ಲೋಕಸಭಾ ಚುನಾವಣಾ ಲಾಭಕ್ಕಾಗಿ ಚಂದ್ರಯಾನ 2 ಮುಂದೂಡಿದ್ದ ಯುಪಿಎ, ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಗಂಭೀರ ಆರೋಪ, ಚಂದ್ರಯಾನ -2ರ ಬದಲು ದೊಡ್ಡದಾದ ಮಂಗಳಯಾನಕ್ಕೆ ಸೂಚನೆ
ಹೈದರಾಬಾದ್: 2012ರಲ್ಲೇ ನಡೆಯಬೇಕಿದ್ದ ಚಂದ್ರಯಾನ -2 ಉಡ್ಡಯನವನ್ನು ಅಂದಿನ ಯುಪಿಎ ಸರ್ಕಾರವು, ಲೋಕಸಭಾ ಚುನಾವಣಾ ಉದ್ದೇಶಗಳಿಗಾಗಿ ಮುಂದೂಡಿತ್ತು ಎಂದು ಇಸ್ರೋದ ಮಾಜಿ ಅಧ್ಯಕ್ಷ ಮತ್ತು ಚಂದ್ರಯಾನ ಯೋಜನೆಯ ರೂವಾರಿ ಜಿ. ಮಾಧವನ್ ನಾಯರ್ ಗಂಭೀರ ಆರೋಪಿಸಿದ್ದಾರೆ.
ಚಂದ್ರಯಾನ -1ನ್ನು 2008ರ ಅ.22ರಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿತ್ತು. 2012ರ ಅಂತ್ಯದ ವೇಳೆಗೆ ಚಂದ್ರಯಾನ 2 ಉಡ್ಡಯನಕ್ಕೆ ನಿರ್ಧಾರ ಕೂಡಾ ಮಾಡಲಾಗಿತ್ತು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿತ್ತು. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಏನಾದರೂ ದೊಡ್ಡ ಸಾಧನೆಯನ್ನು ಜನರ ಮುಂದೆ ಇಡಲು ಬಯಸಿದ್ದ ಅಂದಿನ ಯುಪಿಎ ಸರ್ಕಾರ ಚಂದ್ರಯಾನ 2ರ ಬದಲು ಹೆಚ್ಚು ಗಮನ ಸೆಳೆಯಬಲ್ಲ ಮಂಗಳಯಾನ ನಡೆಸಲು ಸೂಚಿಸಿತ್ತು. ಹೀಗಾಗಿ ಚಂದ್ರಯಾನ 2 ಯೋಜನೆ ಕೈಬಿಟ್ಟು ನಾವು ನಮ್ಮ ಇಡೀ ತಂಡವನ್ನು ಮಂಗಳಯಾನಕ್ಕೆ ನಿಯೋಜಿಸಬೇಕಾಗಿ ಬಂತು.
ನಾಸಾದ ಚಂದ್ರಯಾನಕ್ಕೆ ಜತೆಯಾಗಲಿದೆ ಬೆಂಗಳೂರಿನ ಕಂಪನಿ
ಆದರೆ ಮಂಗಳಯಾನ ನೌಕೆಯನ್ನು ಲೋಕಸಭಾ ಚುನಾವಣೆ ನಡೆಯುವುದಕ್ಕೆ 6 ತಿಂಗಳು ಮೊದಲು ಅಂದರೆ 2013ರ ನವೆಂಬರ್‌ನಲ್ಲಿ ನಡೆಸಲಾಯಿತಾದರೂ, ನೌಕೆಯ ಮಂಗಳನ ಅಂಗಳದಲ್ಲಿ ಇಳಿದಿದ್ದು, 2014ರ ಸೆಪ್ಟೆಂಬರ್‌ನಲ್ಲಿ ಅಂದರೆ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ. ಹೀಗಾಗಿ ಅಂಥ ನಿರ್ಧಾರದಿಂದ ಯುಪಿಎಗೆ ಹೆಚ್ಚಿನ ಲಾಭವೂ ದಕ್ಕಲಿಲ್ಲ ಎಂದು ನಾಯರ್ ಹೇಳಿದ್ದಾರೆ.
ಇನ್ನು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಚಂದ್ರಯಾನ 2 ಯೋಜನೆಗೆ ಚಾಲನೆ ನೀಡಿತು ಎಂದು ನಾಯರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ನಾಯರ್ ಕಳೆದ ಅಕ್ಟೋಬರ್ ತಿಂಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದರು.