
ನವದೆಹಲಿ[ಫೆ.25]: ಸಾಕಷ್ಟುಕುತೂಹಲ ಮೂಡಿಸುತ್ತಿರುವ 2019ರ ಲೋಕಸಭಾ ಚುನಾವಣೆ ಇನ್ನೇನು ಸಮೀಪದಲ್ಲಿದೆ. ಸದ್ಯ ಈ ಬಾರಿ ಅನಿವಾಸಿ ಭಾರತೀಯರೂ ಸಹ ಮತ ಹಾಕಬಹುದು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತೀಯ ಚುನಾವಣಾ ಆಯೋಗದ ಲೋಗೋವನ್ನು ಬಳಸಿದ ಸಂದೇಶ ವಾಟ್ಸ್‌ಆ್ಯಪ್ ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ.
ಅದರಲ್ಲಿ, ‘ಹೆಲೋ, ಭಾರತದ ಪಾಸ್‌ಪೋರ್ಟ್ ಹೊಂದಿರುವ ಪ್ರತಿಯೊಬ್ಬರೂ 2019ರ ಚುನಾವಣೆಯಲ್ಲಿ ಮತ ಹಾಕಬಹುದು. ಈ ಕೆಳಗಿನ ಲಿಂಕ್ ಒತ್ತಿ ನಿಮ್ಮ ಹೆಸರನ್ನು ನೋಂದಾಯಿಸಿ. ಹಾಗೂ ಈ ಸಂದೇಶವನ್ನು ಎಲ್ಲರಿಗೂ ತಲುಪಿಸಿ’ ಎಂದು ಹೇಳಲಾಗಿದೆ. ಜೊತೆಗೆ ಎನ್‌ಆರ್‌ಐ ಗಳು ಈ ಬಾರಿ ಆನ್‌ಲೈನ್ ವೋಟ್ ಹಾಕಲು ಅವಕಾಶ ಕಲ್ಪಿಸಲಾಗಿದೆ ಎಂದೂ ಸಹ ಹೇಳಲಾಗಿದೆ.
ಆದರೆ ನಿಜಕ್ಕೂ ಚುನಾವಣಾ ಆಯೋಗ ಈ ಬಾರಿ ಇಂತಹ ಅವಕಾಶ ಕಲ್ಪಿಸಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಬಯಲಾಗಿದೆ. ಈ ಬಗ್ಗೆ ಭಾರತೀಯ ಚುನಾವಣಾ ಆಯೋಗ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿ, ‘ಯಾವುದೇ ನಿರ್ದಿಷ್ಟವರ್ಗದ ಮತದಾರಿಗೆ ಆನ್‌ಲೈನ್ ವೋಟಿಂಗ್‌ಗೆ ಅವಕಾಶ ಇಲ್ಲ. ಈ ರೀತಿ ಸುಳ್ಳುಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದೆ. ಅಲ್ಲದೆ ದೆಹಲಿ ಪೊಲೀಸರಿಗೆ ದೂರು ನೀಡಿರುವ ಪ್ರತಿಯನ್ನೂ ಬಿಡುಗಡೆ ಮಾಡಿದೆ.
ಚುನಾವಣಾ ಆಯೋಗದ ಲೋಗೋ ಬಳಸಿರುವ ಬಗ್ಗೆ ಬೂಮ್ ಸುದ್ದಿಸಂಸ್ಥೆ ಪರಿಶೀಲನೆ ನಡೆಸಿದಾಗ, ಸುದ್ದಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಚುನಾವಣಾ ಆಯೋಗದ ಲೋಗೋವನ್ನು ಕಾಪಿ ಪೇಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಭಾರತದ ಹೊರಗೆ ವಾಸಿಸುತ್ತಿರುವ 3 ಕೋಟಿ ನಿವಾಸಿಗಳು ಮತದಾನ ಅರ್ಹತೆ ಪಡೆದಿಲ್ಲ. ಅವರಿಗೆ ಮತದಾನಕ್ಕೆ ಅವಕಾಶ ನೀಡಬೇಕೆಂದು 2013ರಿಂದಲೂ ಚರ್ಚೆ ನಡೆಯುತ್ತಿದೆ. 2018ರಲ್ಲಿ ಸುಪ್ರೀಂ ಕೋರ್ಟ್ ಈ ವಿಚಾರವನ್ನು ಕೇಂದ್ರದ ವಿವೇಚನೆಗೆ ಬಿಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ