
ಬೀದರ್ (ಜೂ. 29): ಮೊದಲ ಹಂತದ ಗ್ರಾಮವಾಸ್ತವ್ಯವನ್ನು ಮುಗಿಸಿರುವ ಎಚ್.ಡಿ.ಕುಮಾರಸ್ವಾಮಿ ಇದೀಗ ರೈತ ಜಾಗೃತಿಗಾಗಿ ಹಳ್ಳಿಗಳಿಗೆ ಭೇಟಿ ನೀಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.
ರೈತರು ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಮಹಾರಾಷ್ಟ್ರದ ಕಡವಂಚಿ ಗ್ರಾಮದ ಜಲಕ್ರಾಂತಿಯ ಮಾದರಿ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಿ ಪೈಲಟ್ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿದ್ದಾರೆ.
ಜಿಲ್ಲೆಯ ಉಜಳಂಗಿಯಲ್ಲಿ ಶುಕ್ರವಾರ ಗ್ರಾಮ ವಾಸ್ತವ್ಯ ಮುಗಿಸಿ ಹೊರಡುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹೊರತುಪಡಿಸಿ ಹಲವಾರು ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದೇನೆ. ಪ್ರತಿ ಜಿಲ್ಲೆಯ ಒಂದು ಹಳ್ಳಿ ಆಯ್ಕೆಮಾಡಿಕೊಂಡು ಭೇಟಿ ನೀಡಿ ರೈತರಿಗೆ ಖುದ್ದು ಸರ್ಕಾರದ ಮೂಲಕ ತಿಳುವಳಿಕೆ ನೀಡುವ ಕಾರ್ಯಕ್ರಮ ರೂಪಿಸುತ್ತೇವೆ ಎಂದು ತಿಳಿಸಿದರು.
ಜನರ ಪಾಲ್ಗೊಳ್ಳುವಿಕೆ ಮುಖ್ಯ: ಬಂಜರು ಭೂಮಿಯಲ್ಲಿ ಬಂಗಾರದಂತಹ ಇಳುವರಿ ಪಡೆಯುತ್ತಿರುವ ಮಹಾರಾಷ್ಟ್ರದ ಮರಾಠವಾಡ ವ್ಯಾಪ್ತಿಯ ಕಡವಂಚಿ ಗ್ರಾಮದ ಅಭಿವೃದ್ಧಿ ಮಾದರಿಯ ಮಹತ್ವಾಕಾಂಕ್ಷಿ ಯೋಜನೆಯನ್ನು ನಮ್ಮ ರಾಜ್ಯದಲ್ಲೂ ಜಾರಿಗೊಳಿಸಲಾಗುವುದು. ಮರಾಠವಾಡದ ಹಳ್ಳಿ ನಮಗೆ ಮಾದರಿಯಾಗಬೇಕಿದೆ.
ಬರಗಾಲದಲ್ಲೂ ಅಲ್ಲಿನ ಜನ ನೀರು ಉಳಿಸಿಕೊಂಡಿದ್ದಾರೆ. ದ್ರಾಕ್ಷಿ ಬೆಳೆಯುತ್ತಿದ್ದಾರೆ. .40 ಲಕ್ಷ ಇದ್ದ ಹಳ್ಳಿಯ ಆದಾಯ ಈಗ .70 ಕೋಟಿ ಆಗಿದೆ. ಅಂತಹ ವಾತಾವರಣವನ್ನು ಇಲ್ಲಿ ಕೂಡ ನಿರ್ಮಿಸಬೇಕು. ಕೇವಲ ಸರ್ಕಾರದಿಂದ ಕಾರ್ಯಕ್ರಮ ಕೊಟ್ಟರೆ ಆಗುವುದಿಲ್ಲ.
ಜನರ ಪಾಲ್ಗೊಳ್ಳುವಿಕೆ ಕೂಡ ಮುಖ್ಯವಾಗಿದೆ. ರೈತರು ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ಮೂಲಕ ಆ ಹಳ್ಳಿಯ ರೈತರ ಕೃಷಿ ಪದ್ಧತಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಏನಿದು ಕಡವಂಚಿ ಮಾದರಿ?
ಮಹಾರಾಷ್ಟ್ರದ ಮರಾಠಾವಾಡಾ ಭಾಗದ ಜಾಲ್ನಾ ಜಿಲ್ಲೆಯ ಕಡವಂಚಿಯಲ್ಲಿ 2 ದಶಕ ಹಿಂದೆ ಭೀಕರ ಬರ ಇತ್ತು. 1995ರಲ್ಲಿ ಇಲ್ಲಿನ ರೈತರು ಕೃಷಿ, ನೀರಾವರಿ ತಜ್ಞರ ನೆರವಿನಿಂದ ಜಲ ಸಂರಕ್ಷಣಾ ಯೋಜನೆ ಕೈಗೊಂಡರು. ಅಂತರ್ಜಲ ವೃದ್ಧಿಗೆ ಸಮರೋಪಾದಿಯಲ್ಲಿ ಶ್ರಮಿಸಿದರು.
ಗ್ರಾಮಸ್ಥರೇ ಚೆಕ್ ಡ್ಯಾಂ, ಕೃಷಿ ಹೊಂಡ ನಿರ್ಮಿಸಿದರು. ಹವಾಮಾನ ಮುನ್ಸೂಚನೆಗೆ ತಮ್ಮದೇ ಹವಾಮಾನ ಕೇಂದ್ರ ಸ್ಥಾಪಿಸಿದರು. ದ್ರಾಕ್ಷಿ ಮತ್ತಿತರ ಬೆಳೆ ಬೆಳೆದು ಕೋಟ್ಯಂತರ ರು. ಗಳಿಸಿದರು. ಗ್ರಾಮದಲ್ಲೀಗ 650ಕ್ಕೂ ಹೆಚ್ಚು ಕೃಷಿ ಹೊಂಡಗಳಿದ್ದು, ಎಲ್ಲ ಗದ್ದೆಗಳಿಗೂ ನೀರಾವರಿ ವ್ಯವಸ್ಥೆ ಇದೆ.
ಸಿಎಂ ಯೋಜನೆ ಏನು?
ಕಡವಂಚಿ ರೀತಿಯಲ್ಲಿ ರಾಜ್ಯದಲ್ಲೂ ಜಲ ಕ್ರಾಂತಿ ಆಗಬೇಕೆಂಬ ಆಶಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರದು. ಅದಕ್ಕಾಗಿ ಕೃಷಿ ಅಧಿಕಾರಿಗಳೊಂದಿಗೆ ಹಳ್ಳಿಗಳಿಗೆ ಖುದ್ದು ಭೇಟಿ ನೀಡಿ, ರೈತರಿಗೆ ಜಲ ಕ್ರಾಂತಿಯ ಬಗ್ಗೆ ಜಾಗೃತಿ ಮೂಡಿಸುವುದು ಪ್ರತಿ ಜಿಲ್ಲೆಯ ಒಂದು ಹಳ್ಳಿಯಲ್ಲಿ ಪ್ರಾಯೋಗಿಕವಾಗಿ ‘ಕಡವಂಚಿ ಮಾದರಿ’ ಅಳವಡಿಸುವುದು. ಈ ಮೂಲಕ ಬಂಜರು ಭೂಮಿಯಲ್ಲೂ ಉತ್ತಮ ಬೆಳೆ ತೆಗೆದು ರೈತರು ಆರ್ಥಿಕವಾಗಿ ಸಶಕ್ತರಾಗುವಂತೆ ಮಾಡುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.