
ಉನ್ನಾವ್: ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ‘10 ರುಪಾಯಿ ಡಾಕ್ಟರ್’ ಮಾಡಿದ ಎಡವಟ್ಟಿನಿಂದಾಗಿ ಈಗ ಪ್ರೇಮಗಂಜ್ ಎಂಬ ಊರಿನ ಸುತ್ತಮುತ್ತ ಸುಮಾರು 5000 ಜನರು ಎಚ್‌ಐವಿ ಏಡ್ಸ್ ಸೋಂಕಿನ ಭೀತಿಯಲ್ಲಿ ಬದುಕು ಸಾಗಿಸುವಂತಾಗಿದೆ.
ಒಂದೇ ಸೂಜಿಯಿಂದ ಚುಚ್ಚಿದ ರಾಜೇಂದ್ರ ಯಾದವ್ ಎಂಬ ಡಾಕ್ಟರ್ ಸುಮಾರು 50 ಜನರಿಗೆ ಎಚ್‌ಐವಿ ವೈರಸ್ ಸೋಂಕು ತಗಲುವಂತೆ ಮಾಡಿದ್ದಾನೆಂದು ಇಲ್ಲಿಯವರೆಗೆ ಹೇಳಲಾಗುತ್ತಿತ್ತು. ಆದರೆ, ಪ್ರೇಮಗಂಜ್ ಹಾಗೂ ಸುತ್ತಮುತ್ತಲ ಊರುಗಳಲ್ಲಿ 6 ವರ್ಷದ ಮಗುವಿನಿಂದ ಹಿಡಿದು 70 ವರ್ಷದ ವೃದ್ಧೆಯವರೆಗೆ ಇನ್ನೂ ಹಲವರಲ್ಲಿ ಸೋಂಕು ಪತ್ತೆಯಾಗಿದ್ದು, ಜನರು ಎಚ್‌ಐವಿ ಏಡ್ಸ್ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೇ ಹೆದರತೊಡಗಿದ್ದಾರೆ. ಅತಿ ಹೆಚ್ಚು ಜನರಿಗೆ ಏಡ್ಸ್ ತಗಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಈ ಊರಿನಲ್ಲೇ ಎಚ್‌ಐವಿ ಪತ್ತೆ ಕ್ಯಾಂಪ್ ನಡೆಸುತ್ತಿದೆ. ಆದರೆ, ಎಲ್ಲಿ ತಮಗೂ ಏಡ್ಸ್ ಅಂಟಿದೆ ಎಂಬುದು ಪರೀಕ್ಷೆಯಿಂದ ಪತ್ತೆಯಾಗುವುದೋ ಎಂಬ ಭೀತಿಯಿಂದ ಜನರು ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಸುಮಾರು 5000 ಜನಸಂಖ್ಯೆಯಿರುವ ಪ್ರೇಮಗಂಜ್ ಹಾಗೂ ಸುತ್ತಮುತ್ತಲ ಊರುಗಳಲ್ಲಿ ಹೆಚ್ಚಿನವರು ಬಡವರೇ ಆಗಿದ್ದು, ಸಮೀಪದ ಕೃಷಿ ಮಾರುಕಟ್ಟೆಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪ್ರೇಮಗಂಜ್‌ನ ಒಬ್ಬ ಹಮಾಲಿ ದೀಪ ಚಾಂದ್ ಎಂಬಾತನ ಮನೆಯಲ್ಲಿ ಅವನಿಗೆ, ಅವನ ಪತ್ನಿಗೆ ಮತ್ತು ಮಗನಿಗೆ ಎಚ್‌ಐವಿ ಸೋಂಕು ತಗಲಿರುವುದು ಪತ್ತೆಯಾಗಿದೆ. ಅವನಿಗೆ ಇನ್ನೂ ನಾಲ್ವರು ಹೆಣ್ಣುಮಕ್ಕಳಿದ್ದು, ಅವರಿಗೆ ಪರೀಕ್ಷೆ ಮಾಡಿಸುವುದಕ್ಕೆ ಆತ ಹೆದರುತ್ತಿದ್ದಾನೆ. ‘ಚಿಕಿತ್ಸೆ ಪಡೆಯಲು 50 ಕಿ.ಮೀ. ದೂರದ ಕಾನ್ಪುರ ಎಆರ್‌ಟಿ ಕೇಂದ್ರಕ್ಕೆ ಹೋಗಬೇಕು. ಚಿಕಿತ್ಸೆ ಉಚಿತವಾದರೂ ಅಲ್ಲಿಗೆ ಇಡೀ ಕುಟುಂಬ ಓಡಾಡುವುದಕ್ಕಾದರೂ ಹಣ ಬೇಕಲ್ಲ’ ಎಂದು ಆತ ಅಳುತ್ತಾನೆ.
ಒಂದೇ ಸೂಜಿಯಿಂದ ಏಡ್ಸ್ ಹರಡಿರಲಿಕ್ಕಿಲ್ಲ : ಪ್ರೇಮಗಂಜ್ ಹಾಗೂ ಸುತ್ತಮುತ್ತಲ ಊರಿನಲ್ಲಿ ಕೇವಲ ರಾಜೇಂದ್ರ ಯಾದವ್‌ನ ಇಂಜೆಕ್ಷನ್ ಸಿರಿಂಜ್‌ನಿಂದಲೇ 50ಕ್ಕೂ ಹೆಚ್ಚು ಜನರಿಗೆ ಎಚ್‌ಐವಿ ಹರಡಿರುವ ಸಾಧ್ಯತೆಯಿಲ್ಲ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಈ ಊರಿನಲ್ಲಿ ವಲಸಿಗರ ಸಂಖ್ಯೆ ಹೆಚ್ಚಿದೆ. ಅವರಿಂದಾಗಿ ಎಚ್‌ಐವಿ ಹರಡಿರಬಹುದು. ಕೇವಲ ಒಂದು ಸೂಜಿಯಿಂದ ಅಷ್ಟೊಂದು ಜನರಿಗೆ ಎಚ್‌ಐವಿ ತಗಲುವುದು ಕಷ್ಟ. ಏಕೆಂದರೆ ಸೂಜಿಯಲ್ಲಿ ಎಚ್‌ಐವಿ ವೈರಸ್ ತಿಂಗಳುಗಟ್ಟಲೆ ಬದುಕಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.