ಹೊಸ ಕ್ರಾಂತಿ..! ಅತೀ ಶೀಘ್ರದಲ್ಲೇ ಊಬರ್'ನಿಂದ ಹಾರುವ ಟ್ಯಾಕ್ಸಿಗಳು

By Suvarna Web DeskFirst Published Nov 9, 2017, 1:13 PM IST
Highlights

* 2020ರಲ್ಲಿ ಅಮೆರಿಕದಲ್ಲಿ ಹಾರುವ ಕಾರುಗಳ ಪ್ರಾಯೋಗಿಕ ಸಂಚಾರ

* ಊಬರ್ ಮತ್ತು ನಾಸಾದಿಂದ ಜಂಟಿಯಾಗಿ ಹಾರುವ ಟ್ಯಾಕ್ಸಿಗಳ ಅಭಿವೃದ್ಧಿ

* ಮಾಮೂಲಿಯ ಟ್ಯಾಕ್ಸಿ ರೇಟ್'ನಲ್ಲೇ ಫ್ಲೈಯಿಂಗ್ ಕಾರುಗಳ ಸೇವೆ

ಬೆಂಗಳೂರು(ನ. 09): ನಾವೆಲ್ಲಾ ಸಿಟಿ ಟ್ರಾಫಿಕ್'ನಲ್ಲಿ ಸಿಲುಕಿಕೊಂಡು ವಿಲವಿಲ ಒದ್ದಾಡುವಾಗ, ಅಯ್ಯೋ ಆಕಾಶದಲ್ಲಿ ಹಾರುವ ಕಾರು, ಸ್ಕೂಟರು ಇದ್ದಿದ್ದರೆ ಎಷ್ಟು ಚೆನ್ನಾಗಿತ್ತೆಂದು ಅದೆಷ್ಟು ಬಾರಿ ಅಂದುಕೊಂಡಿಲ್ಲಾ? ನಮ್ಮ ಆ ಕನಸು ಶೀಘ್ರದಲ್ಲೇ ನನಸಾಗಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಹಾರು ಟ್ಯಾಕ್ಸಿಗಳು ನಗರಗಳಲ್ಲಿ ಸಂಚರಿಸಲಿವೆ. ವಿಶ್ವದ ನಂ.1 ಆನ್'ಲೈನ್ ಟ್ಯಾಕ್ಸಿ ಕಂಪನಿ ಊಬರ್ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಜಂಟಿಯಾಗಿ ಈ ಟ್ಯಾಕ್ಸಿಗಳನ್ನು ಅಭಿವೃದ್ಧಿಪಡಿಸಲಿವೆ. ಊಬರ್ ಸಂಸ್ಥೆ ನೀಡಿರುವ ಹೇಳಿಕೆ ಪ್ರಕಾರ 2020ರಲ್ಲಿ ಲಾಸ್ ಏಂಜಲಿಸ್, ದುಬೈ, ಟೆಕ್ಸಾಸ್ ಮೊದಲಾದ ಕೆಲ ಆಯ್ದ ನಗರಗಳಲ್ಲಿ ಹಾರುವ ವಾಹನಗಳನ್ನು ಪ್ರಾಯೋಗಿಕವಾಗಿ ಓಡಿಸಲಾಗುತ್ತದೆ. 2023ರಲ್ಲಿ ಪೂರ್ಣಪ್ರಮಾಣವಾಗಿ ಅವು ಸಂಚಾರ ಮಾಡಲಿವೆ. ಆ ಬಳಿಕ ಭಾರತ ಸೇರಿದಂತೆ ವಿಶ್ವಾದ್ಯಂತ ಸೇವೆ ವಿಸ್ತರಣೆಯಾಗಲಿದೆ.

ದುಬಾರಿ ಇರೋದಿಲ್ಲ:
ಹಾರುವ ಕಾರು ಎಂದರೆ ವಿಮಾನದಷ್ಟು ಬೆಲೆ ತೆರಬೇಕಾದೀತು ಎಂದುಕೊಂಡಿರಾ..? ಊಬರ್ ಹೇಳಿಕೊಂಡಿರುವ ಪ್ರಕಾರ, ಮಾಮೂಲಿಯ ಟ್ಯಾಕ್ಸಿ ದರದ ಆಸುಪಾಸಿನ ಬೆಲೆಗೆ ಹಾರುವ ಟ್ಯಾಕ್ಸಿಗಳು ಲಭ್ಯವಿರಲಿವೆ. 2023ರಲ್ಲಿ ಕಮರ್ಷಿಯಲ್ ಸೇವೆ ಪ್ರಾರಂಭವಾಗುತ್ತದೆ. ಒಲಾ, ಊಬರ್ ಟ್ಯಾಕ್ಸಿ ಬುಕ್ ಮಾಡಿದಂತೆಯೇ ಫ್ಲೈಯಿಂಗ್ ಕಾರುಗಳನ್ನೂ ಬುಕ್ ಮಾಡಬಹುದಾಗಿದೆ.

ಫ್ಲೈಯಿಂಗ್ ಕಾರುಗಳು ಎಲೆಕ್ಟ್ರಿಕ್ ಬ್ಯಾಟರಿಯ ಶಕ್ತಿ ಹೊಂದಿರುತ್ತವೆ. ರಸ್ತೆ ಮೇಲೆ ಸಾಗುವುದಕ್ಕಿಂತ 3 ಪಟ್ಟು ಕಡಿಮೆ ಸಮಯದಲ್ಲಿ ಹಾರುವ ಕಾರುಗಳು ಚಲಿಸುತ್ತವೆಯಂತೆ.

click me!