ಹಾವೇರಿ: ಸಚಿವರ ಕ್ಷೇತ್ರದಲ್ಲೇ ಹರಿಯುತ್ತಿದೆ ನೀರಿಗಾಗಿ ಕಣ್ಣೀರು!

By Suvarna Web DeskFirst Published Feb 20, 2017, 12:13 AM IST
Highlights

ನೀರು..ಕಣ್ಣೀರು ಅಭಿಯಾನದಲ್ಲಿ ಸುವರ್ಣ ನ್ಯೂಸ್ ಎಲ್ಲಿಗೆ ಭೇಟಿ ಕೊಟ್ಟರೂ ಕಾಣ್ತಾ ಇರೋದು ಏನ್ ಗೊತ್ತಾ..? ಸರ್ಕಾರದ ನಿಷ್ಕ್ರಿಯತೆ. ಮಾಡಬೇಕಾದ ಕೆಲಸ ಮಾಡದೆ, ಮಾತಲ್ಲೇ ಮೈಮರೀತಾ ಇರೋ ಸರ್ಕಾರ ಮತ್ತು ಅಧಿಕಾರಿಗಳು. ಈ ಪರಿಸ್ಥಿತಿಗೆ ಸಚಿವರ ಕ್ಷೇತ್ರಗಳೂ ಹೊರತಾಗಿಲ್ಲ.

ಹಾವೇರಿ (ಫೆ.20): ಸಚಿವ ರುದ್ರಪ್ಪ ಲಮಾಣಿಯವರ ಕ್ಷೇತ್ರವಾಗಿರುವ ಹಾವೇರಿಯಲ್ಲಿ ಕುಡಿಯುವ ನೀರಿನ ಸ್ಥಿತಿ ವಿವರಿಸುವುದಕ್ಕೆ ಸಾಲಾಗಿ ಇಟ್ಟಿರುವ ಬಿಂದಿಗೆಗಳ ಈ ದೃಶ್ಯಗಳೇ ಸಾಕು.  ನೀರು ಯಾವಾಗ ಬರುತ್ತೋ ಗೊತ್ತಿಲ್ಲ; ಹನಿ ಹನಿಯಾಗಿ ತೊಟ್ಟಿಕ್ಕುತ್ತೆ. ಆ ಹನಿ ನೀರನ್ನೂ ವೇಸ್ಟ್ ಮಾಡಿಕೊಳ್ಳೋಕೆ ಜನರಿಗೆ ಇಷ್ಟವಿಲ್ಲ.

ತುಂಗಭದ್ರ ನದಿಯಲ್ಲಿ ನೀರಿಲ್ಲ. 328 ಬೋರ್​ವೆಲ್​ಗಳಲ್ಲಿ ನೀರಿನ ಮಟ್ಟ ಪಾತಾಳಕ್ಕೆ ಇಳಿದುಬಿಟ್ಟಿದೆ. ಈಗ ಹಾವೇರಿ ಜನ ನಂಬಿರುವುದು ಕೆಂಚಾರಗಟ್ಟಿ ಗ್ರಾಮವನ್ನು. ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟರೆ, ಅದು ಕೆಂಚಾರಗಟ್ಟಿಯಲ್ಲಿ ಸಂಗ್ರಹವಾಗುತ್ತೆ. ಅಲ್ಲಿಂದ ನೀರು ತರಬೇಕು. ಸಮಸ್ಯೆ ಇರೋದೇ ಇಲ್ಲಿ. 4 ವರ್ಷದ ಹಿಂದೆ ನದಿಯಲ್ಲಿ ನೀರಿದ್ದಾಗ ಕೆರೆಗೆ ನೀರು ತುಂಬಿಸಿದ್ದರೆ ಈ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ಈಗ ನೀರೇ ಖಾಲಿಯಾದ ಮೇಲೆ ಸೇತುವೆ ಕೆಳಗೆ ತಡೆಗೋಡೆ ನಿರ್ಮಾಣಕ್ಕೆ ಕೈಹಾಕಿದೆ ನಗರಸಭೆ.

ಇದು ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಅಧಿಕಾರಿಗಳ ಮನಸ್ಥಿತಿ. ಕೆರೆಗಳಲ್ಲಿ ನೀರಿಲ್ಲ, ಹೂಳು ತೆಗೆಸಿಲ್ಲ. ವರದಾ ನದಿಯಲ್ಲೂ ನೀರಿಲ್ಲ. ಹಾವೇರಿಯ ಹೆಗ್ಗೇರಿ ಕೆರೆಗೆ ನೀರು ತುಂಬಿಸುವ ಕಾಮಗಾರಿ ಮುಗಿದು 4 ವರ್ಷವಾಗಿದೆ. ಆದರೆ ಕೆರೆಗೆ ನೀರು ಮಾತ್ರ ಹರಿದಿಲ್ಲ. ಈಗ ಹರಿಸೋಣವೆಂದರೆ ಅದಕ್ಕೂ ನೀರಿಲ್ಲ.

ಈ ನೀರು ಕಣ್ಣೀರಿಗೆ ಮಳೆ ಬಾರದೇ ಇರುವುದೇ ಕಾರಣ ಅಂತಾ ಜನ ಅಂದ್ಕೋತಾರೆ, ಆದರೆ ಈ ಪರಿಸ್ಥಿತಿಗೆ ಸರ್ಕಾರದ ನಿರ್ಲಕ್ಷ್ಯ, ಸೋಮಾರಿತನ ಮತ್ತು ಬೇಜವಾಬ್ದಾರಿತನವೇ ಕಾರಣವೆನ್ನುವುದರಲ್ಲಿ ಅನುಮಾನವಿಲ್ಲ. ಬೇಸಗೆ ಹತ್ತಿರ ಬಂದಿದೆ.

ರುದ್ರಪ್ಪ ಲಮಾಣಿ ಕಳೆದ ಬಾರಿ ಸಂಪುಟ ವಿಸ್ತರಣೆ ಆದಾಗ ಮಿನಿಸ್ಟರ್ ಆದವರು. ಹಾಗಂತ ಹಾವೇರಿ ಜಿಲ್ಲೆಗೆ ಮಂತ್ರಿಗಳೇ ಇರಲಿಲ್ಲ ಅಂತಲ್ಲ, ಅದಕ್ಕೂ ಮೊದಲು ಮನೋಹರ್ ತಹಸೀಲ್ದಾರ್ ಇದ್ರು.

ನೀರು..ಕಣ್ಣೀರು ಅಭಿಯಾನದಲ್ಲಿ ಸುವರ್ಣ ನ್ಯೂಸ್ ಎಲ್ಲಿಗೆ ಭೇಟಿ ಕೊಟ್ಟರೂ ಕಾಣ್ತಾ ಇರೋದು ಏನ್ ಗೊತ್ತಾ..? ಸರ್ಕಾರದ ನಿಷ್ಕ್ರಿಯತೆ. ಮಾಡಬೇಕಾದ ಕೆಲಸ ಮಾಡದೆ, ಮಾತಲ್ಲೇ ಮೈಮರೀತಾ ಇರೋ ಸರ್ಕಾರ ಮತ್ತು ಅಧಿಕಾರಿಗಳು. ಈ ಪರಿಸ್ಥಿತಿಗೆ ಸಚಿವರ ಕ್ಷೇತ್ರಗಳೂ ಹೊರತಾಗಿಲ್ಲ.

ವರದಿ: ಹಾವೇರಿಯಿಂದ ಸುರೇಶ ನಾಯ್ಕ

click me!