
ಗದಗ(ಅ.19): ಅದು ಗ್ರಾಮೀಣಾಭಿವೃದ್ದಿ ಸಚಿವ ಹೆಚ್.ಕೆ ಪಾಟೀಲ್ರ ತವರು ಜಿಲ್ಲೆಯ ಗ್ರಾಮ. ಆ ಗ್ರಾಮದ ಆಶ್ರಯ ಕಾಲೋನಿಯಾಗಿ 15 ವರ್ಷಗಳೇ ಕಳೆದರೂ ಅಲ್ಲಿನ್ನೂ ವಿದ್ಯುತ್ ಸಂಪರ್ಕವಿಲ್ಲ. ಮೂಲಭೂತ ಸೌಕರ್ಯಗಳ ಮಾತಂತೂ ಕೇಳಲೇಬೇಡಿ. ವಿದ್ಯುತ್ ಸಂಪರ್ಕಕ್ಕಾಗಿ ಸರ್ಕಾರಕ್ಕೆ ಸಲಾಂ ಹೊಡೆದು ಬೇಸತ್ತ ಆ ಜನರು ಈಗ ಸಚಿವರಿಗೇ ಸೆಡ್ಡು ಹೊಡೆದು ಸ್ವಂತ ಹಣದಲ್ಲಿ ಸೋಲಾರ್ ಅಳವಡಿಸಿಕೊಂಡಿದ್ದಾರೆ.
ಚಿಕ್ಕದೊಂದು ಮನೆ, ಮನೆಯೊಳಗೆ ಕಗ್ಗತ್ತಲು. ಇಷ್ಟಾದ್ರೂ ಸ್ವಂತದ್ದು ಇದೆಯಲ್ಲ ಅಂದುಕೊಳ್ಳೋಣವೆಂದರೆ ಹಕ್ಕು ಪತ್ರವಿಲ್ಲ. ಇದು ಒಂದು ಮನೆಯ ಕತೆಯಲ್ಲ, ಇಡೀ ಕಾಲೋನಿ ಪರಿಸ್ಥಿತಿ. ಇಷ್ಟೇ ಅಲ್ಲದೆ ಇಲ್ಲಿ ಕುಡಿಯಲೂ ಶುದ್ಧ ನೀರಿಲ್ಲ. ಓಡಾಡಲು ರಸ್ತೆಯಿಲ್ಲ. ಇಂಥದ್ದೊಂದು ಕಾಲೋನಿ ಇರುವುದು ಗ್ರಾಮದ ಅಭಿವೃದ್ಧಿ ಮೂಲಕ ರಾಜ್ಯದ ದಿಕ್ಕು ದೆಸೆಯನ್ನೇ ಬದಲಿಸುತ್ತೇನೆ ಎಂದು ಭಾಷಣ ಮಾಡುವ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಜಿಲ್ಲೆ ಗದಗದಲ್ಲಿ. ಜಿಲ್ಲಾ ಕೇಂದ್ರದಿಂದ ಕೇವಲ 10 ಕಿಲೋಮೀಟರ್ ದೂರದಲ್ಲೇ ಇದೆ ಹೊಂಬಳ ಗ್ರಾಮದ ಈ ನತದೃಷ್ಟ ಆಶ್ರಯ ಕಾಲೋನಿ.
ಈ ಬಡಾವಣೆಯಾಗಿ 15 ವರ್ಷ ಕಳೆದರೂ ಇಲ್ಲಿ ಮನೆ ಹಕ್ಕುಪತ್ರ ನೀಡಿಲ್ಲ ಕುಡಿಯುವ ನೀರಿಲ್ಲ. ಕಂಬಗಳಿದ್ದರೂ ವಿದ್ಯುತ್ ಇಲ್ಲ. ವಿದ್ಯುತ್ ಸಂಪರ್ಕಕ್ಕಾಗಿ ಕಚೇರಿಗೆ ಅಲೆದು ಅಲೆದು ಜನ ಬೇಸತ್ತಿದ್ದಾರೆ. ಕೊನೆಗೇ ಅಧಿಕಾರಿಗಳಿಗೆ ಸೆಡ್ಡು ಹೊಡೆದು ಖಾಸಗಿ ಸೋಲಾರ್ ಕಂಪನಿ ಮೊರೆ ಹೋಗಿದ್ದಾರೆ. ಬ್ಯಾಂಕ್'ನಲ್ಲಿ ಸಾಲ ಪಡೆದು ಸೋಲಾರ್ ಹಾಕಿಸಿಕೊಂಡು ಕಂತಿನಲ್ಲಿ ಹಣ ಪಾವತಿಸುತ್ತಿದ್ದಾರೆ.
ಹಾಗಂತ ಸಚಿವ ಎಚ್.ಕೆ ಪಾಟೀಲ್, ಕ್ಷೇತ್ರದ ಶಾಸಕ ಬಿ.ಆರ್ ಯಾವಗಲ್, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಮನವಿ ಮಾಡಿಕೊಂಡಿದ್ದು, ಯಾರೂ ಇವರ ಸಮಸ್ಯೆಗೆ ಸ್ಪಂದಿಸಿಲ್ಲ. ಹೀಗಾಗೇ ಸರ್ಕಾರಕ್ಕೆ ಸಡ್ಡು ಹೊಡೆದು ಸೋಲಾರ್ ಅಳವಡಿಸಿಕೊಂಡಿದ್ದಾರೆ. ಇದನ್ನು ನೋಡಿಯಾದರೂ ಗ್ರಾಮೀಣಾಭಿವೃದ್ಧಿ ಸಚಿವರು ತಮ್ಮೂರಿನ ಜನರ ಸಮಸ್ಯೆ ನಿವಾರಣೆಗೆ ಮುಂದಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.