ ಎಂದು ಹೇಳಿದ್ದರು. ಆದರೆ, ಬಿಜೆಪಿ ಎಡಿಟ್ ಮಾಡಲಾದ ವಿಡಿಯೋ ತೋರಿಸುತ್ತಿದೆ’ ಎಂದು ಹೇಳಿದ್ದಾರೆ.
ಕಮಲನಾಥ್ ಹೇಳಿದ್ದೇನು?:
ಅನಾಮಧೇಯ ಪ್ರದೇಶವೊಂದರಲ್ಲಿ ಮುಸ್ಲಿಂ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದ ಕಮಲ್‌ನಾಥ್ ‘ಮುಂಬರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ನಮ್ಮ ಬಳಿ ಯಾವುದೇ ಎಕ್ಸ್‌ರೇ ಯಂತ್ರ ಇಲ್ಲ. ಚುನಾವಣಾ ಸಮೀಕ್ಷೆಗಳು ಏನು ಹೇಳಿವೆ, ಪತ್ರಿಕಾ ವರದಿಗಳು ಏನು ಹೇಳುತ್ತವೆ ಎಂಬುದು ನಮಗೆ ಬೇಕಿಲ್ಲ. ಅದಾವ್ಯುದೂ ಇಲ್ಲಿ ಫಲ ನೀಡೋಲ್ಲ. ಗೆಲ್ಲುವ ಅಭ್ಯರ್ಥಿ ಹುಡುಕುವೊಂದೇ ನಮ್ಮ ಗುರಿ. ಕೆಲವರ ವಿರುದ್ಧ 4 ಕೇಸು ಇರಬಹುದು. ಇನ್ನೊಬ್ಬರು 5 ಎನ್ನಬಹುದು. ಆದರೆ ನಮಗೆ ಗೆಲುವೊಂದೇ ಗುರಿ. ಯಾರಿಗೆ ಗೆಲುವಿನ ಅರ್ಹತೆ ಇದೆಯೋ ಅವರಿಗೆ ಟಿಕೆಟ್ ಖಚಿತ’ ಎಂದು ಹೇಳಿದ್ದಾರೆ.
ಜೊತೆಗೆ ‘ನಮ್ಮ ಅಭ್ಯರ್ಥಿಗಳು ಬುಡಕಟ್ಟು ಜನರು ಮತ್ತು ಆದಿವಾಸಿಗಳ ಮತಗಳಿಂದ ಗೆಲ್ಲುವುದು ಸಾಧ್ಯವಿಲ್ಲ. ನಮಗೆ ಮುಸ್ಲಿಮರು ಮತ್ತು ಇತರೆ ಅಂಥದ್ದೇ ಸಮುದಾಯಗಳು ಮಾತ್ರವೇ ಜಯ ತಂದುಕೊಡಬಲ್ಲವು. ಆದಿವಾಸಿಗಳ ಮತ ಎಲ್ಲಾ ಪಕ್ಷಗಳಿಗೂ ವಿಭಜನೆಯಾಗುತ್ತದೆ. ಹೀಗಾಗಿ ನಾವು ನಿಮ್ಮ ಸಮುದಾಯದ ಹೆಚ್ಚು ಜನ ಚುನಾವಣೆಗೆ ನಿಲ್ಲಬೇಕೆಂದು ಬಯಸುತ್ತೇವೆ. ಜೊತೆಗೆ ಮುಸ್ಲಿಂ ಸಮುದಾಯದ ಶೇ.80ರಷ್ಟುಜನ ನಮಗೆ ಮತ ಹಾಕಿದರೂ ಕಾಂಗ್ರೆಸ್‌ಗೆ ಗೆಲುವು ಸಾಧ್ಯವಾಗದು. ಶೇ.90ರಷ್ಟುಮತ ಮಾತ್ರವೇ ನಮ್ಮನ್ನು ಉಳಿಸಬಲ್ಲದು. ಇದು ಸಾಧ್ಯವಾಗಲು ನೀವು ಪ್ರತಿ ಮತಗಟ್ಟೆಯ ವ್ಯಾಪ್ತಿಯ ಜನರನ್ನೂ ತಲುಪಬೇಕು. ಮತದಾರರನ್ನು ಹುಡುಕಬೇಕು. ಮುಸ್ಲಿಮರ ಮತಗಳು ಹೆಚ್ಚಿರುವ ಕಡೆ ಈ ಹಿಂದಿನ ಚುನಾವಣೆಗಳಲ್ಲಿ ಎಷ್ಟುಮತದಾನವಾಗಿದೆ ಎಂಬುದನ್ನು ಪರಿಶೀಲಿಸಿ. ಕೇವಲ ಶೇ.60ರಷ್ಟುಮತದಾನವಾಗಿದೆ ಎಂದರೆ, ಏಕೆ? ಅದಕ್ಕೆ ಕಾರಣ ಏನು ಎಂದು ವಿಶ್ಲೇಷಿಸಿ. ಇಂಥ ವಿಶ್ಲೇಷಣೆ ಮಾತ್ರವೇ ನಮಗೆ ಜಯ ತಂದುಕೊಡಬಲ್ಲದು’ ಎಂದು ಕಮಲನಾಥ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ