ಇನ್ನು 6 ತಿಂಗಳು ಪ್ರತಿಭಟಿಸುವಂತಿಲ್ಲ: ನೌಕರರ ಮೇಲೆ ಎಸ್ಮಾ!

By Web DeskFirst Published Feb 6, 2019, 3:19 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ದೇಶದೆಲ್ಲೆಡೆ ಚುನಾವಣಾ ಕಣ ರಂಗೇರಿದೆ. ಹೀಗಿರುವಾಗಲೇ ಇಲ್ಲೊಂದು ರಾಜ್ಯ ತನ್ನ ಸರ್ಕಾರಿ ನೌಕರರ ಮೇಲೆ 6 ತಿಂಗಳ ಎಸ್ಮಾ ಜಾರಿಗೊಳಿಸಿದೆ. ಈ ಮೂಲಕ ಪ್ರತಿಭಟನೆಗೆ ಕಡಿವಾಣ ಹಾಕಿದೆ. 

ಲಕ್ನೋ[ಫೆ.06]: ಉತ್ತರ ಪ್ರದೇಶದಲ್ಲಿ ಇನ್ನು 6 ತಿಂಗಳವರೆಗೆ ಯಾವುದೇ ಸರ್ಕಾರಿ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಅಥವಾ ಸರ್ಕಾರದ ವಿರುದ್ಧ ಧರಣಿ ನಡೆಸಲು ಸಾಧ್ಯವಿಲ್ಲ. ಯೋಗಿ ಸರ್ಕಾರವು ಉತ್ತರ ಪ್ರದೇಶದಲ್ಲಿ ESMA ಅಂದರೆ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ (Essential Services Maintenance Act) ಜಾರಿಗೊಳಿಸಿ ಎಲ್ಲಾ ವಿಭಾಗ ಹಾಗೂ ನಿಗಮಗಳು ನಡೆಸುವ ಪ್ರತಿಭಟನೆಗೆ ಮುಂದಿನ 6 ತಿಂಗಳವರೆಗೆ ಕಡಿವಾಣ ಹಾಕಿದೆ. ಮುಖ್ಯ ಸಚಿವ ಅನೂಪ್ ಚಂದ್ರ ಪಾಂಡೆ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.

ಅಧಿಸೂಚನೆಯ ಅನ್ವಯ ರಾಜ್ಯದ ಕಾರ್ಯ ಕಲಾಪಗಳಿಗೆ ಸಂಬಂಧಿಸಿದಂತೆ ಲೋಕಸೇವಾ ಹಾಗೂ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ನಿಗಮ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ನಡೆಯುವ ಪ್ರತಿಭಟನೆಗಳ ಮೇಲೆ ಎಸ್ಮಾ ಕಾಯ್ದೆ 1966 ಸೆಕ್ಷನ್ 3(1)ರ ಅಡಿಯಲ್ಲಿ ಮುಂದಿನ 6 ತಿಂಗಳವರೆಗೆ ನಿಯಂತ್ರಣ ಹೇರಲಾಗಿದೆ. ಎಸ್ಮಾ ಅಡಿಯಲ್ಲಿ ಅಂಚೆ ಸೇವೆ, ರೈಲ್ವೇ, ವಿಮಾನ ಸೇವೆಗಳು ಸೇರಿದಂತೆ ಇನ್ನಿತರ ಅಗತ್ಯ ಸೇವೆಗಳಿಗೆ ಸಂಬಂಧಿಸಿದ ನೌಕರರು ಸೇರುತ್ತಾರೆ. ಎಸ್ಮಾ ಜಾರಿಯಲ್ಲಿದ್ದಾಗ ನಡೆಯುವ ಪ್ರತಿಭಟನೆಗಳನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗುತ್ತದೆ ಹಾಗೂ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಎಸ್ಮಾ ಜಾರಿಗೊಳಿಸಲು ಕಾರಣವೇನು?

ಇನ್ನು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಹಲವಾರು ಸರ್ಕರಿ ನೌಕರರು ಪ್ರತಿಭಟನೆ ನಡೆಸಲು ಯೋಚಿಸಿದ್ದು, ಇದು ಸರ್ಕಾರಿ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವ ಸಾಧ್ಯತೆಗಳಿದ್ದವು ಎನ್ನಲಾಗಿದೆ. ಹಲವಾರು ನೌಕರರು ಈ ಹಿಂದಿನ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದರು. ಲೋಕಸಭಾ ಚುನಾವಣೆ ಹಾಗೂ ರಾಜ್ಯದಲ್ಲಿ ನಡೆಯುವ ಬೋರ್ಡ್ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಯೋಗಿ ಸರ್ಕಾರ ಎಸ್ಮಾ ಜಾರಿಗೊಳಿಸಿದೆ ಎನ್ನಲಾಗಿದೆ.

click me!