
ಹಾವೇರಿ(ನ.21): ಜಿಲ್ಲೆಯ ಬಗರ್'ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ಅನ್ನದಾತರ ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ಜಿಲ್ಲಾಡಳಿತ ಭವನದ ಎದುರು ಕಪ್ಪುಪಟ್ಟಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಸಂಚಾಲಕ ಹನುಮಂತಪ್ಪ ದೀವಗಿಹಳ್ಳಿ ಮಾತನಾಡಿ, ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಸರ್ಕಾರದ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾಡಳಿತ ವಿಳಂಬ ಧೋರಣೆ ಅನುಸರಿಸುತ್ತಿದೆ. ಬಗರ್'ಹುಕುಂ, ಅಕ್ರಮ ಭೂಮಿ ಸಾಗುವಳಿದಾರರಿಗೆ ರಾಜ್ಯ ಸರ್ಕಾರ ಹಕ್ಕುಪತ್ರ ನೀಡುವಂತೆ ಅನೇಕ ವರ್ಷಗಳ ಹಿಂದೆಯೇ ಸೂಚಿಸಿದ್ದರೂ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಸಮನ್ವಯ ಕೊರತೆಯಿಂದ ಸಾಗುವಳಿದಾರರಿಗೆ ಹಕ್ಕುಪತ್ರ ಸಿಗುತ್ತಿಲ್ಲ. ಹಿರೇಕೆರೂರು ತಾಲೂಕಿನ ವರಹಾ, ಆಲದಗೇರಿ, ಬ್ಯಾಡಗಿ ತಾಲೂಕಿನ ಕಾಗಿನೆಲೆ, ರಾಣಿಬೆನ್ನೂರು ತಾಲೂಕಿನ ಐರಣಿ ಗ್ರಾಮಗಳು ಸೇರಿದಂತೆ ಜಿಲ್ಲೆಯ ನೂರಾರು ರೈತರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಹಕ್ಕುಪತ್ರ ನೀಡಲು ವಿಳಂಬ ಮಾಡುತ್ತಿರುವ ಹಿರೇಕೆರೂರು ತಾಲೂಕಾಡಳಿತದ ಎದುರು ಡಿ. 1ರಿಂದ ನಿರಂತರ ಪ್ರತಿಭಟನಾ ಧರಣಿ ನಡೆಸಿ ಡಿ.5ಕ್ಕೆ ಹಿರೇಕೆರೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ವೇಳೆ ಅವರ ಗಮನವನ್ನು ಸೆಳೆಯಲಾಗುವುದು ಎಂದು ಹೇಳಿದರು.
ಪರಮೇಶ ಚಿನ್ನಣ್ಣನವರ ಮಾತನಾಡಿ, ರಾಣಿಬೆನ್ನೂರು ತಾಲೂಕಿನ ಹಳೆನೆಲವಾಗಿಲು ಗ್ರಾಮ ಸ್ಥಳಾಂತರಕ್ಕೆ ಜಿಲ್ಲಾಡಳಿತ ನಿರ್ಧರಿಸಿದ್ದರೂ ಇದುವರೆಗೂ ಸೂಕ್ತ ಪರಿಹಾರ ನೀಡಿಲ್ಲ. ಕಷ್ಟದಲ್ಲಿರುವ ಗ್ರಾಮದ ಜನರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಅರಣ್ಯ ಇಲಾಖೆಯವರು ಅರಣ್ಯ ಭೂಮಿ ಸಾಗುವಳಿ ರೈತರ ಮೇಲೆ ಹಿಂದಿನಿಂದ ಅನೇಕ ಸುಳ್ಳು ಪ್ರಕರಣ ದಾಖಲು ಮಾಡಿ ಒಕ್ಕಲೆಬ್ಬಿಸಿದ್ದಾರೆ. ಇತ್ತೀಚೆಗೆ ಐರಣಿ ಗ್ರಾಮದ ಬಸವರಾಜಪ್ಪ ಕೋಟ್ರಪ್ಪ ಲಗುಭಗಿ ಮೇಲೆ ಗಂಧದ ಕಳ್ಳ ಎಂದು ಸುಳ್ಳು ಕೇಸ್ ಮಾಡಿ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಆ ಜಾಗದಲ್ಲಿ ಎಲ್ಲಿಯೂ ಗಂಧದ ಗಿಡ ಇಲ್ಲ. ಇಂತಹ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಪ್ರಮುಖರಾದ ಹನುಂತಪ್ಪ ಕಬ್ಬಾರ,ರಾಜಶೇಖರ ದೂದಿಹಳ್ಳಿ, ವಿಜಯಕುಮಾರ ಕೋಣನತೆಲೆ, ಈರಪ್ಪ ಮಳವಳ್ಳಿ, ಮಹೇಶಪ್ಪ ಪುಟ್ಟಣ್ಣನವರ, ಮಾಲತೇಶ ಬಡಿಗೇರ, ಕುಮಾರ ಭರಡಿ, ಬಸವರಾಜ ಲಗುಬಗಿ, ಇಬ್ರಾಹಿಂಸಾಬ್ ಕಲ್ಲಾಪುರ, ಚಂದ್ರು ಗುತ್ತೂರ, ನೂರ ಅಹ್ಮದ ರೋಣ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.