ವರ್ಷ ಕಳೆದರೂ ಉಡುಪಿ ಶಿರೂರು ಮಠಕ್ಕಿಲ್ಲ ಉತ್ತರಾಧಿಕಾರಿ!

By Web DeskFirst Published Jul 16, 2019, 4:15 PM IST
Highlights

ಶಿರೂರು ಮಠ​ಕ್ಕಿಲ್ಲ ಉತ್ತ​ರಾ​ಧಿ​ಕಾರಿ, ಶ್ರೀಗ​ಳಿ​ಗಿಲ್ಲ ಬೃಂದಾ​ವನ ಭಾಗ್ಯ!| ಶ್ರೀಲಕ್ಷೀವರ ತೀರ್ಥರು ನಿಧನರಾಗಿ ಜು.19ಕ್ಕೆ ಒಂದು ವರ್ಷ ಪೂರ್ಣ

ಸುಭಾಶ್ಚಂದ್ರ ವಾಗ್ಳೆ, ಕನ್ನ​ಡ​ಪ್ರಭ

ಉಡು​ಪಿ[ಜು.16]: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನರಾಗಿ ಜು.19ಕ್ಕೆ ಒಂದು ವರ್ಷ ಪೂರ್ಣವಾಗುತ್ತಿದೆ. ಆದರೂ ಅವರಿಗೊಬ್ಬ ಉತ್ತರಾಧಿಕಾರಿ ನೇಮಕವಾಗಿಲ್ಲ, ಅವರಿಗೊಂದು ಬೃಂದಾವನ ನಿರ್ಮಾಣವಾಗಿಲ್ಲ ಎಂಬ ಸಂಗತಿಗಳೀಗ ಚರ್ಚೆಗೆ ಗ್ರಾಸವಾಗಿದೆ. ಉಡುಪಿಯ ಅಷ್ಟಮಠಗಳ 800 ವರ್ಷಗಳಿಗೂ ಅಧಿಕ ಇತಿಹಾಸದಲ್ಲಿ ಬಹುಶಃ ವರ್ಷಗಟ್ಟಲೆ ಮಠಾಧೀಶರಿಲ್ಲದೆ ಪೀಠ ಖಾಲಿ ಬಿದ್ದಿರುವುದು ಇದೇ ಪ್ರಥಮ. ಬೃಂದಾವನ ಇಲ್ಲದೆ ಪ್ರಥಮ ಪುಣ್ಯಾರಾಧನೆ ನಡೆಯುತ್ತಿರುವುದು ಕೂಡ ಪ್ರಥಮವಾಗಿದೆ.

ಶಿರೂರು ಶ್ರೀಗಳು 2018 ಜು.19ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ನಂತರ ಶಿರೂರು ಮಠದ ಉಸ್ತುವಾರಿಯನ್ನು ಸಂಪ್ರದಾಯದಂತೆ ದ್ವಂದ್ವ ಮಠವಾದ ಸೋದೆ ಮಠ ವಹಿಸಿಕೊಂಡಿತ್ತು. ಶಿರೂರು ಮಠಕ್ಕೆ ನೂತನ ಮಠಾಧೀಶರನ್ನು ನೇಮಿಸುವ ಹೊಣೆ ಸೋದೆ ಮಠದ್ದಾಗಿತ್ತು.

ಈ ಬಗ್ಗೆ ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥರು, ಶಿರೂರು ಮಠ ಬಹಳ ದೊಡ್ಡ ಆರ್ಥಿಕ ಸಂಕಷ್ಟದಲ್ಲಿದೆ. ಶಿರೂರು ಶ್ರೀಗಳು ಬ್ಯಾಂಕುಗಳಲ್ಲಿ 15 ಕೋಟಿ ರು. ಸಾಲ ಮಾಡಿದ್ದಾರೆ. ಇದೆಲ್ಲಾ ಇತ್ಯರ್ಥವಾಗದೆ ಉತ್ತರಾಧಿಕಾರಿಯನ್ನು ನೇಮಿಸಿದರೆ ಅವರು ಅಧ್ಯಾತ್ಮ ಸಾಧನೆ ಮಾಡದೆ, ಕೋರ್ಟು ಕಚೇರಿ ಅಲೆಯಬೇಕಾದೀತು. ಆದ್ದರಿಂದ ಆರ್ಥಿಕ ಜಂಜಾಟಗಳು ಮುಗಿಯದೇ ಉತ್ತರಾಧಿಕಾರಿಯನ್ನು ನೇಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇವೇಳೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಉತ್ತರಾಧಿಕಾರಿ ನೇಮಕವಾಗದೆ ಇರುವುದರಿಂದಲೇ ಬೃಂದಾವನ ನಿರ್ಮಾಣ ಕೂಡ ಮುಂದಕ್ಕೆ ಹೋಗಿದೆ ಎಂದು ತಿಳಿಸಿದ್ದಾರೆ.

click me!