ಗೌರಿ ಹಂತಕನ ವಿಚಾರಣೆ : ಎಸ್ ಐಟಿ ವಿಚಾರಣೆ ವೇಳೆ ಮತ್ತೊಂದು ಸ್ಫೋಟಕ ಸಂಗತಿ ಬಯಲು

First Published Jun 25, 2018, 7:40 AM IST
Highlights

ಬಲಪಂಥೀಯ ಹಾಗೂ ಹಿಂದು ವಿರೋಧಿ ನೀತಿ ತಾಳುವವರ ವಿರುದ್ಧ ಹದ್ದಿನ ಕಣ್ಣಿಡಲು ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಯುವಕರಿಗೆ ಶಂಕಿತ ಶೂಟರ್ ಪರಶುರಾಮ್ ವಾಗ್ಮೋರೆಗೆ ನೀಡಿರುವ ಮಾದರಿಯಲ್ಲೇ ತರಬೇತಿ ನೀಡಲಾಗಿದೆ ಎಂಬ ಆತಂಕಕಾರಿ ಮಾಹಿತಿ ವಿಶೇಷ ತನಿಖಾತಂಡದ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಎನ್. ಲಕ್ಷ್ಮಣ್

ಬೆಂಗಳೂರು :  ಬಲಪಂಥೀಯ ಹಾಗೂ ಹಿಂದು ವಿರೋಧಿ ನೀತಿ ತಾಳುವವರ ವಿರುದ್ಧ ಹದ್ದಿನ ಕಣ್ಣಿಡಲು ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಯುವಕರಿಗೆ ಶಂಕಿತ ಶೂಟರ್ ಪರಶುರಾಮ್ ವಾಗ್ಮೋರೆಗೆ ನೀಡಿರುವ ಮಾದರಿಯಲ್ಲೇ ತರಬೇತಿ ನೀಡಲಾಗಿದೆ ಎಂಬ ಆತಂಕಕಾರಿ ಮಾಹಿತಿ ವಿಶೇಷ ತನಿಖಾತಂಡದ ತನಿಖೆ ವೇಳೆ ಬೆಳಕಿಗೆ ಬಂದಿದೆ. 

ಕೇವಲ ಕರ್ನಾಟಕ, ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ದೇಶದ ಉದ್ದಗಲಕ್ಕೂ ಇವರ ಜಾಲ ಹರಡಿದೆ ಎಂಬ ಈ ಆಘಾತಕಾರಿ ವಿಷಯ ತನಿಖಾಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದೆ. ಬಲಪಂಥೀಯ ವಿಚಾರಧಾರೆ ವಿರೋಧಿಸು ಪ್ರಗತಿಪರ ಚಿಂತಕರೇ ಈ ಗುಂಪಿನ ನೇರ ಗುರಿಯಾಗಿದ್ದಾರೆ. ದೇಶದ ಪ್ರತಿ ರಾಜ್ಯದಲ್ಲಿ ಕೆಲ ಆಯ್ದ ಧೈರ್ಯಶಾಲಿ ಹಿಂದೂ ಕಾರ್ಯಕರ್ತರನ್ನು ತರಬೇತಿ ನೀಡಿ ಸಜ್ಜು ಗೊಳಿಸಲಾಗಿದೆ ಎಂದು ಎಸ್‌ಐಟಿಯ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿದೆ. 

ಕಳೆದ ಹತ್ತು ವರ್ಷಗಳಲ್ಲಿ ಮಹಾರಾಷ್ಟ್ರದ 500, ಉತ್ತರ ಪ್ರದೇಶದ 100, ಗುಜರಾತ್‌ನ 100, ಕರ್ನಾಟಕದ 12 ಮಂದಿ ಸೇರಿದಂತೆ ದೇಶದಾದ್ಯಂತ ಸುಮಾರು ಸಾವಿರಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಲಾಗಿದೆ. ಈ ಯುವಕರಿಗೆ ತರಬೇತಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ನೀಡಲಾಗುತ್ತಿತ್ತು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಯುವಕರ ಆಯ್ಕೆ: ಹೀಗೆ ತರಬೇತಿ ನೀಡುವ ತಂಡದವರು ಪ್ರತಿ ರಾಜ್ಯಗಳಲ್ಲಿ ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯವಾಗಿರುವ  ಯುವಕರ ಮೇಲೆ ನಿಗಾ ಇಡುತ್ತಿದ್ದರು. ಹೆಚ್ಚು ಚಟುವಟಿಕೆಯಿಂದ ಇರುವ, ಮುನ್ನುಗ್ಗುವ, ಧೈರ್ಯವಾಗಿ ಮಾತನಾಡುವ ಕಾರ್ಯಕರ್ತರ ಮಾಹಿತಿ ಸಂಗ್ರಹಿಸುತ್ತಿದ್ದರು. ಬಳಿಕ ಆಯ್ದ ಯುವಕರನ್ನು ಗೋವಾಕ್ಕೆ ಕರೆದೊಯ್ದು ಸಭೆಯಲ್ಲಿ ಮಾತನಾಡಲು ಅವಕಾಶ  ನೀಡುತ್ತಿದ್ದರು. 

ಇವರ ಚಟುವಟಿಕೆಯನ್ನು ಕಂಡ ಬಳಿಕ ನೇರವಾಗಿ ತಂಡದ ಮುಖ್ಯಸ್ಥರು ಯುವಕರೊಂದಿಗೆ ಮಾತನಾಡುತ್ತಿದ್ದರು. ಯುವಕರು  ಬಿಕಸ್ಥರು ಎಂಬುದು ಖಾತ್ರಿಯಾದ ಬಳಿಕ ಅಂತಹ ಯುವಕರನ್ನು ಮಾಮೂಲಿ ಹಿಂದು ಪರ ಸಂಘಟನೆಯಿಂದ ಹೊರಗಿಟ್ಟು ಬೇರೆ ರೀತಿಯ ಕೃತ್ಯದ ಬಗ್ಗೆ ತರಬೇತಿ ನೀಡುತ್ತಿದ್ದರು ಎಂದು ತಿಳಿದುಬಂದಿದೆ. 

ಈ ವೇಳೆ ಧರ್ಮ ರಕ್ಷಣೆ, ಹಿಂದೂ ವಿರೋಧಿಗಳನ್ನು ಮಟ್ಟ ಹಾಕುವುದು, ಬಲಪಂಥೀಯ ವಿಚಾರಧಾರೆ ವಿರೋಧಿಸುವವರನ್ನು  ನಿರ್ನಾಮ ಮಾಡಿ ಎಂದು ಅವರನ್ನು ಸಜ್ಜುಗೊಳಿಸಲು ಮಾನಸಿಕವಾಗಿ ತಯಾರು ಮಾಡಲಾಗುತ್ತಿತ್ತು. ಅಂತೆಯೇ ಇವರಿಗೆ ಅಜ್ಞಾತ
ಸ್ಥಳದಲ್ಲಿ ಕರೆದೊಯ್ದು ಪಿಸ್ತೂಲ್ ತರಬೇತಿ ನೀಡುತ್ತಿದ್ದರು. ತರಬೇತಿ ಬಳಿಕ ತಮ್ಮ ರಾಜ್ಯಗಳಿಗೆ ಹೋಗಿ ಪ್ರತ್ಯೇಕ ಸಂಘಟನೆ ಕಟ್ಟಿಕೊಂಡು ಹೋರಾಟ ನಡೆಸುವಂತೆ ಪ್ರೇರೇಪಿಸುತ್ತಿದ್ದರು ಎಂದು ವಿಶೇಷ ತನಿಖಾ ತಂಡದ ಉನ್ನತ ಮೂಲಗಳು ಮಾಹಿತಿ ನೀಡಿದೆ.

ಮಂದಗತಿಯಲ್ಲಿ ಇದ್ದ ಇಂತಹ ಚಟುವಟಿಕೆಗಳು 2008 ರ ಮುಂಬೈ ಸ್ಫೋಟದ ನಂತರ ತೀವ್ರಗೊಂಡವು, ಮುಂಬೈ ಸ್ಫೋಟದ ಬಳಿಕ ದೇಶದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಯುವಕರನ್ನು ಸಜ್ಜುಗೊಳಿಸಲಾಗಿದೆ. ಕಳೆದ 10 ವರ್ಷಗಳಲ್ಲಿ ಈ ಸಂಘಟನೆಯಲ್ಲಿನ ಅಗೋಚರ ವ್ಯಕ್ತಿಗಳು ಬಲಿಷ್ಠವಾಗಿದ್ದಾರೆ. ತಮ್ಮ ಸಂಘಟನೆ ಹಾಗೂ ಕಾರ್ಯಕರ್ತರ ಪಡೆಯ ಬೇರುಗಳನ್ನು ಅನೇಕ ಕಡೆ ಹರಡುವಲ್ಲಿ ಯಶಸ್ವಿಯಾಗಿದ್ದಾರೆ. 

ಎಷ್ಟರ ಮಟ್ಟಿಗೆ ಎಂದರೆ ಈ ಹಿಂದೆ ಗೋವಿಂದ ಪಾನ್ಸರೆ ಹತ್ಯೆಯ ತನಿಖೆ ನಡೆಸುತ್ತಿದ್ದ ಎಸ್ಪಿ ದರ್ಜೆಯ (ಐಪಿಎಸ್) ಅಧಿಕಾರಿ ಹತ್ಯೆಗೂ ಆರೋಪಿಗಳು ಸಂಚು ರೂಪಿಸಿದ್ದರು ಎಂದು ಮೂಲಗಳು ವಿವರಿಸಿವೆ. ಇಂತಹ ಸಂಘಟನೆ ತನ್ನ ಚಟುವಟಿಕೆ ಮುಂದುವರೆಸುವ ಸಂದರ್ಭದಲ್ಲಿ ರಾಜ್ಯದಲ್ಲಿ ವಿಜಯಪುರದ ಸಿಂದಗಿಯ ಪರುಶರಾಮ್ ವಾಗ್ಮೋರೆ ಮೇಲೆ ಕಣ್ಣಿಟ್ಟಿತ್ತು. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎರಡನೇ ಆರೋಪಿ ಶಿಕಾರಿಪುರದ ಕಪ್ಪನಹಳ್ಳಿಯ ಸುಜೀತ್‌ಕುಮಾರ್ ಅಲಿಯಾಸ್ ಪ್ರವೀಣ್, ವಾಗ್ಮೋರೆಯ ಚಟುವಟಿಕೆಯ ಮೇಲೆ ಕಣ್ಣಿಟ್ಟಿದ್ದ. 

ವಾಗ್ಮೋರೆ ಯಾರ ಬಳಿಯೂ ಯಾವುದೇ ವಿಚಾರವನ್ನು ಬಾಯ್ಬಿಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಆರು ತಿಂಗಳ ಬಳಿಕವೇ ಆತನನ್ನು ಕೃತ್ಯಕ್ಕೆ ನೇಮಿಸಲಾಗಿತ್ತು. ಅಂತೆಯೇ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಸೇರಿ 12  ಮಂದಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿವೆ.

click me!