
ಬಂಟ್ವಾಳ (ಜ.1): ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಮಂಗಳೂರಿನಲ್ಲಿ ಕಳೆದ ವಾರವಷ್ಟೇ ಸಾರ್ವಜನಿಕ ಸಮಾರಂಭದಲ್ಲಿ ಅರಣ್ಯ ಸಚಿವ ರಮಾನಾಥ ರೈ ತಮ್ಮ ವಿರುದ್ಧ ಕುಚೋದ್ಯ ಮಾಡಿದರು ಎಂದು ಕಣ್ಣೀರು ಹಾಕಿದ್ದರು. ಈಗ ಸಚಿವ ರಮಾನಾಥ ರೈ ಸರದಿ.
ರೈ ಅವರೂ ಭಾನುವಾರ ಬಿ.ಸಿ.ರೋಡ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ‘ಜನಾರ್ದನ ಪೂಜಾರಿ ಮತ್ತು ನನ್ನ ನಡುವೆ ಕೆಲವರು ಸಂಬಂಧ ಹಾಳು ಮಾಡುತ್ತಿದ್ದಾರೆ’ ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ರೈ, ಬಿಲ್ಲವ ಮುಖಂಡ, ಬಿಜೆಪಿ ಮುಂದಾಳು ಹರಿಕೃಷ್ಣ ಬಂಟ್ವಾಳ ವಿರುದ್ಧ ತೀವ್ರ ಕೆಂಡಾಮಂಡಲರಾದರು.
ಅಲ್ಲದೆ ಪೂಜಾರಿ ವಿರುದ್ಧ ತನ್ನನ್ನು ವಿನಾ ಕಾರಣ ಎತ್ತಿಕಟ್ಟಿ ರಾಜಕೀಯ ಮಾಡುತ್ತಿದ್ದಾರೆ ಎಂದು ಭಾವುಕರಾದರು. ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭ ಹೈಕಮಾಂಡ್ ಮಂಗಳೂರು ಕ್ಷೇತ್ರದಿಂದ ಎರಡು ಹೆಸರು ಕೇಳಿದರೂ ಜನಾರ್ದನ ಪೂಜಾರಿ ಅವರ ಒಂದೇ ಒಂದು ಹೆಸರು ಶಿಫಾರಸು ಮಾಡಿದವ ನಾನು. ಇಂದಿಗೂ ಪೂಜಾರಿ ಬಗ್ಗೆ ತನಗೆ ಅತೀವ ಗೌರವ ಇದೆ. ಪೂಜಾರಿ ಬಗ್ಗೆ ಅವಹೇಳನ ಮಾಡಿದ ಬಗ್ಗೆ ಪುರಾವೆ ಇದ್ದರೆ ಅಪಪ್ರಚಾರ ನಡೆಸುವವರು ಸಾಬೀತುಪಡಿಸಲಿ ಎಂದರು.
ಪ್ರಮಾಣಕ್ಕೆ ಸಿದ್ಧ: ‘ನಾನು ಪೂಜಾರಿ ಅವರನ್ನು ಅವಹೇಳನ ಮಾಡಿದ ಬಗ್ಗೆ ಒಂದು ವೇಳೆ ಅವರ ಕುಟುಂಬ ಸತ್ಯಪ್ರಮಾಣಕ್ಕೆ ನನ್ನನ್ನು ಕರೆದರೆ ಸಿದ್ಧನಿದ್ದೇನೆ, ಅದು ಬಿಟ್ಟು ಲೆಕ್ಕಕ್ಕಿಲ್ಲದ ದಾರಿ ಹೋಕರು ಮಾಡುವ ಸವಾಲನ್ನು ನಾನು ಸ್ವೀಕರಿಸುವುದಿಲ್ಲ’ ಎಂದು ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.