
ಬೆಂಗಳೂರು (ಫೆ. 21): ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಕಳ್ಳರಿಂದ ತಪ್ಪಿಸಿಕೊಳ್ಳಲು ಕೈಗೊಳ್ಳಬಹುದಾದ ಸುರಕ್ಷಾ ಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಸುದ್ದಿಗಳು ಹರಿದಾಡುತ್ತಿವೆ. ಅಂಥದ್ದೇ ಸಂದೇಶವೊಂದರಲ್ಲಿ ‘ನೀವು ಎಟಿಎಂನಲ್ಲಿ ಹಣ ಪಡೆಯುವಾಗ ಕಳ್ಳನೊಬ್ಬ ನಿಮ್ಮ ಹಣಕ್ಕಾಗಿ ಹಲ್ಲೆಗೆ ಮುಂದಾದರೆ ನೀವು ಸಿಟ್ಟಾಗಬೇಕಿಲ್ಲ, ಅವರನ್ನು ನಿಯಂತ್ರಿಸಲೂ ಬೇಕಿಲ್ಲ. ಕೇವಲ ನಿಮ್ಮ ಎಟಿಎಂ ಪಾಸ್ವರ್ಡ್ ಅಥವಾ ಪಿನ್ ನಂಬರ್ ಅನ್ನು ಹಿಮ್ಮುಖವಾಗಿ(ರಿವರ್ಸ್) ಟೈಪ್ ಮಾಡಿ.
ಅಂದರೆ ನಿಮ್ಮ ಪಿನ್ ನಂಬರ್ 1432 ಎಂದಿದ್ದರೆ, 2341 ಎಂದು ಟೈಪ್ ಮಾಡಿ. ಆಗ ನಿಮ್ಮ ಹಣ ಎಟಿಎಂ ಕಾರ್ಡ್ ಮಷಿನ್‌ನಲ್ಲಿ ಸಿಲುಕಿಕೊಳ್ಳುತ್ತದೆಯೇ ಹೊರತು ಹೊರಬರುವುದಿಲ್ಲ. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಗೆ ಎಟಿಎಂ ಯಂತ್ರ ಮಾಹಿತಿಯನ್ನು ರವಾನಿಸುತ್ತದೆ ಹಾಗೂ ಆರೋಪಿ ಗಳ ಪೋಟೋವನ್ನು ತೆಗೆದುಕೊಳ್ಳುತ್ತದೆ. ಪ್ರತಿಯೊಂದು ಎಟಿಎಂಗಳಲ್ಲೂ ಈ ಸುರಕ್ಷಾ ಸೌಲಭ್ಯವಿರುತ್ತದೆ’ ಎಂದು ಹೇಳಲಾಗಿದೆ. ಈ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಎಲ್ಲಾ ಎಟಿಎಂಗಳಲ್ಲಿ ಈ ಸುರಕ್ಷಾ ಸೌಲಭ್ಯವಿರುತ್ತದೆಯೇ ಎಂದು ಹುಡುಕ ಹೊರಟಾಗ, ಎಟಿಎಂಗಳಲ್ಲಿ ಈ ರೀತಿಯ ಯಾವುದೇ ಸುರಕ್ಷಾ ತಂತ್ರಜ್ಞಾನವನ್ನು ಅಳವಡಿಸಿಲ್ಲ ಎಂಬುದು ಪತ್ತೆಯಾಗಿದೆ. ಒಂದು ವೇಳೆ ನಿಮ್ಮ ಮೇಲೆ
ಆಕ್ರಮಣವಾದಾಗ ಈ ಸಂದೇಶದಲ್ಲಿರುವಂತೆ ನಿಮ್ಮ ಪಿನ್ ನಂಬರ್ ಅನ್ನು ಹಿಮ್ಮುಖವಾಗಿ ಟೈಪ್ ಮಾಡಿದಲ್ಲಿ ‘ನಿಮ್ಮ ಪಾಸ್‌ವರ್ಡ್ ತಪ್ಪಾಗಿದೆ’ ಎಂಬ ಅಲರ್ಟ್ ಬರುತ್ತದೆಯೇ ಹೊರತು ಕಳ್ಳರು ನಿಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದಾರೆಂಬ ಸಂದೇಶ ಯಾವುದೇ ಪೊಲೀಸ್ ಠಾಣೆಗೆ ತಲುಪುವುದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.