ನೊಬೆಲ್ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

Published : Oct 03, 2018, 11:04 AM IST
ನೊಬೆಲ್ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

ಸಾರಾಂಶ

2018 ನೇ ಸಾಲಿನ ನೊಬೆಲ್ ಪ್ರಶಸ್ತಿ ವಿಜೇತರ ಹೆಸರುಗಳ ಪ್ರಕಟಣೆ |  ನೊಬೆಲ್ ಪ್ರಶಸ್ತಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಎಂದೇ ಖ್ಯಾತಿ ಪಡೆದಿದೆ. ಇದಕ್ಕೆ ಕಾರಣಗಳೇನು? ಇಲ್ಲಿದೆ ಮಾಹಿತಿ 

ಬೆಂಗಳೂರು (ಅ. 03):  2018 ನೇ ಸಾಲಿನ ನೊಬೆಲ್ ಪ್ರಶಸ್ತಿ ವಿಜೇತರ ಹೆಸರುಗಳ ಪ್ರಕಟಣೆ ಆರಂಭವಾಗಿದೆ. ವಿಜ್ಞಾನಿ ಆಲ್ಫ್ರೆಡ್ ನೊಬೆಲ್‌ರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುನ್ನತ ಜನೋಪಕಾರಿ ಸಾಧನೆ, ಸಂಶೋಧನೆ, ಆವಿಷ್ಕಾರ ಮತ್ತು ಸೇವೆಗಳಿಗೆ ನೀಡಲಾಗುತ್ತಿರುವ ಪುರಸ್ಕಾರವಿದು. ನೊಬೆಲ್ ಪ್ರಶಸ್ತಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಎಂದೇ ಖ್ಯಾತಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಕುರಿತಾದ ಕುತೂಹಲಕಾರಿ ಕಿರುಮಾಹಿತಿ ಇಲ್ಲಿದೆ.

ಬಾಂಬ್ ಕಂಡುಹಿಡಿದವನ ಹಣದಲ್ಲಿ ನೀಡುವ ಪ್ರಶಸ್ತಿ!

‘ಡೈನಮೈಟ್’ ಸ್ಫೋಟಕವನ್ನು ಆವಿಷ್ಕರಿಸಿದ ಸ್ವೀಡನ್ನಿನ ವಿಜ್ಞಾನಿ ಆಲ್ಫ್ರೆಡ್ ಬರ್ನ್‌ಹಾರ್ಡ್ ನೊಬೆಲ್ ಅವರು 1888 ರ ಒಂದು ಮುಂಜಾನೆ ದಿನಪತ್ರಿಕೆಯಲ್ಲಿ ತಮ್ಮದೇ ನಿಧನ ವಾರ್ತೆ ಓದಿದರು! ಅದರಲ್ಲಿ ‘ದಿ ಮರ್ಚೆಂಟ್ ಆಫ್ ದ ಡೆತ್ ಈಸ್ ಡೆಡ್’ ಎಂದು ಬರೆಯಲಾಗಿತ್ತು.

ವಾಸ್ತವವಾಗಿ ಆಲ್ಫ್ರೆಡ್ ಸಹೋದರ ಲಾಡ್‌ವಿಗ್ ಅವರು ಮರಣಹೊಂದಿದ್ದನ್ನು ಆಲ್ಫ್ರೆಡ್ ಅವರೇ ನಿಧನರಾಗಿದ್ದಾರೆಂದು ದಿನಪತ್ರಿಕೆ ತಪ್ಪಾಗಿ ವರದಿ ಮಾಡಿತ್ತು. ಇದು ಆಲ್ಫ್ರೆಡ್ ನೊಬೆಲ್ ಅವರನ್ನು ತನ್ನ ಮರಣದ ಬಳಿಕ ತನ್ನನ್ನು ಹೇಗೆ ಜನ ನೆನಪಿಟ್ಟುಕೊ ಳ್ಳುತ್ತಾರೆ ಎಂಬ ಬಗ್ಗೆ ಚಿಂತೆಗೆ ಹಚ್ಚಿತು. ಆ ಘಟನೆ ನೊಬೆಲ್ ಪ್ರಶಸ್ತಿಯ ಉಗಮಕ್ಕೆ ನಾಂದಿಯಾಯಿತು.

ಡೈನಮೈಟ್ ಸ್ಫೋಟಕವು ಯುದ್ಧಗಳಲ್ಲಿ ಹೆಚ್ಚಾಗಿ ಬಳಕೆಯಾದ್ದರಿಂದ ಆಲ್ಫ್ರೆಡ್ ಅಪಾರ ಸಂಪತ್ತನ್ನು ಗಳಿಸಿದ್ದರು. ಆದರೆ ತನ್ನಿಂದ ಉಂಟಾದ ಸಾವು - ನೋವುಗಳಿಂದ ವಿಚಲಿತಗೊಂಡು 1895 ರಲ್ಲಿ ತನ್ನ ಸಂಪತ್ತಿನ ಶೇ.94 ರಷ್ಟು ಭಾಗವನ್ನು ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಾಹಿತ್ಯ ಮತ್ತು ಶಾಂತಿ ವೈದ್ಯಕೀಯ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಗೈದಿರುವವರಿಗೆ ಪ್ರಶಸ್ತಿ ನೀಡಲು ಮೀಸಲಿಡಬೇಕೆಂದು ಉಯಿಲು ಬರೆದರು. ಬಳಿಕ ಆಲ್ಫ್ರೆಡ್ ತಮ್ಮ 63 ನೇ ವಯಸ್ಸಿನಲ್ಲಿ 1896 ರಲ್ಲಿ ನಿಧನರಾದರು.  ಈ ಪ್ರಕಾರವಾಗಿ 1901 ರಲ್ಲಿ ಮೊದಲ ನೊಬೆಲ್ ಪ್ರಶಸ್ತಿ ನೀಡಲಾಯಿತು.

ನೊಬೆಲ್ ಪ್ರಶಸ್ತಿ ಕೊಡುವವರು ಯಾರು?

ನಾರ್ವೆಯ ಓಸ್ಲೋದಲ್ಲಿ ನೊಬೆಲ್ ಪ್ರಶಸ್ತಿ ನೀಡುವುದಕ್ಕೆಂದೇ ಪ್ರತಿಷ್ಠಾನ ರಚಿಸಲಾಗಿದೆ. ಅದು ನೊಬೆಲ್ ಪ್ರಶಸ್ತಿಗಳನ್ನು ನೀಡುತ್ತದೆ. ಆಲ್ಫ್ರೆಡ್ ನೊಬೆಲ್ ನಿಧನರಾದಾಗ ಸ್ವೀಡನ್ ಮತ್ತು ನಾರ್ವೆ ಒಂದೇ ಒಕ್ಕೂಟದಲ್ಲಿದ್ದ ದೇಶಗಳಾಗಿದ್ದವು. ನಂತರ ನಾರ್ವೆ ಪ್ರತ್ಯೇಕ ಗೊಂಡಿತ್ತು. 1897 ರವರೆಗೂ ನಾರ್ವೆ ಸರ್ಕಾರ ಈ ಪ್ರಶಸ್ತಿ ನೀಡಲು ಅನುಮೋದನೆ ನೀಡಿರಲಿಲ್ಲ. ಬಳಿಕ ನೊಬೆಲ್ ಫೌಂಡೇಶನ್ ರಚನೆಯಾಯಿತು. ಅಂತಿಮವಾಗಿ 1901 ರಲ್ಲಿ ಮೊದಲ ಬಾರಿಗೆ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನೊಬೆಲ್ ಪ್ರಶಸ್ತಿ ಮೊತ್ತ ಎಷ್ಟು?

ಆಲ್ಫ್ರೆಡ್ ನೊಬೆಲ್ ಇರಿಸಿದ್ದ ದತ್ತಿ ಹಣದಿಂದ ಪ್ರತಿವರ್ಷ ಎಷ್ಟು ಬಡ್ಡಿ ಹಾಗೂ ಇತರ ಆದಾಯ ಬರುತ್ತದೆಯೋ ಅದನ್ನು ನೊಬೆಲ್ ವಿಜೇತರಿಗೆ ನೀಡಲಾಗುತ್ತದೆ. 2017 ರಲ್ಲಿ ನೊಬೆಲ್ ವಿಜೇತರಿಗೆ ತಲಾ 7.4  ಕೋಟಿ ರು. (9 ದಶಲಕ್ಷ ಎಸ್‌ಇಕೆ) ದೊರೆತಿತ್ತು. ಇಬ್ಬರು, ಮೂವರಿಗೆ ಒಂದೇ ವಿಷಯದಲ್ಲಿ ಪ್ರಶಸ್ತಿ ಹಂಚಿಕೆಯಾದರೆ ಮೊತ್ತವನ್ನೂ ಹಂಚಿಕೆ ಮಾಡಲಾಗುತ್ತದೆ. ಈ ಪ್ರಶಸ್ತಿಗೆ ಲಾಬಿ ಅಸಾಧ್ಯ

ನೊಬೆಲ್ ಪ್ರಶಸ್ತಿಗಾಗಿ ಸಾಧಕರು ತಾವೇ ನಾಮನಿರ್ದೇಶನ ಮಾಡಿಕೊಳ್ಳುವಂತಿಲ್ಲ. ಬೇರೊಬ್ಬರು ಅವರ ಹೆಸರು ಸೂಚಿಸಬೇಕು. ನಾಮನಿರ್ದೇಶನದ ಸಂದರ್ಭದಲ್ಲಿ ಸಾಧಕ ಜೀವಂತವಾಗಿರಬೇಕು. ಅಲ್ಲದೆ ಪ್ರತಿ ವರ್ಷ ಎಲ್ಲಾ ಕ್ಷೇತ್ರಗಳಿಂದ ಒಟ್ಟಾರೆ 200 ನಾಮನಿರ್ದೇಶನಗಳು ಮಾತ್ರ ಇರಬೇಕು. ಇವರಲ್ಲಿ ಆಯ್ಕೆ ಸಮಿತಿಯು ಪ್ರತಿ ಕ್ಷೇತ್ರದಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತದೆ.

ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕ ಆಯ್ಕೆ ಸಮಿತಿಯಿರುತ್ತದೆ. ಯಾವುದೇ ಲಾಬಿ ಮಾಡದಂತೆ ನಾಮನಿರ್ದೇಶನಗೊಂಡ ಹೆಸರುಗಳನ್ನು ಗುಪ್ತವಾಗಿಡಲಾಗುತ್ತದೆ. ನಿಯಮಗಳ ಪ್ರಕಾರ ಪ್ರತಿ ಕ್ಷೇತ್ರದಲ್ಲಿ ಗರಿಷ್ಠ ಮೂವರಿಗೆ ಮಾತ್ರ ನೊಬೆಲ್ ಪ್ರಶಸ್ತಿ ನೀಡಬೇಕು.

ನೊಬೆಲ್ ವಿಜೇತ ಭಾರತೀಯರು

ರವೀಂದ್ರನಾಥ್ ಠ್ಯಾಗೋರ್ ಸಾಹಿತ್ಯ

ಸಿ.ವಿ. ರಾಮನ್ ಭೌತಶಾಸ್ತ್ರ

ಮದರ್ ತೆರೇಸಾ ಶಾಂತಿ

 ಅಮರ್ತ್ಯ ಸೇನ್ ಅರ್ಥಶಾಸ್ತ್ರ
 

ಹರಿಗೋವಿಂದ ಖುರಾನಾ ವೈದ್ಯಕೀಯ

 ಸುಬ್ರಮಣ್ಯ ಚಂದ್ರಶೇಖರ್ ಭೌತಶಾಸ್ತ್ರ
 

ವಿ.ಎಸ್. ನೈಪಾಲ್ ಸಾಹಿತ್ಯ

ವೆಂಕಟರಾಮನ್ ರಾಮಕೃಷ್ಣನ್ ರಸಾಯನ ಶಾಸ್ತ್ರ

ಆರ್.ಕೆ.ಪಚೌರಿ ಶಾಂತಿ

ಕೈಲಾಶ್ ಸತ್ಯಾರ್ಥಿ ಶಾಂತಿ

ತೀರ್ಪುಗಾರರು ಯಾರು?

ಯಾರು ತೀರ್ಪುಗಾರರಿರಬೇಕು ಎಂಬುದನ್ನೂ ಆಲ್ಫ್ರೆಡ್ ನೊಬೆಲ್ ತಮ್ಮ ಉಯಿಲಿನಲ್ಲಿ ಬರೆದಿಟ್ಟಿದ್ದರು.

ವೈದ್ಯಕೀಯ ಕ್ಷೇತ್ರ: ಕ್ಯಾರೋಲಿನ್‌ಸ್ಕಾ ಸಂಸ್ಥೆ
ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ:
ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ
ಸಾಹಿತ್ಯ ಕ್ಷೇತ್ರ: ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ
ನೊಬೆಲ್ ಶಾಂತಿ ಪುರಸ್ಕಾರ: ನಾರ್ವೆ ಸಂಸತ್ತು ನೇಮಕ ಮಾಡಿರುವ ನೊಬೆಲ್ ಸಮಿತಿ
ಅರ್ಥಶಾಸ್ತ್ರ ಕ್ಷೇತ್ರ: ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ

 ನಿಮಗಿದು ಗೊತ್ತಾ?
- ನೊಬೆಲ್ ವಿಜೇತರ ಹೆಸರುಗಳನ್ನು ಪ್ರತಿವರ್ಷ ಅಕ್ಟೋಬರ್ ಮಧ್ಯಭಾಗದಲ್ಲಿ ಘೋಷಿಸಿದರೂ ಡಿಸೆಂಬರ್ 10, 1896 ರಂದು ಆಲ್ಫ್ರೆಡ್ ನೊಬೆಲ್ ಮರಣ ಹೊಂದಿದ ಸ್ಮರಣಾರ್ಥ ಪ್ರತಿವರ್ಷ ಡಿಸೆಂಬರ್ 10 ರಂದೇ ಪ್ರಶಸ್ತಿ ಪ್ರದಾನ
ಮಾಡಲಾಗುತ್ತದೆ.

- ನೊಬೆಲ್ ಪದಕವು ಸಂಪೂರ್ಣ ಹ್ಯಾಂಡ್‌ಮೇಡ್ ಆಗಿದ್ದು, 18 ಕ್ಯಾರೆಟ್ ಗ್ರೀನ್ ಗೋಲ್ಡ್, 24 ಕ್ಯಾರೆಟ್ ಚಿನ್ನದೊಂದಿಗೆ ಲೇಪಿತವಾಗಿರುತ್ತದೆ.
- 1901-2014 ರ ವರೆಗೆ ನೊಬೆಲ್ ಪ್ರಶಸ್ತಿ ವಿಜೇತರಾದವರು 59 ವರ್ಷ ಒಳಗಿನವರು.

- ಇದುವರೆಗೆ 47 ಮಹಿಳೆಯರು ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ.
- ಪ್ರತಿ ನೊಬೆಲ್ ಪದಕ 175 ಗ್ರಾಂ ತೂಕವಿರುತ್ತದೆ.
- ನೊಬೆಲ್ ಪ್ರಶಸ್ತಿ ವಿಜೇತರಲ್ಲಿ ಬಹುತೇಕರ ಹುಟ್ಟಿದ ತಿಂಗಳು ಜೂನ್.
- ಪಾಕಿಸ್ತಾನದ ಮಲಾಲಾ ಯೂಸುಫ್‌ಜಾಯ್ ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವ್ಯಕ್ತಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ: ಇಂದು ಕಲಾಪ ಮುಂದೂಡುವ ಸಾಧ್ಯತೆ
ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!