ನಾಗರಿಕರೊಬ್ಬರ ಸಾಹಸ ಪ್ರಜ್ಞೆಯಿಂದ ತಪ್ಪಿತು ಭಾರೀ ರೈಲು ದುರಂತ

By Web DeskFirst Published Oct 29, 2018, 3:58 PM IST
Highlights

ಸೊಂಟದ ನೋವಿನ ನಡುವೆಯೂ 3 ಕಿ.ಮೀ ಓಡಿ ಹೋಗಿ ರೈಲು ದುರಂತವನ್ನು ತಪ್ಪಿಸಿದ್ದಾರೆ. ಯಾರು ಆ ಸಾಹಸ ಮಹಿ? ಇಲ್ಲಿದೆ ಫುಲ್ ಡಿಟೇಲ್ಸ್.

ಉಡುಪಿ, (ಅ.29): ಜಾಗೃತ ನಾಗರಿಕ ಸಮಾಜಕ್ಕೆ ಎಂತಹ ಕೊಡುಗೆಗಳನ್ನು ನೀಡಬಲ್ಲ ಎನ್ನುವುದಕ್ಕೆ ಉಡುಪಿ ಸಮೀಪದ ಕೊರಂಗ್ರಪಾಡಿಯ ನಿವಾಸಿ ಕೃಷ್ಣ ಪೂಜಾರಿ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.

ಅನಾರೋಗ್ಯದ ನಡುವೆಯೂ ಅವರ ಸಮಯಪ್ರಜ್ಞೆ ಮತ್ತು ಸಾಹಸ ಪ್ರಜ್ಞೆಯಿಂದಾಗಿ ಸಂಭಾವ್ಯ ರೈಲು ದುರಂತವೊಂದು ತಪ್ಪಿದೆ.

ಸೊಂಟದ ನೋವಿನಿಂದ ಬಳಲುತ್ತಿರುವ ಅವರು ವೈದ್ಯರ ಸಲಹೆಯಂತೆ ನಿತ್ಯ ಮುಂಜಾನೆ ವಾಯುವಿಹಾರಕ್ಕೆ ಹೋಗುತ್ತಿದ್ದಾರೆ. ಅದರಂತೆ ಶನಿವಾರ ಮುಂಜಾನೆ ವಾಯುವಿಹಾರಕ್ಕೆ ಹೋಗಿದ್ದಾಗ ರೈಲು ಹಳಿಯ ಜೋಡಣೆ ಬಿರುಕು ಬಿಟ್ಟಿದ್ದನ್ನು ಗಮನಿಸಿದರು.

ಅದೇ ಹೊತ್ತಿನಲ್ಲಿ ಹಳಿಗಳ ಮೇಲೆ ರೈಲೊಂದು ಹಾದು ಹೋಯಿತು, ಇದರಿಂದ ಕೃಷ್ಣ ಪೂಜಾರಿ ಅವರಿಗೆ ಆತಂಕ ಉಂಟಾಯಿತಾದರೂ ರೈಲಿಗೆ ಯಾವುದೇ ಅಪಾಯ ಸಂಭವಿಸಲಿಲ್ಲ.

ಆದರೆ ಹಳಿಯ ಬಿರುಕು ಇನ್ನೂ ಗಣನೀಯವಾಗಿ ದೊಡ್ಡದಾಯಿತು. ಇದರಿಂದ ಉಂಟಾಗಬಹುದಾದ ಅಪಾಯವನ್ನು ಊಹಿಸಿದ ಅವರು ರೈಲು ಅಧಿಕಾರಿಗಳಿಗೆ ಮಾಹಿತಿ ನೀಡಲು ಯೋಚಿಸಿದರು.

ಆದರೆ ರೈಲು ನಿಲ್ದಾಣ 3 ಕಿಮಿ ದೂರದಲ್ಲಿತ್ತು, ಜೊತೆಗೆ ತಮ್ಮ ವಿಪರೀತ ಸೊಂಟ ನೋವು, ಆದರೂ ರೈಲು ದುರಂತವನ್ನು ತಪ್ಪಿಸುವುದಕ್ಕಾಗಿ ಅವರು ರೈಲು ಹಳಿಯ ಪಕ್ಕದಲ್ಲಿಯೇ ನಿಲ್ದಾಣದತ್ತ ಸುಮಾರು ಕಾಲು ಗಂಟೆ ಓಡಿದ ಅವರು ನಿಲ್ದಾಣದಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಕೆಲವೇ ನಿಮಿಷಗಳಲ್ಲಿ ಅದೇ ಹಳಿಗಳ ಮೇಲೆ ಅತ್ತ ಕಾರವಾರದಿಂದ ಮತ್ತು ಇತ್ತ ಮಂಗಳೂರು ಕಡೆಯಿಂದ 2 ರೈಲುಗಳು ಹಾದು ಹೋಗುವುದಿತ್ತು, ತಕ್ಷಣ ಅಧಿಕಾರಿಗಳು ಸಂದೇಶ ಕಳುಹಿಸಿ ಅವೆರಡೂ ರೈಲುಗಳನ್ನು ಆಯಾ ನಿಲ್ದಾಣದಲ್ಲಿಯೇ ನಿಲ್ಲಿಸಿದರು.

ಇಲಾಖೆಯ ಇಂಜಿನಿಯರುಗಳು ಕೃಷ್ಣ ಪೂಜಾರಿ ಅವರನ್ನು ರೈಲು ದುರಸ್ತಿ ವಾಹನದಲ್ಲಿ ಸ್ಥಳಕ್ಕೆ ಕರೆದುಕೊಂಡು ಬಿರುಕನ್ನು ಸರಿಪಡಿಸಿದರು.

ಕೃಷ್ಣ ಪೂಜಾರಿ ಅವರ ನಾಗರಿಕ ಪ್ರಜ್ಞೆಯಿಂದಾಗಿ ಕೇವಲ 40 ನಿಮಿಷಗಳೊಳಗಾಗಿ ಹಳಿಯ ಬಿರುಕನ್ನು ಸರಿಪಡಿಸಲಾಗಿದೆ ಮತ್ತು ಯಥಾಪ್ರಕಾರ ಹಳಿಗಳ ಮೇಲೆ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ರೈಲು ಅಧಿಕಾರಿಗಳು ಕೃಷ್ಣ ಪೂಜಾರಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ತಮ್ಮಿಂದ ಆಗಿರುವ ಈ ಉಪಕಾರಕ್ಕೆ ಕೃಷ್ಣ ಪೂಜಾರಿ ಅವರು ಸೊಂಟದ ನೋವಿನ ನಡುವೆಯೂ ಸಂತಸ ವ್ಯಕ್ತಪಡಿಸಿದ್ದಾರೆ.

click me!