ಉಲ್ಟಾ ಹೊಡೆದ್ರಾ ಉ. ಕೊರೆಯಾ ಸರ್ವಾಧಿಕಾರಿ..?

Published : May 17, 2018, 11:27 AM IST
ಉಲ್ಟಾ ಹೊಡೆದ್ರಾ ಉ. ಕೊರೆಯಾ ಸರ್ವಾಧಿಕಾರಿ..?

ಸಾರಾಂಶ

ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ವಾಯು ಸೇನೆಗಳು ದಕ್ಷಿಣ ಕೊರಿಯಾದ ಆಗಸದಲ್ಲಿ ಮ್ಯಾಕ್ಸ್ ಥಂಡರ್ ಎಂಬ ಸಮರಾಭ್ಯಾಸ ನಡೆಸುತ್ತಿವೆ. ಕಳೆದ ತಿಂಗಳು ತಾನು ದಕ್ಷಿಣ ಕೊರಿಯಾ ಜೊತೆ ಐತಿಹಾಸಿಕ ಶಾಂತಿ ಮಾತುಕತೆಯ ಒಪ್ಪಂದಕ್ಕೆ ಸಹಿ ಹಾಕಿದ ಮೇಲೂ ಈ ಸಮರಾಭ್ಯಾಸ ಏಕೆ ನಡೆಯುತ್ತಿದೆ ಎಂದು ಕಿಮ್ ಸಿಟ್ಟಾಗಿದ್ದಾರೆ.

ಸೋಲ್[ಮೇ.17]: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಜೊತೆಗೆ ಶಾಂತಿ ಮಾತುಕತೆಗೆ ಒಪ್ಪುವ ಮೂಲಕ ಕೊನೆಗೂ ಮೆತ್ತಗಾಗಿದ್ದಾರೆ ಎಂದೇ ಜಗತ್ತು ಭಾವಿಸಿತ್ತು. ಆದರೆ, ಇದೀಗ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ನಡುವಿನ ಜಂಟಿ ಸಮರಾಭ್ಯಾಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಿಮ್, ದಿಢೀರನೆ ದಕ್ಷಿಣ ಕೊರಿಯಾ ಜೊತೆ ಬುಧವಾರ ನಡೆಯಬೇಕಿದ್ದ ಶಾಂತಿ ಮಾತು ಕತೆಯನ್ನು ಅಮಾನತಿನಲ್ಲಿರಿಸಿದ್ದಾರೆ. 
ಅದರೊಂದಿಗೆ, ಮುಂದಿನ ತಿಂಗಳು ಸಿಂಗಾಪುರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಕಿಮ್ ನಡುವೆ ನಡೆಯಬೇಕಿದ್ದ ಶೃಂಗ ಸಭೆ ನಡೆಯುತ್ತದೆಯೇ ಇಲ್ಲವೇ ಎಂಬ ಅನುಮಾನ ಮೂಡತೊಡಗಿದೆ. ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ವಾಯು ಸೇನೆಗಳು ದಕ್ಷಿಣ ಕೊರಿಯಾದ ಆಗಸದಲ್ಲಿ ಮ್ಯಾಕ್ಸ್ ಥಂಡರ್ ಎಂಬ ಸಮರಾಭ್ಯಾಸ ನಡೆಸುತ್ತಿವೆ. ಕಳೆದ ತಿಂಗಳು ತಾನು ದಕ್ಷಿಣ ಕೊರಿಯಾ ಜೊತೆ ಐತಿಹಾಸಿಕ ಶಾಂತಿ ಮಾತುಕತೆಯ ಒಪ್ಪಂದಕ್ಕೆ ಸಹಿ ಹಾಕಿದ ಮೇಲೂ ಈ ಸಮರಾಭ್ಯಾಸ ಏಕೆ ನಡೆಯುತ್ತಿದೆ ಎಂದು ಕಿಮ್ ಸಿಟ್ಟಾಗಿದ್ದಾರೆ. ಇದು ಉತ್ತರ ಕೊರಿಯಾವನ್ನು ಗುರಿಯಾಗಿಸಿಕೊಂಡೇ ನಡೆಸುತ್ತಿರುವ ಸಮರಾಭ್ಯಾಸ ಎಂದು ಅವರು ಭಾವಿಸಿದ್ದು, ಈ ಬಗ್ಗೆ ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆಯಾಗಿರುವ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
‘ಕೊರಿಯನ್ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ನಡೆಯುತ್ತಿರುವ ಧನಾತ್ಮಕ ಬೆಳವಣಿಗೆಗಳಿಗೆ ಈ ಸಮಾರಾಭ್ಯಾಸ ಸವಾಲು ಎಸೆಯುವಂತಿದೆ. ಅಮೆರಿಕ ಕೂಡ ಮುಂದಿನ ತಿಂಗಳ ಕೊರಿಯಾ-ಅಮೆರಿಕದ ಶೃಂಗದ ಹಿನ್ನೆಲೆ ಎಚ್ಚರಿಕೆಯ ಹೆಜ್ಜೆಯಿಡಬೇಕು’ ಎಂದು ಕಿಮ್ ಪ್ರಕಟಣೆ ಹೊರಡಿಸಿದ್ದಾರೆ. ಅಷ್ಟೇ ಅಲ್ಲ, ದಕ್ಷಿಣ ಕೊರಿಯಾ ಜೊತೆ ಬುಧವಾರ ನಡೆಯಬೇಕಿದ್ದ ಸಚಿವರ ಮಟ್ಟದ ಶಾಂತಿ ಮಾತುಕತೆ ಹಠಾತ್ತನೇ ಮುಂದೂಡಿದ್ದಾರೆ. ಹೀಗಾಗಿ ಮುಂದಿನ ತಿಂಗಳು ಜೂನ್ 12ಕ್ಕೆ ಸಿಂಗಾಪುರದಲ್ಲಿ ನಡೆಯಬೇಕಿದ್ದ ಟ್ರಂಪ್ ಹಾಗೂ ಕಿಮ್ ಭೇಟಿ ನಡೆಯುತ್ತದೆಯೇ? ಕಿಮ್ ಈ ಹಿಂದೆ ಹೇಳಿದಂತೆ ತಮ್ಮ ದೇಶದಲ್ಲಿನ ಪರಮಾಣು ಪರೀಕ್ಷಾ ಕೇಂದ್ರ ನಾಶಪಡಿಸುತ್ತಾರೆಯೇ ಎಂಬ ಅನುಮಾನ ಮೂಡಿದೆ.
ಕಿಮ್ ಹೇಳಿಕೆಗೆ ಅಮೆರಿಕ ಪ್ರತಿಕ್ರಿಯಿಸಿದ್ದು, ‘ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಜಂಟಿ ಸಮರಾಭ್ಯಾಸ ನಿಲ್ಲಿಸಲು ಕಿಮ್ ಹೇಳಿರಲಿಲ್ಲ. ಇದು ಕೊರಿಯನ್ ಪ್ರದೇಶದ ಸುರಕ್ಷತೆಗಾಗಿ ನಡೆಸುತ್ತಿರುವ ಸಮರಾಭ್ಯಾಸವಾದ್ದರಿಂದ ಅವರ ಸಹಮತ ಇದಕ್ಕಿದೆ ಎಂದೇ ಭಾವಿಸಿದ್ದೇವೆ’ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು