
ಬೆಂಗಳೂರು(ಆ.16): ಒಂದೆಡೆ ಸೋಮವಾರದಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಭರ್ಜರಿ ಮಳೆ ಆರಂಭವಾಗಿದ್ದರೆ, ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಮೋಡ ಬಿತ್ತನೆ ಕಾರ್ಯಕ್ಕೆ ರಾಡಾರ್ ಬಳಕೆಗೆ ಅನುಮತಿ ಸಿಗದಿರುವುದು ದೊಡ್ಡ ತಲೆನೋವಾಗಿದೆ.
ಅನೇಕ ವರ್ಷಗಳ ನಂತರ ರಾಜ್ಯ ಸರ್ಕಾರ ಬರ ಪರಿಸ್ಥಿತಿ ಸುಧಾರಿಸಲು ಮೋಡ ಬಿತ್ತನೆಗೆ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಆದರೆ ಮೋಡಗಳ ಮಾಹಿತಿ ಸಂಗ್ರಹಿಸಿ ಕೊಡಬೇಕಾದ ರಾಡಾರ್'ಗಳನ್ನು ಬಳಸುವುದಕ್ಕೆ ಕೇಂದ್ರ ಸೀಮಾಸುಂಕ ಇಲಾಖೆ ಅಧಿಕಾರಿಗಳು ಇನ್ನೂ ಅನುಮತಿ ನೀಡಿಲ್ಲ. ಇದರಿಂದ ಆಗಸ್ಟ್ 18ಕ್ಕೆ ನಿಗದಿಯಾಗಿರುವ ಮೋಡ ಬಿತ್ತನೆ ಉದ್ಘಾಟನೆ ಕಾರ್ಯಕ್ರಮ ವಿಳಂಬವಾದರೆ ಅಚ್ಚರಿ ಇಲ್ಲ. ರಾಡಾರ್ ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲದ ಕಾರಣ ಮೋಡ ಬಿತ್ತನೆ ಕಾರ್ಯ ಆ.18ರಂದು ಇನ್ನೂ ಅಧಿಕೃತವಾಗಿ ನಿಗದಿಯಾಗಿಲ್ಲ.
ಮಳೆ ಬರಿಸುವುದಕ್ಕೂ ಜಿಎಸ್'ಟಿ ಅಡ್ಡಿ!
ಬೆಂಗಳೂರಿನ ಜಿಕೆವಿಕೆ ಬಳಿ ಸ್ಥಾಪಿಸಲುದ್ದೇಶಿಸಿರುವ ರಾಡಾರ್'ಗಳನ್ನು ಹೊಯ್ಸಳ ಕಂಪನಿ ಅಮೆರಿಕದಿಂದ 2 ತಿಂಗಳ ಲೀಸ್ ಮೇಲೆ ತಂದಿದ್ದು, ಅದಕ್ಕೆ ಶೇ.42ರಷ್ಟು (₹2.5 ಕೋಟಿ) ಜಿಎಸ್‌ಟಿ ಪಾವತಿಸಬೇಕೆಂದು ಕೇಂದ್ರದ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಆದರೆ ಇದಕ್ಕೆ ಒಪ್ಪದ ಹೊಯ್ಸಳ ಕಂಪನಿ, ರಾಡಾರ್ ಖರೀದಿಸುವ ಹಾಗಿದ್ದರೆ ಮಾರಾಟ ದರದ ಮೇಲೆ ಜಿಎಸ್'ಟಿ ಪಾವತಿಸಬೇಕಾಗುತ್ತದೆ. ಆದರೆ ಇದು ಎರಡು ತಿಂಗಳ ಮಟ್ಟಿಗೆ ಲೀಸ್ ಆಧಾರದ ಮೇಲೆ ತಂದಿರುವ ಕಾರಣ ಹೆಚ್ಚಿನ ಜಿಎಸ್'ಟಿ ಪಾವತಿಸುವ ಅಗತ್ಯವಿಲ್ಲ ಎಂದು ವಾದಿಸಿದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಡಾರ್ ಪಡೆಯಲು ಅಭಿವೃದ್ಧಿ ಆಯುಕ್ತ ವಿಜಯಭಾಸ್ಕರ್ ಅವರು ಕೇಂದ್ರ ಅಬಕಾರಿ ಅಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆಯನ್ನೂ ನಡೆಸಿದ್ದಾರೆ. ರಾಡಾರ್ ಬೆಂಗಳೂರಿಗೆ ಬರುವಂತೆಯೂ ಮಾಡಿದ್ದಾರೆ. ಈ ಸಮಸ್ಯೆ ಬುಧವಾರ ಮತ್ತು ಗುರುವಾರದ ವೇಳೆಗೆ ಪರಿಹಾರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏನಿದು ರಾಡಾರ್ ಸಮಸ್ಯೆ?
ಸುಮಾರು ₹35 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸುತ್ತಿರುವ ಸರ್ಕಾರ ಅದರ ಹೊಣೆಯನ್ನು ಹೊಯ್ಸಳ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್'ಗೆ ವಹಿಸಿದೆ. ಈ ಸಂಸ್ಥೆ ಕರಾವಳಿ, ಮಲೆನಾಡು ಹೊರತುಪಡಿಸಿ ಉಳಿದ ಬರ ಪೀಡಿತ ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಎಲ್ಲಾ ಸಿದ್ಧತೆ ನಡೆಸಿದೆ. ಮೋಡ ಬಿತ್ತನೆಗೆಂದೇ ವಿಶೇಷ ತಂತ್ರಜ್ಞಾನದೊಂದಿಗೆ ರೂಪಿಸಿರುವ ಮೂರು ವಿಮಾನಗಳನ್ನು ತರಿಸಿ ತಯಾರಿ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಮಾಹಿತಿ, ದೃಶ್ಯಗಳನ್ನು ಸಂಗ್ರಹಿಸಿ ಕೊಡಲು ರಾಜ್ಯದ ಮೂರು ಕಡೆ ರಾಡಾರ್'ಗಳನ್ನು ಸ್ಥಾಪಿಸಬೇಕಿದೆ.
ಇದಕ್ಕಾಗಿ ಗದಗ, ಯಾದಗಿರಿಯಲ್ಲಿ ರಾಡಾರ್'ಗಳ ಸ್ಥಾಪನೆ ಕಾರ್ಯವೂ ಬಹುತೇಕ ಮುಗಿದಿದೆ. ಆದರೆ ಬೆಂಗಳೂರಿನ ಜಕ್ಕೂರಿನಿಂದ ಮೋಡ ಬಿತ್ತನೆ ಆರಂಭಿಸುವ ವಿಮಾನಕ್ಕೆ ಮಾಹಿತಿ ನೀಡಲು ಜಿಕೆವಿಕೆ ಬಳಿ ರಾಡಾರ್ ಸ್ಥಾಪಿಸಲು ಸರ್ಕಾರಕ್ಕೆ ಕಷ್ಟವಾಗಿದೆ. ಅದರಿಂದಾಗಿ ಮೋಡ ಬಿತ್ತನೆ ಬಗ್ಗೆ ಅನಿಶ್ಚಿತತೆ ಮೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.