ಮುಂದಿನ ನಡೆ ತಿಳಿಸಿದ ರೆಬೆಲ್ ನಾಯಕ ವಿಶ್ವನಾಥ್

By Web DeskFirst Published Jul 13, 2019, 9:18 AM IST
Highlights

ಅತೃಪ್ತತೆಯಿಂದ ರಾಜೀನಾಮೆ ನೀಡಿ ಹೊರನಡೆದಿರುವ ನಾಯಕ ಎಚ್ ವಿಶ್ವನಾಥ್ ತಮ್ಮ ಮುಂದಿನ ನಡೆಯ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. 

ಬೆಂಗಳೂರು [ಜು.13] :  ಮೈತ್ರಿ ಸರ್ಕಾರ ವಿರುದ್ಧ ಬಂಡಾಯವೆದ್ದಿರುವ ಅತೃಪ್ತ ಶಾಸಕರ ಪೈಕಿ ಯಾರೊಬ್ಬರೂ ಈಗ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್‌ ಸ್ಪಷ್ಟಪಡಿಸಿದ್ದಾರೆ.

ಭಿನ್ನಮತೀಯರೊಂದಿಗೆ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅವರು ಶುಕ್ರವಾರ ರಾತ್ರಿ ಮುಂಬೈನಿಂದ ದೂರವಾಣಿ ಮೂಲಕ ಮಾತನಾಡಿ, ಕೆಲವು ಅತೃಪ್ತರು ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂಬ ವದಂತಿಗಳನ್ನು ಬಲವಾಗಿ ತಳ್ಳಿ ಹಾಕಿದರು.

ಯಾವುದೇ ಕಾರಣಕ್ಕೂ ಅತೃಪ್ತರು ರಾಜೀನಾಮೆ ಹಿಂಪಡೆಯುವುದಿಲ್ಲ. ವಿಶ್ವಾಸಮತ ಯಾಚನೆ ಮಾಡುವುದಾಗಿ ಸ್ವಯಂಪ್ರೇರಿತವಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಯು ದಿಕ್ಕುತಪ್ಪಿಸುವ ಕೆಲಸವಾಗಿದೆ. ಕೆಲವರು ರಾಜೀನಾಮೆಯನ್ನು ಹಿಂಪಡೆದು ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ ಎನ್ನುವುದು ಸುಳ್ಳು. ವಿಶ್ವಾಸಮತ ಯಾಚನೆ ಮಾಡಲು ಮುಂದಾಗಿರುವುದು ರಾಜಕೀಯ ತಂತ್ರಗಾರಿಕೆ ಎಂದು ಟೀಕಿಸಿದರು.

ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರ ಸೋಲುವುದು ಖಚಿತ. ಸರ್ಕಾರ ವಿರುದ್ಧ ಬಂಡಾಯವೆದ್ದಿರುವವರೆಲ್ಲಾ ಒಗ್ಗಟ್ಟಾಗಿದ್ದೇವೆ. ಸರ್ಕಾರ ಪತನವಾದ ಬಳಿಕವಷ್ಟೇ ಮುಂಬೈಯಿಂದ ಬರುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಮುಂಬೈಯಲ್ಲಿಯೇ ಇರುವ ಬಗ್ಗೆ ಸದ್ಯಕ್ಕೆ ತೀರ್ಮಾನಿಸಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಯಾವ ಕಾರಣಕ್ಕಾಗಿ ಎಂಬುದು ಅವರಿಗೆ ಗೊತ್ತಿದೆ. ಶಾಸಕರು ಸ್ವತಂತ್ರವಾಗಿ ಕೆಲಸ ಮಾಡುವುದು ಸಾಧ್ಯವಿಲ್ಲ. ಅತೃಪ್ತರ ಮನವೊಲಿಕೆ ಮಾಡುವ ಯಾವ ತಂತ್ರಗಾರಿಕೆಗೂ ಮಣಿಯುವುದಿಲ್ಲ. ನಮ್ಮೆಲ್ಲರ ನಿರ್ಧಾರ ಅಚಲ ಎಂದು ಹೇಳಿದರು.

ವಿಧಾನಮಂಡಲದಲ್ಲಿ ಹಣಕಾಸು ಮಸೂದೆ ಮಂಡನೆ ಮಾಡಬಹುದು. ಆದರೆ, ಅದು ಅಂಗೀಕಾರವಾಗಬೇಕು. ಇಲ್ಲದಿದ್ದರೆ ಕಷ್ಟವಾಗಲಿದೆ. ಒಂದು ವೇಳೆ ಹಣಕಾಸು ಮಸೂದೆ ಅಂಗೀಕರವಾಗದಿದ್ದರೆ ಸರ್ಕಾರ ಬಿದ್ದು ಹೋಗಲಿದೆ. ಬಳಿಕ ಮುಂದೆ ರಚನೆ ಮಾಡುವ ಸರ್ಕಾರವು ಹಣಕಾಸು ಮಸೂದೆಯನ್ನು ಮಂಡಿಸಿ ಅಂಗೀಕರಿಸಲಿದೆ ಎಂದು ತಿಳಿಸಿದರು.

click me!