ಶಾ ಸಚಿವರಾದರೆ ಯಾರ ಪಾಲಾಗುತ್ತೆ ಬಿಜೆಪಿ ಅಧ್ಯಕ್ಷ ಹುದ್ದೆ?

By Web DeskFirst Published May 29, 2019, 8:15 AM IST
Highlights

ಶಾ ಸಚಿವರಾದರೆ, ಯಾರ ಪಾಲಾಗುತ್ತೆ ಬಿಜೆಪಿ ಅಧ್ಯಕ್ಷ ಪಟ್ಟ?| ಪ್ರಮಾಣ ವಚನ ಕ್ಷಣಗಣನೆ ಬೆನ್ನಲ್ಲೇ ಭಾರೀ ಚರ್ಚೆ| ಉತ್ತರ ಪ್ರದೇಶ ಗೆದ್ದುಕೊಟ್ಟನಡ್ಡಾಗೆ ಹೆಚ್ಚಿನ ಚಾನ್ಸ್‌

ನವದೆಹಲಿ[ಮೇ.29]: ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸಚಿವ ಸಂಪುಟದಲ್ಲಿ, ಬಿಜೆಪಿಯ ಹಾಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೂಡಾ ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಶಾ ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಕುರಿತು ನಾನಾ ವದಂತಿಗಳು ಹಬ್ಬಿವೆ. ಕೆಲ ದಿನಗಳ ಹಿಂದೆ, ಸಚಿವ ನಿತಿನ್‌ ಗಡ್ಕರಿ ಅವರ ಹೆಸರು ಬಲವಾಗಿ ಕೇಳಿಬಂದಿದ್ದರೆ, ಇದೀಗ ಇನ್ನಿಬ್ಬರು ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಮತ್ತು ಧಮೇಂದ್ರ ಪ್ರಧಾನ್‌ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿದೆ.

ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಸಿದ್ಧಾಂತವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಒಂದು ವೇಳೆ ಅಮಿತ್‌ ಶಾ ಅವರು ಮೋದಿ ಸಂಪುಟಕ್ಕೆ ಸೇರ್ಪಡೆ ಆಗಿದ್ದೇ ಆದಲ್ಲಿ ಅಧ್ಯಕ್ಷ ಹುದ್ದೆ ತ್ಯಜಿಸಬೇಕಾಗಿ ಬರಲಿದೆ. ಶಾ ಅವರ ಅವಧಿಯಲ್ಲಿ ಬಿಜೆಪಿ ಹಿಂದೆಂದೂ ಮಾಡದ ಸಾಧನೆ ಮಾಡುವ ಮೂಲಕ ಹಲವಾರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದೂ ಅಲ್ಲದೆ, ಕೇಂದ್ರದಲ್ಲೂ ಸತತವಾಗಿ ಎರಡನೇ ಬಾರಿಗೆ ಅಧಿಕಾರಕ್ಕೇರಿದ ಐತಿಹಾಸಿಕ ಸಾಧನೆ ಮಾಡಿತ್ತು. ಹೀಗಾಗಿ ಅವರು ತೆರವು ಮಾಡಲಿರುವ ಸ್ಥಾನವನ್ನು ತುಂಬಲು ಸಮರ್ಥ ಅಭ್ಯರ್ಥಿಗಳಿಗಾಗಿ ಭಾರೀ ಹುಡುಕಾಟ ನಡೆದಿದ್ದು, ಈ ಪೈಕಿ ಜೆ.ಪಿ.ನಡ್ಡಾ ಮತ್ತು ಧಮೇಂದ್ರ ಪ್ರಧಾನ್‌ ಹೆಸರು ದೆಹಲಿ ಮಟ್ಟದಲ್ಲಿ ಗಂಭೀರ ಸ್ವರೂಪದಲ್ಲಿ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.

2014ರಲ್ಲಿ ರಾಜ್‌ನಾಥ್‌ ಸಿಂಗ್‌ ರಾಷ್ಟಾ್ರಧ್ಯಕ್ಷ ಹುದ್ದೆಯನ್ನು ತೊರೆದಾಗಲೂ ನಡ್ಡಾ ಅವರ ಹೆಸರು ಪ್ರಬಲವಾಗಿಯೇ ಕೇಳಿಬಂದಿತ್ತಾದರೂ, ಬಳಿಕ ಅಮಿತ್‌ ಶಾ ಅವರನ್ನು ಆಯ್ಕೆ ಮಾಡಲಾಗಿತ್ತು. ಪಕ್ಷದ ಚುನಾವಣಾ ರಣತಂತ್ರಗಾರರಲ್ಲಿ ಒಬ್ಬರಾಗಿರುವ ನಡ್ಡಾ, 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಉಸ್ತುವಾರಿ ಹೊತ್ತುಕೊಂಡು, ಅಲ್ಲಿ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.

click me!